ಸಾರಾಂಶ
ಕಾಡಾನೆಯೊಂದು ಪಟ್ಟಣದಲ್ಲಿ ಕಾಣಿಸಿಕೊಂಡು ಓಡಾಡುವ ಮೂಲಕ ಜನರಲ್ಲಿ ಆತಂಕ ಉಂಟು ಮಾಡಿತು.
ಕನ್ನಡಪ್ರಭ ವಾರ್ತೆ ಮಡಿಕೇರಿಪೊನ್ನಂಪೇಟೆಯಲ್ಲಿ ಬೆಳ್ಳಂಬೆಳಗ್ಗೆ ಕಾಡಾನೆಯೊಂದು ಪಟ್ಟಣದಲ್ಲಿ ಕಾಣಿಸಿಕೊಂಡು ಓಡಾಡುವ ಮೂಲಕ ಜನರಲ್ಲಿ ಆತಂಕ ಉಂಟು ಮಾಡಿತು.
ಕೊಡಗು ಜಿಲ್ಲೆಯ ಪೊನ್ನಂಪೇಟೆ ಪಟ್ಟಣದಲ್ಲಿ ಶನಿವಾರ ಬೆಳಗ್ಗೆ 7 ಗಂಟೆ ವೇಳೆಗೆ ಕಾಡಾನೆಯೊಂದು ಪಟ್ಟಣಕ್ಕೆ ಏಕಾಏಕಿ ನುಗ್ಗಿತ್ತು. ಕಾಡಾನೆ ಕಂಡು ಜನರು ದಿಕ್ಕಪಾಲಾಗಿ ಓಡಿದರು. ಪೊನ್ನಂಪೇಟೆ ನ್ಯಾಯಾಲಯದ ಆವರಣದ ಮೂಲಕ ಪಟ್ಟಣಕ್ಕೆ ಆಗಮಿಸಿದ ಕಾಡಾನೆ, ಕುಂದ ರಸ್ತೆ ಮಾರ್ಗವಾಗಿ ಅರಣ್ಯ ಕಾಲೇಜು ಗದ್ದೆಯಲ್ಲಿ ಸುತ್ತಾಟ ನಡೆಸಿತು. ಬಳಿಕ ಎಪಿಸಿಎಂಎಸ್ ತೋಟ ಹಾಗೂ ಮುಖ್ಯ ರಸ್ತೆಯಲ್ಲಿ ಓಡಾಡಿತು. ನಂತರ ಮನೆಗಳ ಆವರಣಕ್ಕೂ ತೆರಳಿ ಅಲ್ಲಿಂದ ಪೆಟ್ರೋಲ್ ಬಂಕ್ ಬಳಿ ಕೂಡ ತೆರಳಿತ್ತು. ಇದರಿಂದ ಜನತೆ ಬೆಚ್ಚಿ ಬಿದ್ದರು. ಪಟ್ಟಣಕ್ಕೆ ನುಗ್ಗಿದರೂ ಜನರು ಹಾಗೂ ವಾಹನಗಳ ಮೇಲೆ ಯಾವುದೇ ದಾಳಿ ಮಾಡಲಿಲ್ಲ. ಆದರೆ ದಾರಿ ತಪ್ಪಿ ಬಂದ ಆನೆ ಗಾಬರಿಗೊಂಡು ಓಡಾಡುತ್ತಿತ್ತು. ಜನರು ಆನೆ ಬರುತ್ತಿದೆ ಎಂದು ದಾರಿಯಲ್ಲಿ ನಡೆದಾಡುತ್ತಿದ್ದ ಜನರಿಗೆ ಜೋರಾಗಿ ಕೂಗಿ ಎಚ್ಚರಿಕೆ ನೀಡಿದರು. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಆನೆಯನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾದರು.