ಸಾರಾಂಶ
ದುಬೈ: ಕಳೆದ 5 ವರ್ಷಗಳಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕಾರ್ಯದರ್ಶಿಯಾಗಿದ್ದ ಜಯ್ ಶಾ ಭಾನುವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ)ಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
36 ವರ್ಷದ ಶಾ ಐಸಿಸಿ ಅಧ್ಯಕ್ಷ ಗದ್ದುಗೆ ಏರಿದ ಭಾರತದ 5ನೇ ಮತ್ತು ವಿಶ್ವದ ಅತಿ ಕಿರಿಯ ವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವರೆಗೂ ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೇ ಅಧ್ಯಕ್ಷರಾಗಿದ್ದರು. ಅವರ ಸ್ಥಾನಕ್ಕೆ ಇತ್ತೀಚೆಗಷ್ಟೇ ಜಯ್ ಶಾ ಸರ್ವಾನುಮತದಿಂದ ಆಯ್ಕೆಯಾಗಿದ್ದರು. ಜಯ್ ಶಾಗೂ ಮೊದಲು ಭಾರತದಿಂದ ಶರದ್ ಪವಾರ್, ಎನ್.ಶ್ರೀನಿವಾಸನ್, ಶಶಾಂಕ್ ಮನೋಹರ್ ಮತ್ತು ಜಗನಮೋಹನ್ ದಾಲ್ಮೀಯಾ ಐಸಿಸಿ ಅಧ್ಯಕ್ಷರಾಗಿದ್ದರು
ಚಾಂಪಿಯನ್ಸ್ ಟ್ರೋಫಿ ಶಾಗೆ ಮುಖ್ಯ ಸವಾಲು!
ಭಾರತ ಮತ್ತು ಪಾಕಿಸ್ತಾನದ ನಡುವೆ 2025ರ ಚಾಂಪಿಯನ್ಸ್ ಟ್ರೋಫಿ ಆಯೋಜನೆ ವಿಚಾರವಾಗಿ ಎದ್ದಿರುವ ಗೊಂದಲ ನಿವಾರಣೆ ಸದ್ಯ ಜಯ್‌ಶಾ ಮುಂದಿರುವ ಪ್ರಮುಖ ಸವಾಲು. ಇದನ್ನು ಬಗೆಹರಿಸಿಕೊಳ್ಳುವುದರ ಜೊತೆಗೆ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆ ಕುರಿತು ಕೆಲಸ ಮಾಡುವುದಾಗಿ ಶಾ ಹೇಳಿದ್ದಾರೆ.
ಜೂ.ಏಷ್ಯಾ ಹಾಕಿ: ಭಾರತಕ್ಕೆ ಸತತ 4ನೇ ಗೆಲುವು
ಮಸ್ಕತ್: ಕಿರಿಯರ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಭಾರತ ಸತತ 4ನೇ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ. ಗುಂಪು ಹಂತದ ಕೊನೆ ಪಂದ್ಯದಲ್ಲಿ ಭಾನುವಾರ ದಕ್ಷಿಣ ಕೊರಿಯಾ ವಿರುದ್ಧ ಭಾರತ 8-1 ಗೋಲುಗಳ ಅಂತರದಲ್ಲಿ ಜಯಗಳಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಮಂಗಳವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಭಾರತಕ್ಕೆ ಮಲೇಷ್ಯಾ ಸವಾಲು ಎದುರಾಗಲಿದೆ. ಮತ್ತೊಂದು ಸೆಮೀಸ್‌ನಲ್ಲಿ ಪಾಕಿಸ್ತಾನ ಹಾಗೂ ಜಪಾನ್ ತಂಡಗಳು ಸೆಣಸಾಡಲಿವೆ.