ಸಾರಾಂಶ
ದುಬೈ: ಹಲವು ತಿಂಗಳುಗಳಿಂದ ನಡೆಯುತ್ತಿರುವ 2025ರ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಆತಿಥ್ಯ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಆದರೆ ಈ ಬಗ್ಗೆ ಶನಿವಾರ ಅಧಿಕೃತ ಘೋಷಣೆಯಾಗುವ ನಿರೀಕ್ಷೆಯಿದೆ.
ಐಸಿಸಿ ಪ್ರಸ್ತಾವಕ್ಕೆ ಬಿಸಿಸಿಐ ಹಾಗೂ ಪಾಕ್ ಕ್ರಿಕೆಟ್ ಮಂಡಳಿ(ಪಿಸಿಬಿ) ಒಪ್ಪಿದ್ದು, ಆತಿಥ್ಯ ದೇಶ ಪಾಕಿಸ್ತಾನದ ಜೊತೆ ಯುಎಇಯಲ್ಲೂ ಟೂರ್ನಿಯ ಪಂದ್ಯಗಳು ಆಯೋಜನೆಗೊಳ್ಳಲಿದೆ.ಟೂರ್ನಿಗೆ ಆತಿಥ್ಯ ಪಾಕ್ ಬಳಿ ಇದೆ.
ಆದರೆ ಭದ್ರತಾ ದೃಷ್ಟಿಯಿಂದ ಪಾಕ್‌ಗೆ ತೆರಳಲು ಸಾಧ್ಯವಿಲ್ಲ ಎಂಬು ಬಿಸಿಸಿಐ ಸ್ಪಷ್ಟಪಡಿಸಿತ್ತು. ತನ್ನ ಪಂದ್ಯಗಳನ್ನು ಹೈಬ್ರಿಡ್ ಮಾದರಿಯಲ್ಲಿ ಅಂದರೆ ಪಾಕ್‌ನ ಹೊರಗಡೆ ನಡೆಸಬೇಕು ಎಂದು ಬೇಡಿಕೆಯಿಟ್ಟಿತ್ತು. ಇದಕ್ಕೆ ಪಿಸಿಬಿ ಒಪ್ಪಿರಲಿಲ್ಲ. ಎಲ್ಲಾ ಪಂದ್ಯಗಳು ಪಾಕ್‌ನಲ್ಲೇ ನಡೆಯಬೇಕು ಎಂದು ಪಟ್ಟುಹಿಡಿದಿತ್ತು. ಆದರೆ ಶುಕ್ರವಾರ ಕೆಲ ಷರತ್ತುಗಳೊಂದಿಗೆ ಬಿಸಿಸಿಐ ಹಾಗೂ ಪಿಸಿಬಿ ಹೈಬ್ರಿಡ್ ಟೂರ್ನಿಗೆ ಸಮ್ಮತಿ ಸೂಚಿಸಿವೆ.
ದುಬೈನಲ್ಲಿ ಭಾರತದ ಪಂದ್ಯ: ಟೂರ್ನಿಯ ಲೀಗ್ ಹಂತದ 3 ಪಂದ್ಯಗಳನ್ನೂ ಭಾರತ ತಂಡ ದುಬೈನಲ್ಲಿ ಆಡಲಿವೆ. ಉಳಿದೆಲ್ಲಾ ಪಂದ್ಯಗಳು ಪಾಕ್‌ನ 3 ನಗರಗಳಲ್ಲಿ ನಡೆಯಲಿವೆ. ಒಂದು ವೇಳೆ ಭಾರತ ನಾಕೌಟ್ ಪ್ರವೇಶಿಸಿದರೆ ಸೆಮಿಫೈನಲ್, ಫೈನಲ್ ಪಂದ್ಯಕ್ಕೂ ದುಬೈ ಆತಿಥ್ಯ ವಹಿಸಲಿವೆ. ಭಾರತ ನಾಕೌಟ್‌ಗೇರದಿದ್ದರೆ ಸೆಮೀಸ್, ಫೈನಲ್ ಲಾಹೋರ್‌ನಲ್ಲಿ ನಡೆಯಲಿದೆ. ಟೂರ್ನಿ 2025ರ ಫೆಬ್ರವರಿ-ಮಾರ್ಚ್‌ನಲ್ಲಿ ನಿಗದಿಯಾಗಿದೆ.
ಬಿಸಿಸಿಐ-ಪಿಸಿಬಿ ಒಪ್ಪಂದ?
- ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ. ಭಾರತ ತಂಡ ಪಾಕ್‌ಗೆ ತೆರಳಲ್ಲ. - ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿರುವ ಭಾರತ.- ಭಾರತ ನಾಕೌಟ್‌ಗೇರದಿದ್ದರೆ ಸೆಮಿ, ಫೈನಲ್‌ಗೆ ಲಾಹೋರ್ ಆತಿಥ್ಯ.- ಹೈಬ್ರಿಡ್ ಆದರೆ ಪರಿಹಾರ ಕೊಡಬೇಕು ಎಂದು ಪಿಸಿಬಿ. ಆದರೆ ಪರಿಹಾರವಿಲ್ಲ.- 2026ರ ಟಿ20 ವಿಶ್ವಕಪ್ ಆಡಲು ಪಾಕ್ ತಂಡ ಭಾರತಕ್ಕೆ ಬರಲ್ಲ. ಪಾಕ್‌ನ ಪಂದ್ಯಗಳು ಶ್ರೀಲಂಕಾದಲ್ಲಿ ಆಯೋಜನೆ.
- 2027ರ ಬಳಿಕ ಐಸಿಸಿ ಮಹಿಳಾ ಟೂರ್ನಿ ಆಯೋಜಿಸಲಿರುವ ಪಾಕಿಸ್ತಾನ.
ಜಯ್‌ಶಾಗೆ ಮೊದಲ ಯಶ?
ಬಿಸಿಸಿಐ ಕಾರ್ಯದರ್ಶಿಯಾಗಿದ್ದ ಜಯ್ ಶಾ ಇತ್ತೀಚೆಗಷ್ಟೇ ಐಸಿಸಿ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಚಾಂಪಿಯನ್ಸ್ ಟ್ರೋಫಿ ಆಯೋಜನೆ ಅವರ ಮುಂದಿದ್ದ ದೊಡ್ಡ ಸವಾಲಾಗಿತ್ತು. ಹಲವು ಸುತ್ತಿನ ಸಭೆಗಳ ಬಳಿಕ ಬಿಸಿಸಿಐ ಹಾಗೂ ಪಿಸಿಬಿ ನಡುವೆ ಒಮ್ಮತ ಮೂಡಿಸಲು ಶಾ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.