ಕರ್ನಾಟಕ ಕ್ರಿಕೆಟ್‌ನ ಪುಣ್ಯಭೂಮಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಚಿನ್ನಸ್ವಾಮಿ ಸುವರ್ಣ ಸಂಭ್ರಮ ಪರ ಕೂಗು

| Published : Nov 23 2024, 12:30 AM IST / Updated: Nov 23 2024, 04:13 AM IST

ಕರ್ನಾಟಕ ಕ್ರಿಕೆಟ್‌ನ ಪುಣ್ಯಭೂಮಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಚಿನ್ನಸ್ವಾಮಿ ಸುವರ್ಣ ಸಂಭ್ರಮ ಪರ ಕೂಗು
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಕ್ರಿಕೆಟ್‌ನ ಪುಣ್ಯಭೂಮಿ, ರಾಜ್ಯದ ಏಕೈಕ ಅಂತಾರಾಷ್ಟ್ರೀಯ ಕ್ರೀಡಾಂಗಣ ಎನಿಸಿಕೊಂಡಿರುವ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್‌ ಸ್ಟೇಡಿಯಂಗೆ 50 ವರ್ಷ ಪೂರ್ಣಗೊಂಡಿದೆ.

 ಬೆಂಗಳೂರು : ಕರ್ನಾಟಕ ಕ್ರಿಕೆಟ್‌ನ ಪುಣ್ಯಭೂಮಿ, ರಾಜ್ಯದ ಏಕೈಕ ಅಂತಾರಾಷ್ಟ್ರೀಯ ಕ್ರೀಡಾಂಗಣ ಎನಿಸಿಕೊಂಡಿರುವ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್‌ ಸ್ಟೇಡಿಯಂಗೆ 50 ವರ್ಷ ಪೂರ್ಣಗೊಂಡಿದೆ. ವಿಶ್ವದ ಅತ್ಯುತ್ತಮ ಕ್ರಿಕೆಟ್‌ ಸ್ಟೇಡಿಯಂಗಳ ಸಾಲಿನಲ್ಲಿರುವ, ಕರುನಾಡಿನ ಹೆಗ್ಗುರುತುಗಳಲ್ಲಿ ಒಂದಾಗಿರುವ, ಕನ್ನಡಿಗರ ಹೆಮ್ಮೆಯ ಕ್ರೀಡಾಂಗಣದ ಸುವರ್ಣ ಸಂಭ್ರಮವನ್ನು ವಿಜೃಂಭಣೆಯಿಂದ ಆಚರಿಸಬೇಕು ಎಂಬ ಕೂಗು ಕ್ರೀಡಾಭಿಮಾನಿಗಳಿಂದ ತೀವ್ರವಾಗಿ ವ್ಯಕ್ತವಾಗಿದೆ.

1972ರ ನ.22ರಂದು ಈ ಕ್ರೀಡಾಂಗಣದಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯ ಆರಂಭಗೊಂಡಿತ್ತು. ಭಾರತ ಹಾಗೂ ಬಲಿಷ್ಠ ವೆಸ್ಟ್‌ಇಂಡೀಸ್‌ ನಡುವಿನ ಅಂದಿನ ಪಂದ್ಯ ನೋಡಲು ಜನಸಾಗರವೇ ಹರಿದುಬಂದಿತ್ತು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆ ಪಂದ್ಯ ನಡೆದು ಶುಕ್ರವಾರಕ್ಕೆ ಭರ್ತಿ 50 ವರ್ಷ. ಆದರೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ)ಯು ಕ್ರೀಡಾಂಗಣದ ಸುವರ್ಣ ಸಂಭ್ರಮಾಚರಣೆಗೆ ಇನ್ನೂ ನಿರ್ಧಾರ ಕೈಗೊಂಡಂತಿಲ್ಲ. ಸುವರ್ಣ ಸಂಭ್ರಮವನ್ನು ಕೆಎಸ್‌ಸಿಎ ಅದ್ಧೂರಿಯಾಗಿ ಆಚರಿಸಬೇಕು ಎಂದು ಸಾಮಾಜಿಕ ತಾಣಗಳ ಮೂಲಕ ಅಭಿಮಾನಿಗಳು ಆಗ್ರಹಿಸಿದ್ದಾರೆ. ಮಾಜಿ ಕ್ರಿಕೆಟ್‌ ಆಟಗಾರರು ಕೂಡ ಚಿನ್ನಸ್ವಾಮಿ ಕ್ರೀಡಾಂಗಣದ ಸುವರ್ಣ ಸಂಭ್ರಮ ಆಚರಣೆಯಾಗಬೇಕು ಎಂದು ದನಿಗೂಡಿಸಿದ್ದಾರೆ.

‘ಚಿನ್ನಸ್ವಾಮಿ ಕ್ರೀಡಾಂಗಣ ಕರ್ನಾಟಕದಲ್ಲಿರುವ ಏಕೈಕ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣ. ಇಲ್ಲಿ ಕ್ರೀಡಾಂಗಣ ಇಲ್ಲದಿದ್ದರೆ ನಾವು ಭಾರತದ ಪಂದ್ಯಗಳನ್ನು ನೋಡಲು ಬೇರೆ ರಾಜ್ಯಗಳಿಗೆ ಹೋಗಬೇಕಾಗಿತ್ತು. ಆದರೆ ರಾಜ್ಯ ಕ್ರಿಕೆಟ್‌ ಸಂಸ್ಥೆಯು ಬೆಂಗಳೂರಿನಲ್ಲೇ ಕ್ರೀಡಾಂಗಣ ನಿರ್ಮಿಸಿ ರಾಜ್ಯದ ಕ್ರಿಕೆಟ್‌ ಪ್ರೇಮಿಗಳು ಹೆಮ್ಮೆ ಪಡುವಂತೆ ಮಾಡಿದೆ. ಇದರ 50 ವರ್ಷಾಚರಣೆಯನ್ನು ಅದ್ಧೂರಿಯಾಗಿ ನಡೆಸಬೇಕು’ ಎಂದು ಹೆಸರೇಳಲು ಇಚ್ಛಿಸದ ಕ್ರೀಡಾಭಿಮಾನಿಯೊಬ್ಬರು ‘ಕನ್ನಡಪ್ರಭ’ ಮೂಲಕ ಕೆಎಸ್‌ಸಿಎಗೆ ಮನವಿ ಮಾಡಿದ್ದಾರೆ.--

ಸುವರ್ಣ ಸಂಭ್ರಮಕ್ಕೆ ಚಿಂತನೆ: ಕೆಎಸ್‌ಸಿಎ

ಕ್ರೀಡಾಂಗಣದ ಸುವರ್ಣ ಸಂಭ್ರಮಾಚರಣೆ ಬಗ್ಗೆ ಪತ್ರಿಕೆಯು ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್‌ ಅವರಲ್ಲಿ ವಿಚಾರಿಸಿದ್ದು, ಶೀಘ್ರವೇ ಈ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಪ್ರತಿಕ್ರಿಯಿಸಿದ್ದಾರೆ. ‘ಬೆಂಗಳೂರಿನಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣ 50 ವರ್ಷ ಪೂರ್ಣಗೊಳಿಸಿದ್ದು ನಮಗೆಲ್ಲಾ ಹೆಮ್ಮೆ. ಇದಕ್ಕಾಗಿ ಸಂಭ್ರಮಾಚರಣೆ ನಡೆಸುತ್ತೇವೆ. ಸದ್ಯಕ್ಕೆ ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಶೀಘ್ರದಲ್ಲೇ ಈ ಬಗ್ಗೆ ಚರ್ಚಿಸಿ, ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಮಾಹಿತಿ ನೀಡಿದ್ದಾರೆ. --

ಕನ್ನಡಪ್ರಭ ಬಗ್ಗೆ ವ್ಯಾಪಕ ಪ್ರಶಂಸೆ

ಚಿನ್ನಸ್ವಾಮಿ ಕ್ರೀಡಾಂಗಣ 50 ವರ್ಷ ಪೂರ್ಣಗೊಳಿಸಿದ ಬಗ್ಗೆ ‘ಕನ್ನಡಪ್ರಭ’ ಪತ್ರಿಕೆಯು ಶುಕ್ರವಾರ(ನ.22) ಒಂದು ಇಡೀ ಪುಟದಲ್ಲಿ ವಿವರ ಪ್ರಕಟಿಸಿತ್ತು. ಕ್ರೀಡಾಂಗಣದ ಹಿನ್ನೆಲೆ, ಸ್ಟೇಡಿಯಂಗೆ ಚಿನ್ನಸ್ವಾಮಿ ಹೆಸರು ಬಂದ ಬಗ್ಗೆ, ಮೊದಲ ಪಂದ್ಯವನ್ನು ನೇರವಾಗಿ ವೀಕ್ಷಿಸಿದ್ದ ಮಾಜಿ ಕ್ರಿಕೆಟಿಗರ ಅನುಭವ, ಸ್ಟೇಡಿಯಂನ ಹೈಲೈಟ್ಸ್‌ ಸೇರಿದಂತೆ ಕ್ರೀಡಾಂಗಣದ ಕುತೂಹಲಕಾರಿ ಮಾಹಿತಿಗಳನ್ನು ಓದುಗರ ಮುಂದಿಟ್ಟಿತ್ತು. ಈ ವರದಿಗೆ ಹಾಲಿ, ಮಾಜಿ ಕ್ರಿಕೆಟಿಗರು, ರಾಜ್ಯ ಕ್ರಿಕೆಟ್‌ ಸಂಸ್ಥೆ, ಕ್ರಿಕೆಟ್‌ ಪ್ರೇಮಿಗಳು ಸೇರಿದಂತೆ ಹಲವರು ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.