ಹರ್ಮನ್‌ಪ್ರೀತ್‌ ಸಾಹಸ: ಗುಜರಾತ್‌ ವಿರುದ್ಧ ಗೆದ್ದ ಮುಂಬೈ ನಾಕೌಟ್‌ಗೆ

| Published : Mar 10 2024, 01:31 AM IST

ಸಾರಾಂಶ

ಸೋಲಿನ ಸುಳಿಗೆ ಸಿಲುಕಿದ್ದ ತಂಡವನ್ನು ಹರ್ಮನ್‌ಪ್ರೀತ್‌ ತಮ್ಮ ಹೋರಾಟದ ಮೂಲಕ ಕಾಪಾಡಿದರು. ಸ್ಫೋಟಕ ಆಟದ ಮೂಲಕ ತಂಡವನ್ನು ಒಂದು ಎಸೆತ ಬಾಕಿ ಇರುವಂತೆಯೇ ಗೆಲ್ಲಿಸಿದರು. ಗುಜರಾತ್‌ 6 ಪಂದ್ಯಗಳಲ್ಲಿ 5ನೇ ಸೋಲನುಭವಿಸಿತು.

ನವದೆಹಲಿ: ಹರ್ಮನ್‌ಪ್ರೀತ್‌ ಪ್ರದರ್ಶಿಸಿದ ಸಾಹಸದಿಂದಾಗಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ 2ನೇ ಆವೃತ್ತಿ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಎಫ್‌ಐ)ನಲ್ಲಿ ನಾಕೌಟ್‌ ಪ್ರವೇಶಿಸಿದೆ. ಶನಿವಾರ ಗುಜರಾತ್‌ ಜೈಂಟ್ಸ್‌ ವಿರುದ್ಧ ಮುಂಬೈ 7 ವಿಕೆಟ್‌ ರೋಚಕ ಗೆಲುವು ಸಾಧಿಸಿತು. 7 ಪಂದ್ಯಗಳಲ್ಲಿ 5ನೇ ಜಯ ದಾಖಲಿಸಿದ ಮುಂಬೈ ನಾಕೌಟ್‌ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಂಡಿತು. ಗುಜರಾತ್‌ 6 ಪಂದ್ಯಗಳಲ್ಲಿ 5ನೇ ಸೋಲನುಭವಿಸಿತು.ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ 20 ಓವರಲ್ಲಿ 7 ವಿಕೆಟ್‌ಗೆ 190 ರನ್‌ ಕಲೆಹಾಕಿತು. ಬೆಥ್‌ ಮೂನಿ 35 ಎಸೆತದಲ್ಲಿ 66, ದಯಾಲನ್‌ ಹೇಮಲತಾ 40 ಎಸೆತಗಳಲ್ಲಿ 74 ರನ್‌ ಚಚ್ಚಿದರು. ಈ ಜೋಡಿ 2ನೇ ವಿಕೆಟ್‌ಗೆ 121 ರನ್‌ ಜೊತೆಯಾಟವಾಡಿತು. ಬೃಹತ್‌ ಗುರಿ ಬೆನ್ನತ್ತಿದ ಮುಂಬೈ ಒಂದು ಹಂತದಲ್ಲಿ ಸೋಲಿನ ಸುಳಿಗೆ ಸಿಲುಕಿತ್ತು. ಯಸ್ತಿಕಾ ಭಾಟಿಯಾ(49) ಔಟಾದ ಬಳಿಕ ಹರ್ಮನ್‌ಪ್ರೀತ್‌ ಏಕಾಂಗಿ ಹೋರಾಟ ಪ್ರದರ್ಶಿಸಿದರು. ಕೇವಲ 48 ಎಸೆತಗಳಲ್ಲಿ 10 ಬೌಂಡರಿ, 5 ಸಿಕ್ಸರ್‌ನೊಂದಿಗೆ 95 ರನ್‌ ಚಚ್ಚಿದ ಹರ್ಮನ್‌ ಒಂದು ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲ್ಲಿಸಿದರು.