ಈ ಸಲವೂ ಆತಿಥ್ಯ ರಾಷ್ಟ್ರಕ್ಕಿಲ್ಲ ಟಿ20 ವಿಶ್ವಕಪ್ ಗೆಲ್ಲುವ ಭಾಗ್ಯ!

| Published : Jun 25 2024, 12:37 AM IST / Updated: Jun 25 2024, 04:11 AM IST

ಸಾರಾಂಶ

ಸೆಮೀಸ್‌ಗೇರದ ಆತಿಥೇಯ ವೆಸ್ಟ್‌ಇಂಡೀಸ್‌, ಅಮೆರಿಕ. ಈ ಮೊದಲು ಕೂಡಾ ಭಾರತ, ಶ್ರೀಲಂಕಾ ಸೇರಿದಂತೆ ಟಿ20 ವಿಶ್ವಕಪ್‌ಗೆ ಆತಿಥೇಯ ವಹಿಸಿದ್ದ ದೇಶ ಟ್ರೋಫಿ ಗೆದ್ದೇ ಇಲ್ಲ.

ಬಾರ್ಬಡೊಸ್‌: ಟಿ20 ವಿಶ್ವಕಪ್‌ಗೆ ಆತಿಥ್ಯ ವಹಿಸುವ ತಂಡಗಳು ಟ್ರೋಫಿ ಗೆಲ್ಲಲು ವಿಫಲವಾಗುವ ಸಂಪ್ರದಾಯ ಈ ಬಾರಿಯೂ ಮುಂದುವರಿದಿದೆ. ಈ ಸಲ ಟೂರ್ನಿಗೆ ಆತಿಥ್ಯ ವಹಿಸಿದ್ದ ಅಮೆರಿಕ ಹಾಗೂ ವೆಸ್ಟ್‌ಇಂಡೀಸ್‌ ಸೂಪರ್‌-8 ಹಂತದಲ್ಲೇ ಟೂರ್ನಿಯಿಂದ ನಿರ್ಗಮಿಸಿವೆ.

2007ರಲ್ಲಿ ದ.ಆಫ್ರಿಕಾದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾರತ, 2009ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಪಾಕಿಸ್ತಾನ ಚಾಂಪಿಯನ್‌ ಆಗಿತ್ತು. ವಿಂಡೀಸ್‌ನಲ್ಲಿ ನಡೆದಿದ್ದ 2010ರ ಟೂರ್ನಿಯಲ್ಲಿ ಇಂಗ್ಲೆಂಡ್‌ ಟ್ರೋಫಿ ಗೆದ್ದಿತ್ತು. 2012ರಲ್ಲಿ ಆತಿಥೇಯ ಶ್ರೀಲಂಕಾ ಫೈನಲ್‌ಗೇರಿದ್ದರೂ, ವಿಂಡೀಸ್‌ ವಿರುದ್ಧ ಸೋತಿತ್ತು.

 ಬಾಂಗ್ಲಾದೇಶದಲ್ಲಿ ನಡೆದ 2014ರ ಟೂರ್ನಿಯಲ್ಲಿ ಲಂಕಾ ಪ್ರಶಸ್ತಿ ಗೆದ್ದಿತ್ತು. 2016ರಲ್ಲಿ ಭಾರತದಲ್ಲಿ ನಡೆದಿದ್ದ ಟೂರ್ನಿಯಲ್ಲಿ ವಿಂಡೀಸ್‌, 2021ರಲ್ಲಿ ಭಾರತ ಆತಿಥ್ಯ ಹಕ್ಕು ಪಡೆದು ಕೋವಿಡ್‌ ಕಾರಣ ಯುಎಇ, ಒಮಾನ್‌ನಲ್ಲಿ ನಡೆಸಲಾಗಿದ್ದ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಚಾಂಪಿಯನ್‌ ಆಗಿತ್ತು. 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಇಂಗ್ಲೆಂಡ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.

ವಿಶ್ವಕಪ್‌ ಸ್ವಾರಸ್ಯ

ಟಿ20 ವಿಶ್ವಕಪ್‌ನಲ್ಲಿ ವಿರಾಟ್‌ ಕೊಹ್ಲಿ 2ನೇ ಬಾರಿಗೆ ಡಕೌಟ್‌ ಆಗಿದ್ದಾರೆ. 2012ರ ಆವೃತ್ತಿಯಿಂದ ವಿಶ್ವಕಪ್‌ನಲ್ಲಿ ಆಡುತ್ತಿರುವ ಕೊಹ್ಲಿ, ಈ ಹಿಂದಿನ ಆವೃತ್ತಿಗಳಲ್ಲಿ ಒಮ್ಮೆಯೂ ಡಕೌಟ್‌ ಆಗಿರಲಿಲ್ಲ. ಈ ಬಾರಿ 2 ಸಲ ಸೊನ್ನೆಗೆ ಔಟಾಗಿದ್ದು, ಭಾರತ ತಂಡದ ಅಗ್ರ 7 (1ರಿಂದ 7ನೇ ಕ್ರಮಾಂಕ) ಬ್ಯಾಟರ್‌ವೊಬ್ಬ ಟಿ20 ವಿಶ್ವಕಪ್‌ನ ಆವೃತ್ತಿವೊಂದರಲ್ಲಿ 2 ಬಾರಿ ಡಕೌಟ್‌ ಆಗಿದ್ದು ಇದೇ ಮೊದಲು.