ಫೆ.23ಕ್ಕೆ ಭಾರತ vs ಪಾಕ್‌ ಚಾಂಪಿಯನ್ಸ್‌ ಟ್ರೋಫಿ ಫೈಟ್‌

| Published : Dec 25 2024, 12:45 AM IST

ಸಾರಾಂಶ

ದುಬೈನಲ್ಲಿ ನಡೆಯಲಿದೆ ಭಾರತ-ಪಾಕಿಸ್ತಾನ ಪಂದ್ಯ. ಭಾರತದ ಎಲ್ಲಾ ಪಂದ್ಯಗಳಿಗೂ ದುಬೈ ಆತಿಥ್ಯ. ಪಾಕಿಸ್ತಾನದ 3 ನಗರ ಗಳಲ್ಲಿ ನಡೆಯಲಿದೆ 10 ಪಂದ್ಯಗಳು.

ದುಬೈ: 2025ರಲ್ಲಿ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಕೊನೆಗೂ ಪ್ರಕಟಿಸಿದೆ. ಫೆ.19ರಿಂದ ಮಾ.9ರ ವರೆಗೂ ಟೂರ್ನಿ ನಡೆಯಲಿದ್ದು, ಹೈಬ್ರಿಡ್‌ ಮಾದರಿಯನ್ನು ಅನುಸರಿಸಲಾಗುತ್ತದೆ.

ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಫೆ.23ರಂದು ಪರಸ್ಪರ ಸೆಣಸಲಿವೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಫೆ.20ರಂದು ಬಾಂಗ್ಲಾದೇಶ ವಿರುದ್ಧ ಆಡಲಿದೆ. ಮಾ.2ರಂದು ಗುಂಪಿನ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್‌ ಅನ್ನು ಎದುರಿಸಲಿದೆ. ಮತ್ತೊಂದು ಗುಂಪಿನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್‌, ದ.ಆಫ್ರಿಕಾ ಹಾಗೂ ಅಫ್ಘಾನಿಸ್ತಾನ ತಂಡಗಳು ಸ್ಥಾನ ಪಡೆದಿವೆ.

ಭಾರತದ ಎಲ್ಲಾ ಪಂದ್ಯಗಳಿಗೂ ದುಬೈ ಆತಿಥ್ಯ ವಹಿಸಲಿದ್ದು, ಇನ್ನುಳಿದ ಪಂದ್ಯಗಳು ಪಾಕಿಸ್ತಾನದ ಲಾಹೋರ್‌, ಕರಾಚಿ ಹಾಗೂ ರಾವಲ್ಪಿಂಡಿ ನಗರಗಳಲ್ಲಿ ನಡೆಯಲಿವೆ.

ಫೆ.19ರಂದು ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್‌ ಸೆಣಸಲಿವೆ. ಮೊದಲ ಸೆಮಿಫೈನಲ್‌ ಸಹ ಪಾಕಿಸ್ತಾನದಲ್ಲಿ ನಿಗದಿಯಾಗಿದ್ದು, ಫೈನಲ್‌ಗೆ ಲಾಹೋರ್‌ ಆತಿಥ್ಯ ವಹಿಸಲಿದೆ ಎಂದು ಐಸಿಸಿ ತಿಳಿಸಿದೆ. ಒಂದು ವೇಳೆ ಭಾರತ ಫೈನಲ್‌ ಪ್ರವೇಶಿಸಿದರೆ, ಆಗ ಪಂದ್ಯವನ್ನು ದುಬೈನಲ್ಲಿ ನಡೆಸಲಾಗುವುದು ಎಂದು ಐಸಿಸಿ ಘೋಷಿಸಿದೆ.

ಒಟ್ಟು 15 ಪಂದ್ಯಗಳ ಪೈಕಿ 10 ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದರೆ, ಇನ್ನುಳಿದ 5 ಪಂದ್ಯಗಳು ದುಬೈನಲ್ಲಿ ನಡೆಯಲಿವೆ.

ಸೆಮಿಫೈನಲ್‌ಗಳು ಹಾಗೂ ಫೈನಲ್‌ಗೆ ಮೀಸಲು ದಿನ ನಿಗದಿಪಡಿಸಲಾಗಿದೆ.

ಗುಂಪು ಹಂತದಲ್ಲಿ ಪ್ರತಿ ತಂಡವು ತಲಾ 3 ಪಂದ್ಯ ಆಡಲಿದ್ದು, ಅಗ್ರ-2 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ಭಾರತದ ವೇಳಾಪಟ್ಟಿ

==

ದಿನಾಂಕವಿರುದ್ಧಸಮಯ

ಫೆ.20ಬಾಂಗ್ಲಾದೇಶಮ.2.30ಕ್ಕೆ

ಫೆ.23ಪಾಕಿಸ್ತಾನಮ.2.30ಕ್ಕೆ

ಮಾ.2ನ್ಯೂಜಿಲೆಂಡ್‌ಮ.2.30ಕ್ಕೆ