ವಿಶ್ವ ಚೆಸ್‌: 2ನೇ ಸುತ್ತಲ್ಲಿ ಡ್ರಾ ಸಾಧಿಸಿದ ಗುಕೇಶ್‌

| Published : Nov 27 2024, 01:00 AM IST

ಸಾರಾಂಶ

ಕಪ್ಪು ಕಾಯಿಗಳೊಂದಿಗೆ ಆಡಿ ಡ್ರಾ ಸಾಧಿಸಿದ ಗುಕೇಶ್‌. ಭಾರತೀಯ ಗ್ರ್ಯಾಂಡ್‌ ಮಾಸ್ಟರ್‌ ಬಳಿ ಈಗ 0.5 ಅಂಕ. ಹಾಲಿ ವಿಶ್ವ ಚಾಂಪಿಯನ್‌ ಡಿಂಗ್‌ ಲಿರೆನ್‌ ಬಳಿ 1.5 ಅಂಕ.

ಸಿಂಗಾಪುರ: ಇಲ್ಲಿ ನಡೆಯುತ್ತಿರುವ ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಡಿ. ಗುಕೇಶ್‌ 2ನೇ ಸುತ್ತಿನಲ್ಲಿ ಚೀನಾದ ಡಿಂಗ್‌ ಲಿರೆನ್‌ ವಿರುದ್ಧ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೋಮವಾರ ಮೊದಲ ಸುತ್ತಿನಲ್ಲಿ ಸೋತು ನಿರಾಸೆ ಅನುಭವಿಸಿದ್ದ ಗುಕೇಶ್‌, ಮಂಗಳವಾರ ಕಪ್ಪು ಕಾಯಿಗಳೊಂದಿಗೆ ಆಡಿದರು. 23 ನಡೆಗಳ ಬಳಿಕ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಉಭಯ ಆಟಗಾರರು ನಿರ್ಧರಿಸಿದರು. 2 ಸುತ್ತುಗಳ ಮುಕ್ತಾಯಕ್ಕೆ ಗುಕೇಶ್‌ 0.5 ಅಂಕ ಹೊಂದಿದ್ದು, ಲಿರೆನ್‌ 1.5 ಅಂಕ ಕಲೆಹಾಕಿದ್ದಾರೆ.

ಮೊದಲು 7.5 ಅಂಕ ತಲುಪುವ ಆಟಗಾರ ಚಾಂಪಿಯನ್‌ ಆಗಿ ಹೊರಹೊಮ್ಮಲಿದ್ದಾರೆ. 2ನೇ ಸುತ್ತಿನ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಗುಕೇಶ್‌, ‘ಕಪ್ಪು ಕಾಯಿಗಳೊಂದಿಗೆ ಆಡಿ, ವಿಶ್ವ ಚಾಂಪಿಯನ್‌ಶಿಪ್‌ ಪಂದ್ಯದಲ್ಲಿ ಡ್ರಾ ಸಾಧಿಸುವುದು ಸುಲಭದ ಮಾತಲ್ಲ. ಈ ಫಲಿತಾಂಶದ ಬಗ್ಗೆ ನನಗೆ ಸಮಾಧಾನವಿದೆ’ ಎಂದರು. ಪಂದ್ಯದಲ್ಲಿ ಒಟ್ಟು 14 ಸುತ್ತುಗಳು ಇರಲಿವೆ.