ಸಾರಾಂಶ
ಪ್ಯಾರಿಸ್: ಒಲಿಂಪಿಕ್ಸ್ ಚಿನ್ನದ ಪದಕ 529 ಗ್ರಾಂ ತೂಕವಿರುತ್ತದೆ. ಆ ಪದಕವನ್ನು ಗೆದ್ದು ಇತಿಹಾಸ ಬರೆಯಲು ಅಣಿಯಾಗಿದ್ದ ವಿನೇಶ್ ಫೋಗಟ್‌ಗೆ ಅಡ್ಡಿಯಾಗಿದ್ದು 100 ಗ್ರಾಂ!. ಫೈನಲ್ ದಿನ ಬೆಳಗ್ಗೆ ನಡೆಸಿದ ತೂಕ ಹಾಕುವ ಪ್ರಕ್ರಿಯೆಯಲ್ಲಿ ವಿನೇಶ್ ನಿಗದಿತ ತೂಕಕ್ಕಿಂತ 100+ ಗ್ರಾಂ ಹೆಚ್ಚಿಗೆ ಇದ್ದ ಕಾರಣ ಅವರನ್ನು ಅನರ್ಹಗೊಳಿಸಲಾಯಿತು.
ಮೊದಲ ಸುತ್ತಿನಿಂದ ಅವರು ಗೆದ್ದ ಎಲ್ಲಾ ಪಂದ್ಯಗಳ ಫಲಿತಾಂಶವೂ ಅಳಿಸಿ ಹೋಗಲಿದ್ದು, ವಿನೇಶ್ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ತೂಕ ಹಾಕುವ ಪ್ರಕ್ರಿಯೆ ಹೇಗೆ?
ಕುಸ್ತಿಯ ಸ್ಪರ್ಧೆ ಆರಂಭಗೊಳ್ಳುವ ದಿನದ ಬೆಳಗ್ಗೆ ಕುಸ್ತಿಪಟುಗಳ ದೇಹದ ತೂಕವನ್ನು ಪರಿಶೀಲಿಸಲಾಗುತ್ತದೆ. ಅವರು ಯಾವ ವಿಭಾಗದಲ್ಲಿ ಸ್ಪರ್ಧೆ ಮಾಡುತ್ತಾರೋ, ಅವರ ದೇಹದ ತೂಕ ಸರಿಯಾಗಿ ಅಷ್ಟೇ ಅಥವಾ ಅದಕ್ಕಿಂತ ಕಡಿಮೆ ಇರಬೇಕು. ವಿನೇಶ್ ಮೊದಲ ದಿನ ತೂಕ ಹಾಕಿದಾಗ 49.90 ಕೆ.ಜಿ ಇದ್ದರು. ತೂಕ ಹಾಕುವ ಪ್ರಕ್ರಿಯೆ ಮುಗಿದಾಗಿನಿಂದ, ಮೊದಲ ಪಂದ್ಯ ಆರಂಭಗೊಳ್ಳುವುದರ ನಡುವೆ ಕೆಲ ಗಂಟೆಗಳ ಸಮಯ ಸಿಗಲಿದೆ.
ಆ ವೇಳೆ ಆಹಾರ, ನೀರು ಸೇವಿಸಿ ಕುಸ್ತಿಪಟುಗಳು ತೂಕ ಹೆಚ್ಚಿಸಿಕೊಳ್ಳುತ್ತಾರೆ. ಇಲ್ಲವಾದರೆ, ನಿಶಕ್ತಿಯಿಂದಾಗಿ ಮ್ಯಾಟ್‌ನಲ್ಲೇ ಕುಸಿದು ಬೀಳುವ ಸಾಧ್ಯತೆ ಇರುತ್ತದೆ. ಹೀಗಾಗಿ, ವಿನೇಶ್ ಮೊದಲ ಸುತ್ತಿನಲ್ಲಿ ಆಡಲು ಮ್ಯಾಟ್‌ಗೆ ಇಳಿಯುವಾಗ ಅವರ ದೇಹದ ತೂಕ ಸಹಜವಾಗಿಯೇ ಹೆಚ್ಚಾಗಿತ್ತು. ಸೆಮಿಫೈನಲ್‌ನಲ್ಲಿ ಗೆದ್ದ ಬಳಿಕ ತೂಕ ಹಾಕಿದಾಗ, ವಿನೇಶ್ 52.7 ಕೆ.ಜಿ. ಇದ್ದರು. ಪದಕ ಸುತ್ತುಗಳಿಗೆ ಕಾಲಿಟ್ಟ ಕುಸ್ತಿಪಟುಗಳ ದೇಹದ ತೂಕವನ್ನು ಮತ್ತೆ 2ನೇ ದಿನ ಬೆಳಗ್ಗೆ ಪರಿಶೀಲನೆ ನಡೆಸಲಾಗುತ್ತದೆ.
ಅಷ್ಟರಲ್ಲಿ ಮತ್ತೆ ನಿಗದಿತ ತೂಕಕ್ಕೆ ದೇಹ ಇಳಿದಿರಬೇಕು. ಬುಧವಾರ ಬೆಳಗ್ಗೆ ತೂಕ ಹಾಕಿದಾಗ ವಿನೇಶ್ 50.1 ಕೆ.ಜಿ. ಇದ್ದರು. ಒಂದೇ ರಾತ್ರಿಯಲ್ಲಿ 2.6 ಕೆ.ಜಿ. ತೂಕ ಇಳಿಸಿದರೂ, ಕೊನೆಯ 100 ಗ್ರಾಂ ಇಳಿಸಲು ಸಾಧ್ಯವೇ ಆಗದ ಕಾರಣ ವಿನೇಶ್ ಅನರ್ಹಗೊಳ್ಳಬೇಕಾಯಿತು. ವಿನೇಶ್‌ಗೆ ಎದುರಾದ ಈ ಸನ್ನಿವೇಶವನ್ನು ವಿಪರ್ಯಾಸ ಎನ್ನಬೇಕೋ, ಅವರ ದೌರ್ಭಾಗ್ಯ ಎನ್ನಬೇಕೋ, ಅಜಾಗರೂಕತೆಯಿಂದ ಆಗಿದ್ದು ಎನ್ನಬೇಕೋ ಗೊತ್ತಿಲ್ಲ.
ಆದರೆ ಈ 100 ಗ್ರಾಂನಿಂದಾಗಿ 140 ಕೋಟಿ ಭಾರತೀಯರಿಗೆ ಜೀರ್ಣಿಸಿಕೊಳ್ಳಲಾಗದಷ್ಟು ದುಃಖವಾಗಿದೆ. ಒಲಿಂಪಿಕ್ಸ್ ಪೋಡಿಯಂ ಮೇಲೆ ನಿಂತು ಪದಕಕ್ಕೆ ಮುತ್ತಿಕ್ಕಲು ಹಲವು ವರ್ಷಗಳಿಂದ ತಪ್ಪಸ್ಸು ಮಾಡಿರುವ ವಿನೇಶ್ ಫೋಗಟ್‌ರ ಮನಸ್ಥಿತಿ ಈಗ ಹೇಗಿರಬಹುದು ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ. ಅವರ ಕನಸುಗಳೆಲ್ಲಾ ಈಗ ನುಚ್ಚು ನೂರಾಗಿದೆ.