ಸಾರಾಂಶ
ಡಬ್ಲ್ಯುಪಿಎಲ್‌ನಲ್ಲಿ ಆರ್‌ಸಿಬಿಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 1 ರನ್ ವೀರೋಚಿತ ಸೋಲು. ರಿಚಾ ಘೋಷ್ ಹೋರಾಟಕ್ಕೆ ಸಿಗದ ಗೆಲುವು. ಆರ್‌ಸಿಬಿ ಪ್ಲೇ-ಆಫ್ ಹಾದಿ ಕಠಿಣ.
ನವದೆಹಲಿ: 2ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)ನಲ್ಲಿ ಆರ್‌ಸಿಬಿಯ ಪ್ಲೇ-ಆಫ್ ಹಾದಿ ಕಠಿಣಗೊಂಡಿದೆ. ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್‌ಸಿಬಿ 1 ರನ್ ವೀರೋಚಿತ ಸೋಲು ಅನುಭವಿಸಿತು. 5ನೇ ಗೆಲುವು ದಾಖಲಿಸಿದ ಡೆಲ್ಲಿ, ಪ್ಲೇ-ಆಫ್ ಪ್ರವೇಶಿಸಿತು. ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿರುವ ಡೆಲ್ಲಿ, ಬಾಕಿ ಇರುವ ಒಂದು ಪಂದ್ಯದಲ್ಲೂ ಗೆದ್ದು ನೇರವಾಗಿ ಫೈನಲ್‌ಗೇರುವ ವಿಶ್ವಾಸದಲ್ಲಿದೆ.
29 ಎಸೆತದಲ್ಲಿ 51 ರನ್ ಸಿಡಿಸಿದ ರಿಚಾ ಘೋಷ್, ಕೊನೆಯ ಎಸೆತದಲ್ಲಿ 2 ರನ್ ಬೇಕಿದ್ದಾಗ ರನೌಟ್ ಆದರು. ಇದರಿಂದಾಗಿ ಆರ್‌ಸಿಬಿಗೆ ಗೆಲುವು ಕೈತಪ್ಪಿತು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಜೆಮಿಮಾ ರೋಡ್ರಿಗ್ಸ್ (58) ಹಾಗೂ ಅಲೈಸ್ ಕ್ಯಾಪ್ಸಿ (48) ಅವರ ಆಕರ್ಷಕ ಆಟದ ನೆರವಿನಿಂದ 20 ಓವರಲ್ಲಿ 5 ವಿಕೆಟ್‌ಗೆ 181 ರನ್ ಕಲೆಹಾಕಿತು. ಕರ್ನಾಟಕದ ಶ್ರೇಯಾಂಕ ಪಾಟೀಲ್ 26 ರನ್‌ಗೆ 4 ವಿಕೆಟ್ ಕಬಳಿಸಿ ಗಮನ ಸೆಳೆದರು. ದೊಡ್ಡ ಗುರಿ ಬೆನ್ನತ್ತಿದ ಆರ್‌ಸಿಬಿ 2ನೇ ಓವರಲ್ಲೇ ನಾಯಕಿ ಸ್ಮೃತಿ ಮಂಧನಾ (05) ವಿಕೆಟ್ ಕಳೆದುಕೊಂಡಿತು. ಸೋಫಿ ಮೊಲಿನ್ಯೂ(33) ಹಾಗೂ ಎಲೈಸಿ ಪೆರಿ(49) ಎರಡನೇ ವಿಕೆಟ್‌ಗೆ 80 ರನ್ ಸೇರಿಸಿ ತಂಡಕ್ಕೆ ಚೇತರಿಕೆ ನೀಡಿದರೂ, ಕೇವಲ 4 ರನ್ ಅಂತರದಲ್ಲಿ ಇಬ್ಬರೂ ಔಟಾಗಿದ್ದು ಆರ್‌ಸಿಬಿಗೆ ಹಿನ್ನಡೆ ಉಂಟು ಮಾಡಿತು. ಬಳಿಕ ರಿಚಾ ಅವರ ಹೋರಾಟ ತಂಡವನ್ನು ಜಯದ ಹೊಸ್ತಿಲಿಗೆ ತಲುಪಿಸಿದರೂ ಗೆಲುವು ಕೈಗೆಟುಕಲಿಲ್ಲ. ಸೋಮವಾರ ಗುಜರಾತ್ ವಿರುದ್ಧ ಯು.ಪಿ.ವಾರಿಯರ್ಸ್ ಗೆದ್ದರೆ ಆರ್‌ಸಿಬಿ ತನ್ನ ಕೊನೆಯ ಪಂದ್ಯದಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲಬೇಕಾಗುತ್ತದೆ. ಒಂದು ವೇಳೆ ಯು.ಪಿ. ಸೋತರೆ ಆರ್‌ಸಿಬಿಗೆ ಅನುಕೂಲವಾಗಲಿದೆ. ಸ್ಕೋರ್: ಡೆಲ್ಲಿ 20 ಓವರಲ್ಲಿ 181/5 (ಜೆಮಿಮಾ 58, ಕ್ಯಾಪ್ಸಿ 48, ಶ್ರೇಯಾಂಕ 4-26), ಆರ್‌ಸಿಬಿ 20 ಓವರಲ್ಲಿ 180/7 (ರಿಚಾ 51, ಪೆರಿ 49, ಕ್ಯಾಪ್ಸಿ 1-5)