ರಾಷ್ಟ್ರೀಯ ಕುಸ್ತಿ ಕೂಟಕ್ಕೆ ಬೆಂಗಳೂರಿನಲ್ಲಿ ಅದ್ಧೂರಿ ಚಾಲನೆ: ಮೊದಲ ದಿನವೇ ಕರ್ನಾಟಕಕ್ಕೆ ಪದಕ

| Published : Dec 07 2024, 12:30 AM IST / Updated: Dec 07 2024, 04:20 AM IST

ಸಾರಾಂಶ

ಗಂಟೆಗೂ ಹೆಚ್ಚು ಕಾಲ ನಡೆದ ಸಮಾರಂಭದಲ್ಲಿ ಸಾಂಪ್ರದಾಯಿಕ ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್‌ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

 ಬೆಂಗಳೂರು :  ಇದೇ ಮೊದಲ ಬಾರಿ ಕರ್ನಾಟಕದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ಗೆ ಬೆಂಗಳೂರಿನಲ್ಲಿ ಅದ್ಧೂರಿ ಚಾಲನೆ ಲಭಿಸಿದೆ.ಶುಕ್ರವಾರ ನಗರದ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಕೂಟದ ಉದ್ಘಾಟನಾ ಸಮಾರಂಭ ನಡೆಯಿತು. ಗಂಟೆಗೂ ಹೆಚ್ಚು ಕಾಲ ನಡೆದ ಸಮಾರಂಭದಲ್ಲಿ ಸಾಂಪ್ರದಾಯಿಕ ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. 

ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್‌ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಹಿರಿಯ ಕಲಾವಿದ ಮುಖ್ಯಮಂತ್ರಿ ಚಂದ್ರು, ನಟಿ ಸಂಜನಾ ಗಲ್ರಾನಿ, ಭಾರತೀಯ ಕುಸ್ತಿ ಫೆಡರೇಷನ್‌(ಡಬ್ಲ್ಯುಎಫ್‌ಐ) ಜಂಟಿ ಕಾರ್ಯದರ್ಶಿ, ಕರ್ನಾಟಕ ಕುಸ್ತಿ ಸಂಸ್ಥೆ ಅಧ್ಯಕ್ಷ ಗುಣರಂಜನ್‌ ಶೆಟ್ಟಿ ಸೇರಿದಂತೆ ಪ್ರಮುಖರು ಸಮಾರಂಭದಲ್ಲಿ ಪಾಲ್ಗೊಂಡರು. 

ಕೂಟ ಇನ್ನೂ 2 ದಿನಗಳ ಕಾಲ ನಡೆಯಲಿದ್ದು, ಭಾನುವಾರ ಕೊನೆಗೊಳ್ಳಲಿದೆ. ಕರ್ನಾಟಕದ 32 ಮಂದಿ ಸೇರಿದಂತೆ ದೇಶದ ವಿವಿಧ ರಾಜ್ಯಗಳ 700ಕ್ಕೂ ಹೆಚ್ಚು ಕುಸ್ತಿಪಟುಗಳು ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಗ್ರೀಕೊ ರೋಮನ್‌, ಪುರುಷ ಹಾಗೂ ಮಹಿಳೆಯರ ಫ್ರೀಸ್ಟೈಲ್‌ನ ಒಟ್ಟು 30 ತೂಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.

ಬೆಳ್ಳಿ ಗೆದ್ದ ರಾಜ್ಯದ ರೋಹನ್‌

ಕೂಟದ ಮೊದಲ ದಿನವೇ ಕರ್ನಾಟಕ ಪದಕ ಖಾತೆ ತೆರೆಯಿತು. ಪುರುಷರ 74 ಕೆ.ಜಿ. ವಿಭಾಗದ ಸ್ಪರ್ಧೆಯ ಫೈನಲ್‌ನಲ್ಲಿ ರೋಹನ್‌ ಘೆವಾಡಿ, ಸರ್ವಿಸಸ್‌ನ ಜೈದೀಪ್‌ ವಿರುದ್ಧ 4-14ರಿಂದ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಆದರೆ 70 ಕೆ.ಜಿ. ವಿಭಾಗದಲ್ಲಿ ಮಹೇಶ್‌ ಕುಮಾರ್‌ ಕಂಚಿನ ಪದಕ ಪಂದ್ಯದಲ್ಲಿ ಉತ್ತರ ಪ್ರದೇಶದ ಸರ್ವೇಶ್‌ ಯಾದವ್‌ ವಿರುದ್ಧ ಸೋತು ಪದಕ ತಪ್ಪಿಸಿಕೊಂಡರು.

ಮೊದಲ ದಿನವೇ ಹರ್‍ಯಾಣಕ್ಕೆ 4, ಸರ್ವಿಸಸ್‌ಗೆ 3 ಬಂಗಾರ

ಕೂಟದ ಮೊದಲ ಹರ್ಯಾಣ ಹಾಗೂ ಸರ್ವಿಸಸ್‌ನ ಕುಸ್ತಿಪಟುಗಳು ಪ್ರಾಬಲ್ಯ ಸಾಧಿಸಿದರು. ಹರ್ಯಾಣ 4, ಸರ್ವಿಸಸ್‌ 3, ಡೆಲ್ಲಿ 2 ಹಾಗೂ ಪಂಜಾಬ್‌ 1 ಚಿನ್ನದ ಪದಕ ತನ್ನದಾಗಿಸಿಕೊಂಡಿತು. ಹರ್ಯಾಣದ ಅನುಜ್‌(70 ಕೆ.ಜಿ. ವಿಭಾಗ), ಸಿದ್ದಾರ್ಥ್‌(65 ಕೆ.ಜಿ.), ಅಮಿತ್‌ (79 ಕೆ.ಜಿ.) ಹಾಗೂ ಸಚಿನ್‌(92 ಕೆ.ಜಿ.) ಚಿನ್ನ ಸಂಪಾದಿಸಿದರು. ಸರ್ವಿಸಸ್‌ನ ಪಂಕಜ್‌ 61 ಕೆ.ಜಿ. ವಿಭಾಗದಲ್ಲಿ ಚಿನ್ನಕ್ಕೆ ಕೊರಳೊಡ್ಡಿದರು.