ಸಾರಾಂಶ
ಪ್ಯಾರಿಸ್: ಒಲಿಂಪಿಕ್ಸ್‌ನ ಪುರುಷರ ಡಬಲ್ಸ್‌ನ ಮೊದಲ ಸುತ್ತಿನಲ್ಲೇ ಸೋತ ಬಳಿಕ ಭಾರತದ ಹಿರಿಯ ಟೆನಿಸಿಗ, ಕರ್ನಾಟಕದ ರೋಹನ್ ಬೋಪಣ್ಣ ಟೆನಿಸ್‌ಗೆ ವಿದಾಯ ಘೋಷಿಸಿದ್ದಾರೆ.
ಇದರೊಂದಿಗೆ 22 ವರ್ಷಗಳ ಸುಧೀರ್ಘ ವೃತ್ತಿ ಬದುಕಿಗೆ ತೆರೆ ಬಿದ್ದಂತಾಗಿದೆ.ಪಂದ್ಯದ ಬಳಿಕ ಮಾತನಾಡಿದ 44 ವರ್ಷದ ಬೋಪಣ್ಣ, ‘ಖಂಡಿತವಾಗಿಯೂ ಇದು ಭಾರತದ ಪರ ನನ್ನ ಕೊನೆ ಪಂದ್ಯ. ನಾನೀಗ ಯಾವ ಹಂತದಲ್ಲಿ ಇದ್ದೇನೆ ಎಂಬುದು ಗೊತ್ತು. ಇಷ್ಟು ಕಾಲ ಆಡಿದ್ದೇ ಬೋನಸ್. ಭಾರತವನ್ನು 2 ದಶಕಗಳ ಕಾಲ ಪ್ರತಿನಿಧಿಸುತ್ತೇನೆ ಎಂದು ನಾವು ಭಾವಿಸಿರಲಿಲ್ಲ’ ಎಂದಿದ್ದಾರೆ.
ಬೋಪಣ್ಣ 2002ರಲ್ಲಿ ಭಾರತ ಪರ ಮೊದಲ ಪಂದ್ಯವಾಡಿದ್ದರು. 2017ರಲ್ಲಿ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಮಿಶ್ರ ಡಬಲ್ಸ್, 2024ರಲ್ಲಿ ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್‌ನಲ್ಲಿ ಚಾಂಪಿಯನ್ ಆಗಿದ್ದಾರೆ. 2016ರ ಒಲಿಂಪಿಕ್ಸ್‌ನಲ್ಲಿ ಸಾನಿಯಾ ಮಿರ್ಜಾ ಜೊತೆಗೂಡಿ ಮಿಶ್ರ ಡಬಲ್ಸ್‌ನಲ್ಲಿ ಕಣಕ್ಕಿಳಿದಿದ್ದ ಅವರು, 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಇತ್ತೀಚೆಗಷ್ಟೇ ಅವರು ಡೇವಿಸ್ ಕಪ್‌ಗೆ ನಿವೃತ್ತಿ ಪ್ರಕಟಿಸಿದ್ದರು.
ಬೋಪಣ್ಣ-ಶ್ರೀರಾಂಗೆ ಸೋಲಿನ ಶಾಕ್!ಪ್ಯಾರಿಸ್ ಒಲಿಂಪಿಕ್ಸ್ ಟೆನಿಸ್‌ನಲ್ಲಿ ಭಾರತೀಯರ ಅಭಿಯಾನ ಮೊದಲ ಸುತ್ತಿನಲ್ಲೇ ಅಂತ್ಯಗೊಂಡಿದೆ. ಭಾನುವಾರ ರಾತ್ರಿ ಪುರುಷರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ ಹಾಗೂ ಶ್ರೀರಾಮ್ ಬಾಲಾಜಿ ಜೋಡಿಗೆ ಫ್ರಾನ್ಸ್‌ನ ಎಡ್ವರ್ಡ್ ರೋಜರ್ ವ್ಯಾಸೆಲಿನ್ ಹಾಗೂ ಗಾಯೆಲ್ ಮೊನ್ಫಿಲ್ಸ್ ವಿರುದ್ಧ 5-7, 2-6 ನೇರ ಸೆಟ್‌ಗಳಲ್ಲಿ ಸೋಲು ಎದುರಾಯಿತು. ಇದಕ್ಕೂ ಮುನ್ನ ಪುರುಷರ ಸಿಂಗಲ್ಸ್‌ನಲ್ಲಿ ಸುಮಿತ್ ನಗಾಲ್ ಕೂಡಾ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದರು. ಇದರೊಂದಿಗೆ 28 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭಾರತದ ಟೆನಿಸಿಗರ ಕನಸು ಭಗ್ನಗೊಂಡಿತು. 1996ರಲ್ಲಿ ಲಿಯಾಂಡರ್ ಪೇಸ್ ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಆದು ಭಾರತಕ್ಕೆ ಒಲಿಂಪಿಕ್ಸ್ ಟೆನಿಸ್‌ನಲ್ಲಿ ಸಿಕ್ಕ ಏಕೈಕ ಪದಕ.