1980ರ ಬಳಿಕ ಚಿನ್ನ ಗೆಲ್ಲುವ ಭಾರತದ ಹಾಕಿ ತಂಡದ ಕನಸು ಭಗ್ನ!

| Published : Aug 07 2024, 01:43 AM IST

ಸಾರಾಂಶ

ಸೆಮಿಫೈನಲ್‌ನಲ್ಲಿ ಜರ್ಮನಿ ವಿರುದ್ಧ 2-3 ಗೋಲುಗಳಿಂದ ಆಘಾತಕಾರಿ ಸೋಲು. ನಾಳೆ ಕಂಚಿನ ಪದಕದ ಪಂದ್ಯದಲ್ಲೇ ಸ್ಪೇನ್‌ ವಿರುದ್ಧ ಸೆಣಸಲಿರುವ ಹರ್ಮನ್‌ ಪಡೆ.

ಪ್ಯಾರಿಸ್‌: 1980ರ ಬಳಿಕ ಮತ್ತೆ ಫೈನಲ್‌ ಪ್ರವೇಶಿಸುವ, ಚಿನ್ನದ ಪದಕ ಗೆಲ್ಲುವ ಭಾರತ ಪುರುಷರ ಹಾಕಿ ತಂಡದ ಕನಸು ಭಗ್ನಗೊಂಡಿದೆ. ಕಳೆದ ಬಾರಿ ಕಂಚು ವಿಜೇತ ಭಾರತ ತಂಡ, ಮಂಗಳವಾರ ರಾತ್ರಿ ನಡೆದ ಸೆಮಿಫೈನಲ್‌ನಲ್ಲಿ 2004ರ ಚಾಂಪಿಯನ್‌ ಜರ್ಮನಿ ವಿರುದ್ಧ 2-3 ಗೋಲುಗಳಿಂದ ಆಘಾತಕಾರಿ ಸೋಲನುಭವಿಸಿತು.ವಿಶ್ವ ನಂ.2 ಜರ್ಮನಿ ವಿರುದ್ಧ ಭಾರತ ಆರಂಭದಲ್ಲೇ ಮುನ್ನಡೆ ಸಾಧಿಸಿತು. 7ನೇ ನಿಮಿಷದಲ್ಲೇ ನಾಯಕ ಹರ್ಮನ್‌ಪ್ರೀತ್‌ ಗೋಲು ಬಾರಿಸಿ ಭಾರತೀಯರಲ್ಲಿ ಸಂಭ್ರಮಕ್ಕೆ ಕಾರಣರಾದರು. ಆದರೆ 18 ಮತ್ತು 27ನೇ ನಿಮಿಷಗಳಲ್ಲಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದ ಜರ್ಮನಿ, ಮೊದಲಾರ್ಧದಲ್ಲಿ 2-1ರ ಮುನ್ನಡೆ ಪಡೆಯಿತು. ದ್ವಿತೀಯಾರ್ಧದಲ್ಲಿ ಮತ್ತಷ್ಟು ಆಕ್ರಮಣಕಾರಿ ಆಟವಾಡಿದ ಭಾರತ, ಸುಖ್‌ಜೀತ್‌ ಸಿಂಗ್‌ 36ನೇ ನಿಮಿಷದ ಗೋಲಿನಿಂದ ಸಮಬಲ ಸಾಧಿಸಿತು. ಆದರೆ 54ನೇ ನಿಮಿಷದಲ್ಲಿ ಮಾರ್ಕೊ ಮಿಲ್ಟ್‌ಕಾವು ಹೊಡೆದ ಗೋಲು ಜರ್ಮನಿಗೆ ಗೆಲುವು ತಂದುಕೊಟ್ಟಿತು. ಕೊನೆ 2 ನಿಮಷಗಳಿರುವಾಗ ಗೋಲ್‌ಕೀಪರ್‌ ಶ್ರೀಜಿತ್‌ರನ್ನು ಹೊರಗಿಟ್ಟು ಹೆಚ್ಚುವರಿ ಆಟಗಾರರ(ಶಮ್ಶೇರ್‌ ಸಿಂಗ್‌)ರನ್ನು ಆಡಿಸಿದರೂ ಭಾರತಕ್ಕೆ ಯಶಸ್ಸು ಸಿಗಲಿಲ್ಲ. ಕೊನೆ ಸೆಕೆಂಡ್‌ನಲ್ಲಿ ಭಾರತದ ಹೊಡೆತವೊಂದು ಜರ್ಮನಿಯ ಗೋಲು ಪೆಟ್ಟಿಗೆಯ ಮೇಲಕ್ಕೆ ಹಾರುವುದರೊಂದಿಗೆ ಭಾರತದ ಫೈನಲ್‌ ಕನಸು ಭಗ್ನಗೊಂಡಿತು.ಸತತ 2ನೇ ಕಂಚಿನ ಕನಸು

ಭಾರತ 1980ರಲ್ಲಿ ಚಿನ್ನ ಗೆದ್ದ ಬಳಿಕ ಮತ್ತೊಂದು ಪದಕ ಗೆದ್ದಿದ್ದು 2021ರಲ್ಲಿ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ಬ್ರಿಟನ್‌ ವಿರುದ್ಧ ಗೆದ್ದು ಕಂಚಿನ ಪದಕ ತನ್ನದಾಗಿಸಿಕೊಂಡಿತ್ತು. ಈ ಬಾರಿ ಭಾರತ ತಂಡ ಸತತ 2ನೇ ಕಂಚು ಗೆಲ್ಲುವ ಕಾತರದಲ್ಲಿದೆ. ತಂಡ ಗುರುವಾರ ಸ್ಪೇನ್‌ ವಿರುದ್ಧ ಕಂಚಿನ ಪದಕದ ಪಂದ್ಯದಲ್ಲಿ ಸೆಣಸಾಡಲಿದೆ.