ಸಾರಾಂಶ
ಹುಬ್ಬಳ್ಳಿ: 58ನೇ ರಾಜ್ಯ ಮಟ್ಟದ ಕ್ರಾಸ್ ಕಂಟ್ರಿ (ಗುಡ್ಡಗಾಡು) ಓಟ ಸ್ಪರ್ಧೆಯಲ್ಲಿ ಪುರುಷ ಹಾಗೂ ಮಹಿಳೆಯರ 10 ಕಿ.ಮೀ. ಸ್ಪರ್ಧೆಯಲ್ಲಿ ಕ್ರಮವಾಗಿ ತುಮಕೂರಿನ ಗುರುಪ್ರಸಾದ್, ಮೈಸೂರಿನ ಅರ್ಚನಾ ಮೊದಲ ಸ್ಥಾನ ಪಡೆದರು. ಭಾನುವಾರ ನಡೆದ ಸ್ಪರ್ಧೆಯಲ್ಲಿ ಗುರುಪ್ರಸಾದ್, 30 ನಿಮಿಷ 6.02 ಸೆಕೆಂಡ್‌ಗಳಲ್ಲಿ ಓಟ ಪೂರ್ಣಗೊಳಿಸಿದರೆ, ಅರ್ಚನಾ 36 ನಿಮಿಷ 6.03 ಸೆಕೆಂಡ್‌ಗಳಲ್ಲಿ 10 ಕಿ.ಮೀ. ಓಡಿದರು. ಪುರುಷರ ವಿಭಾಗದಲ್ಲಿ ಬೆಂಗಳೂರು ನಗರ ಜಿಲ್ಲೆಯ ವೈಭವ್ ಮೂರ್ತಿ, ಎ.ಆರ್.ರೋಹಿತ್ ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದರೆ, ಮಹಿಳೆಯರ ವಿಭಾಗದಲ್ಲಿ ಬೆಂಗಳೂರು ನಗರದ ತೇಜಸ್ವಿ ಎನ್.ಎಲ್, ರಾಯಚೂರಿನ ಉಷಾ ಆರ್. ಕ್ರಮವಾಗಿ 2 ಹಾಗೂ 3ನೇ ಸ್ಥಾನಗಳನ್ನು ಗಳಿಸಿದರು. ಬಾಲಕರ ಅಂಡರ್ -16 ವಿಭಾಗದ 2 ಕಿ.ಮೀ. ಓಟದಲ್ಲಿ ಧಾರವಾಡದ ಸಯ್ಯದ್ ಸಬೀರ್, ಬಾಲಕಿಯರ ಅಂಡರ್-16 ವಿಭಾಗದ 2 ಕಿ.ಮೀ. ವಿಭಾಗದಲ್ಲಿ ಬೆಳಗಾವಿಯ ಅಕ್ಷರ, ಅಂಡರ್-18 ಬಾಲಕರ 6 ಕಿ.ಮೀ. ವಿಭಾಗದಲ್ಲಿ ಕೊಡಗಿನ ಅಮ್ಮಿತ್, ಅಂಡರ್-18 ಬಾಲಕಿಯರ 4 ಕಿ.ಮೀ. ವಿಭಾಗದಲ್ಲಿ ಬೆಂಗಳೂರು ನಗರದ ವೈಷ್ಣವಿ ನವೀನ್, ಅಂಡರ್-20 ಬಾಲಕರ 8 ಕಿ.ಮೀ. ವಿಭಾಗದಲ್ಲಿ ಉತ್ತರ ಕನ್ನಡದ ಶಿವಾಜಿ ಪರಶುರಾಮ್, ಅಂಡರ್-20 ಬಾಲಕಿಯರ 6 ಕಿ.ಮೀ. ವಿಭಾಗದಲ್ಲಿ ಬೆಂಗಳೂರು ನಗರದ ನೀತು ಕುಮಾರಿ ಮೊದಲ ಸ್ಥಾನ ಪಡೆದರು. ಅಂಡರ್-16 ಬಾಲಕರ 2 ಕಿ.ಮೀ., ಅಂಡರ್-16 ಬಾಲಕಿಯರ 2 ಕಿ.ಮೀ., ಅಂಡರ್-18 ಬಾಲಕಿಯರ 4 ಕಿ.ಮೀ., ಮಹಿಳೆಯರ 10 ಕಿ.ಮೀ. ವಿಭಾಗಗಳಲ್ಲಿ ಧಾರವಾಡ ಜಿಲ್ಲೆ ಟ್ರೋಫಿ ಜಯಿಸಿದರೆ, ಅಂಡರ್-18 ಬಾಲಕರ 6 ಕಿ.ಮೀ. ವಿಭಾಗದಲ್ಲಿ ಬೆಳಗಾವಿ ಪ್ರಶಸ್ತಿ ಪಡೆಯಿತು.ಅಂಡರ್-20 ಬಾಲಕರ 8 ಕಿ.ಮೀ., ಅಂಡರ್-20 ಬಾಲಕಿಯರ 6 ಕಿ.ಮೀ., ಪುರುಷರ 10 ಕಿ.ಮೀ. ವಿಭಾಗಗಳಲ್ಲಿ ಬೆಂಗಳೂರು ನಗರ ಜಿಲ್ಲೆಗೆ ಟ್ರೋಫಿ ದೊರೆಯಿತು.