ಸಾರಾಂಶ
ಹೊದ್ದೂರು ಗ್ರಾಮದ ಶ್ರೀ ಭಗವತಿ ದೇವಸ್ಥಾನ ನೂತನವಾಗಿ ನಿರ್ಮಾಣಗೊಂಡಿದ್ದು, ಬ್ರಹ್ಮಕಲಶೋತ್ಸವ ನಡೆಯುತ್ತದೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ಹೊದ್ದೂರು ಗ್ರಾಮದ ಶ್ರೀ ಭಗವತಿ ದೇವಸ್ಥಾನ ನೂತನವಾಗಿ ನಿರ್ಮಾಣಗೊಂಡಿದ್ದು, ಬ್ರಹ್ಮಕಲಶೋತ್ಸವ ನಡೆಯುತ್ತದೆ. ದೇವಸ್ಥಾನ ಈಗ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದೆ.ಬ್ರಹ್ಮಕಲಶೋತ್ಸವದ ಅಂಗವಾಗಿ ಭಾನುವಾರ ನಾಗಪ್ರತಿಷ್ಠೆ ಜರುಗಿತು. ಸುಮಾರು 1.5 ಕೋಟಿ ರು. ವೆಚ್ಚದಲ್ಲಿ ದೇವಾಲಯ ಪುನರ್ ನಿರ್ಮಾಣಗೊಂಡಿದ್ದು, ಮಾ.7ರಂದು ಕುತ್ತಿ ಪೂಜೆಯೊಂದಿಗೆ ಕಲಶೋತ್ಸವ ಆರಂಭಗೊಂಡಿತು. ಮಾ.8ರಂದು ತಂತ್ರಿಯವರು ಆಗಮಿಸಿ, ವಾಸ್ತು ಕಳಶ ಪೂಜೆ, ವಾಸ್ತು ಬಲಿ ನೆರವೇರಿಸಿದರು. ಶನಿವಾರ ಸಂಜೆ 5 ಗಂಟೆಯಿಂದ ಅಂಕುರ ಆರೋಹಣ, ವಿಗ್ರಹ ಪರಿಗ್ರಹ ದೀಪಾ ಆರಾಧನೆ ನಡೆಯಿತು.
ಭಾನುವಾರ ಬ್ರಹ್ಮಶ್ರೀ ಕೆ.ಯು. ಪದ್ಮನಾಭ ತಂತ್ರಿ ಹಾಗೂ ದೇವಸ್ಥಾನದ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ, ಭಕ್ತರ ಸಮ್ಮುಖದಲ್ಲಿ ನಾಗಪ್ರತಿಷ್ಠೆ ಜರುಗಿತು. ಸಂಜೆ 6 ಗಂಟೆಯಿಂದ ದೀಪಾರಾಧನೆ, ಅಂಕುರ ಪೂಜೆ, ತ್ರಿಕಾಲ ಪೂಜೆ ನಡೆಯಿತು. ಸೋಮವಾರ ಬೆಳಗ್ಗೆ ಗಣಪತಿ ಹೋಮ, ಸಂಜೆ ಅನುಜ್ಞಾ ಬಲಿ ಹಾಗೂ ಅನುಜ್ಞಾ ಪ್ರಾರ್ಥನೆ ಗ್ರಾಮಸ್ಥರಿಂದ ನೆರವೇರಲಿದೆ. ಮಾ.12ರಂದು ಸಂಜೆ 4 ಗಂಟೆಗೆ ಜಲೋದ್ಧಾರ ಬಿಂಬಶುದ್ಧಿ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮಗಳು ಜರುಗಲಿವೆ. ಮಾ.13ರಂದು ಬೆಳಗ್ಗೆ 8 ರಿಂದ 10 ಗಂಟೆ ಒಳಗೆ ಮೇಷಲಗ್ನ, ಶುಕ್ಲ ಪಕ್ಷ, ಚತುರ್ಥ ತಿಥಿ ಸುಮುಹೂರ್ತದಲ್ಲಿ ಪೀಠ ಪ್ರತಿಷ್ಠೆ, ಬಿಂಬ ಪ್ರತಿಷ್ಠೆ, ನಾಗ ಪ್ರತಿಷ್ಠೆ, ಬ್ರಹ್ಮಕಲಶ ಪೂಜೆ ಮತ್ತಿತರ ವೈದಿಕ ಕಾರ್ಯಕ್ರಮಗಳು ಜರುಗಲಿವೆ. ಮಾ.14ರಂದು ಸಂಜೆ ಮೂರು ಗಂಟೆಗೆ ದೇವರ ನೃತ್ಯಬಲಿ ಜರುಗಲಿದೆ.ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚೌರಿರ ಕೆ.ಮೇದಪ್ಪ, ದೇವತಕ್ಕ ನೆರವಂಡ ಸಂಜಯ್ ಪೂಣಚ್ಚ, ಸಮಿತಿ ಸದಸ್ಯ ನಿವೃತ್ತ ಶಿಕ್ಷಕ ಚೌರಿರ ಉದಯ ಸೇರಿದಮತೆ ಸಮಿತಿಯ ನಿರ್ದೇಶಕ ಸದಸ್ಯರು, ಊರಿನ ಭಕ್ತರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.