ಸಾರಾಂಶ
ಜ.13ರಿಂದ ದೆಹಲಿಯಲ್ಲಿ ನಡೆಯಲಿರುವ ಖೋ-ಖೋ ವಿಶ್ವಕಪ್. ಲೀಗ್ ಹಂತದಲ್ಲಿ ಭಾರತಕ್ಕೆ ಸುಲಭ ಸವಾಲು. ಜ.19ರ ವರೆಗೂ ನಡೆಯಲಿರುವ ಚೊಚ್ಚಲ ಆವೃತ್ತಿ.
ನವದೆಹಲಿ: ಜ.13ರಿಂದ ಆರಂಭಗೊಳ್ಳಲಿರುವ ಚೊಚ್ಚಲ ಆವೃತ್ತಿಯ ಖೋ-ಖೋ ವಿಶ್ವಕಪ್‌ನ ವೇಳಾಪಟ್ಟಿ ಪ್ರಕಟಗೊಂಡಿದ್ದು, ಭಾರತ ಹಾಗೂ ನೇಪಾಳ ನಡುವಿನ ಉದ್ಘಾಟನಾ ಪಂದ್ಯದೊಂದಿಗೆ ಪಂದ್ಯಾವಳಿಗೆ ಚಾಲನೆ ದೊರೆಯಲಿದೆ.
ಜ.19ರ ವರೆಗೂ ಟೂರ್ನಿ ನಡೆಯಲಿದ್ದು, ಪುರುಷ ಹಾಗೂ ಮಹಿಳಾ ವಿಭಾಗಗಳಲ್ಲಿ ಒಟ್ಟು 39 ತಂಡಗಳು ಪಾಲ್ಗೊಳ್ಳಲಿವೆ. ಇಲ್ಲಿನ ಇಂದಿರಾ ಗಾಂಧಿ ಕ್ರೀಡಾಂಗಣ ಪಂದ್ಯಾವಳಿಗೆ ಆತಿಥ್ಯ ವಹಿಸಲಿದ್ದು, ಪುರುಷರ ವಿಭಾಗದಲ್ಲಿರುವ 20 ತಂಡಗಳನ್ನು ತಲಾ 5 ತಂಡಗಳಂತೆ 4 ಗುಂಪುಗಳಾಗಿ ವಿಂಗಡಿಸಲಾಗಿದೆ.
ಭಾರತ ತಂಡ ‘ಎ’ ಗುಂಪಿನಲ್ಲಿ ನೇಪಾಳ, ಪೆರು, ಬ್ರೆಜಿಲ್ ಹಾಗೂ ಭೂತಾನ್ ಜೊತೆ ಸ್ಥಾನ ಪಡೆದಿದೆ. ಮಹಿಳಾ ವಿಭಾಗದಲ್ಲಿ ಒಟ್ಟು 19 ತಂಡಗಳಿದ್ದು ಭಾರತ ತಂಡ ‘ಎ’ ಗುಂಪಿನಲ್ಲಿ ಇರಾನ್, ಮಲೇಷ್ಯಾ ಹಾಗೂ ದ.ಕೊರಿಯಾ ಜೊತೆ ಸ್ಥಾನ ಪಡೆದಿದೆ. ಆತಿಥೇಯ ತಂಡವು ತನ್ನ ಮೊದಲ ಪಂದ್ಯವನ್ನು ಜ.14ರಂದು ಕೊರಿಯಾ ವಿರುದ್ಧ ಆಡಲಿದೆ.