ಸಾರಾಂಶ
ಪ್ಯಾರಿಸ್: ಒಲಿಂಪಿಕ್ಸ್ ಹಾಕಿಯಲ್ಲಿ ಭಾರತ ಪುರುಷರ ತಂಡ ಬರೋಬ್ಬರಿ 52 ವರ್ಷಗಳ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಿದೆ.
1972ರ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಆಸೀಸನ್ನು ಸೋಲಿಸಿದ್ದ ಭಾರತ, ಆ ಬಳಿಕ ಮತ್ತೊಂದು ಗೆಲುವಿಗೆ 5 ದಶಕ ಕಾಯುವಂತಾಯಿತು. ಶುಕ್ರವಾರ ನಡೆದ ‘ಬಿ’ ಗುಂಪಿನ ಕೊನೆ ಪಂದ್ಯದಲ್ಲಿ ಭಾರತ 3-2 ಗೋಲುಗಳಿಂದ ಜಯಗಳಿಸಿತು.
ಪಂದ್ಯದ ಆರಂಭದಿಂದಲೇ ಎದುರಾಳಿ ಮೇಲೆ ಪ್ರಾಬಲ್ಯ ಸಾಧಿಸಿದ ಭಾರತ ಕೊನೆವರೆಗೂ ಹಿಡಿತ ತಪ್ಪದಂತೆ ನೋಡಿಕೊಂಡಿತು.12ನೇ ನಿಮಿಷದಲ್ಲಿ ಅಭಿಷೇಕ್, 13 ಮತ್ತು 33ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಗೋಲು ದಾಖಲಿಸಿದರು. ಈ ಗೆಲುವಿನೊಂದಿಗೆ ಭಾರತ 5 ಪಂದ್ಯಗಳಲ್ಲಿ 10 ಅಂಕ ಸಂಪಾದಿಸಿದ್ದು, ಗುಂಪಿನಲ್ಲಿ 2ನೇ ಸ್ಥಾನಕ್ಕೇರಿದೆ. ಬೆಲ್ಜಿಯಂ 12 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ. ಗುಂಪಿನಿಂದ ಆಸ್ಟ್ರೇಲಿಯಾ, ಅರ್ಜೆಂಟೀನಾ ಕೂಡಾ ಈಗಾಗಲೇ ಕ್ವಾರ್ಟರ್ ಫೈನಲ್‌ಗೇರಿವೆ.
ಫೈನಲ್‌ಗೇರಲು ಅಂಕಿತಾ ಧ್ಯಾನಿ, ಪಾರುಲ್ ವಿಫಲ
ಭಾರತದ ತಾರಾ ಅಥ್ಲೀಟ್‌ಗಳಾದ ಪಾರುಲ್ ಚೌಧರಿ ಹಾಗೂ ಅಂಕಿತಾ ಧ್ಯಾನಿ ಒಲಿಂಪಿಕ್ಸ್‌ನ 5000 ಮೀ. ಓಟದ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಲು ವಿಫಲರಾಗಿದ್ದಾರೆ. ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಪಾರುಲ್ 15 ನಿಮಿಷ 10.68 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 2ನೇ ಹೀಟ್ಸ್‌ನಲ್ಲಿ 14ನೇ ಸ್ಥಾನ ಪಡೆದರೆ, ಅಂಕಿತಾ 16 ನಿಮಿಷ 19.38 ಸೆಕೆಂಡ್‌ಗಳಲ್ಲಿ ಕ್ರಮಿಸಿ 20ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಪ್ರತಿ ಹೀಟ್ಸ್‌ನಲ್ಲಿ ಅಗ್ರ-8 ಸ್ಥಾನ ಪಡೆದ ಸ್ಪರ್ಧಿಗಳು ಫೈನಲ್ ಪ್ರವೇಶಿಸಿದರು.