ಸಾರಾಂಶ
ಬೆಂಗಳೂರು : ಇದೇ ಮೊದಲ ಬಾರಿ ಕರ್ನಾಟಕದಲ್ಲಿ ನಡೆದಿದ್ದ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ಗೆ ತೆರೆ ಬಿದ್ದಿದೆ. ಹರ್ಯಾಣದ ಕುಸ್ತಿಪಟುಗಳು ಪ್ರಾಬಲ್ಯ ಸಾಧಿಸಿದ್ದು, ಸರ್ವಿಸಸ್‌ನ ಸ್ಪರ್ಧಿಗಳೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.
ಹರ್ಯಾಣ 3 ದಿನಗಳಲ್ಲಿ 30 ತೂಕ ವಿಭಾಗಗಳ ಪೈಕಿ 14ರಲ್ಲಿ ಚಿನ್ನ ಗೆದ್ದರೆ, ಸರ್ವಿಸಸ್ 9 ಬಂಗಾರದ ಸಾಧನೆ ಮಾಡಿತು.ಕೂಟದ ಕೊನೆ ದಿನವಾದ ಭಾನುವಾರ ನಡೆದ ಮಹಿಳೆಯರ ಫ್ರೀಸ್ಟೈಲ್‌ನ 8 ಸ್ಪರ್ಧೆಗಳ ಪೈಕಿ 7ರಲ್ಲಿ ಹರ್ಯಾಣ ಚಿನ್ನ ಸಂಪಾದಿಸಿತು.
ಜ್ಯೋತಿ(53 ಕೆ.ಜಿ.), ಮೀನಾಕ್ಷಿ(55), ತಪಸ್ಯಾ(57), ಅಂಜಲಿ(59), ಮನಿಶಾ(62), ರಾಧಿಕಾ(68) ಹಾಗೂ ಪ್ರಿಯಾ(76) ಚಿನ್ನ ಗೆದ್ದರು. ಮತ್ತೊಂದು ಚಿನ್ನ ಮಹಾರಾಷ್ಟ್ರದ ಭಾಗ್ಯಶ್ರೀ(62 ಕೆ.ಜಿ.) ಪಾಲಾಯಿತು. ಇದಕ್ಕೂ ಮುನ್ನ ಶುಕ್ರವಾರ ಪುರುಷರ ಫ್ರೀಸ್ಟೈಲ್‌ನಲ್ಲಿ ಹರ್ಯಾಣ 4, ಸರ್ವಿಸಸ್ 3, ಡೆಲ್ಲಿ 2 ಹಾಗೂ ಪಂಜಾಬ್ 1 ಚಿನ್ನದ ಪದಕ ತನ್ನದಾಗಿಸಿಕೊಂಡಿತ್ತು. ಶನಿವಾರ ಪುರುಷರ ಗ್ರೀಕೊ ರೋಮನ್ ವಿಭಾಗದಲ್ಲಿ ಸರ್ವಿಸಸ್ 6 ಚಿನ್ನ ಗೆದ್ದಿದ್ದರೆ, ಹರ್ಯಾಣ 2, ಡೆಲ್ಲಿ, ಉತ್ತರ ಪ್ರದೇಶ ತಲಾ 1 ಸ್ವರ್ಣ ಜಯಿಸಿತ್ತು. ಮಹಿಳೆಯರ ಫ್ರೀಸ್ಟೈಲ್‌ನಲ್ಲಿ ಮಧ್ಯಪ್ರದೇಶ, ಹರ್ಯಾಣಕ್ಕೆ ತಲಾ 1 ಚಿನ್ನ ಲಭಿಸಿದ್ದವು.
ರಾಜ್ಯಕ್ಕೆ ಏಕೈಕ ಪದಕ
ಕೂಟದಲ್ಲಿ ಗ್ರೀಕೊ ರೋಮನ್, ಪುರುಷ ಹಾಗೂ ಮಹಿಳೆಯರ ಫ್ರೀಸ್ಟೈಲ್ ಸೇರಿ ಒಟ್ಟು 3 ವಿಭಾಗಗಳ ತಲಾ 10ರಂತೆ ಒಟ್ಟು 30 ತೂಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಈ ಪೈಕಿ ರಾಜ್ಯಕ್ಕೆ ಸಿಕ್ಕಿದ್ದು ಕೇವಲ 1 ಪದಕ. ಪುರುಷರ ಫ್ರೀಸ್ಟೈಲ್ 74 ಕೆ.ಜಿ. ಸ್ಪರ್ಧೆಯಲ್ಲಿ ರೋಹನ್ ಘೆವಾಡಿ ಬೆಳ್ಳಿ ಗೆದ್ದಿದ್ದರು.