10ನೇ ಆವೃತ್ತಿಯ ಬೆಂಗಳೂರು ಓಪನ್ ಟೆನಿಸ್ ಟೂರ್ನಿಗೆ ಭಾನುವಾರ ಚಾಲನೆ ದೊರೆಯಲಿದ್ದು, ಭಾರತದ ಪ್ರತಿಷ್ಠ ಟೂರ್ನಿಯಲ್ಲಿ ಒಟ್ಟು 19 ದೇಶಗಳ ಆಟಗಾರರು ಪಾಲ್ಗೊಳ್ಳಲಿದ್ದಾರೆ . - ಇಂದು ಅರ್ಹತಾ ಸುತ್ತು, ಪ್ರಧಾನ ಸುತ್ತಿನ ಪಂದ್ಯಗಳು ನಾಳೆಯಿಂದ ಶುರು
ಬೆಂಗಳೂರು : 10ನೇ ಆವೃತ್ತಿಯ ಬೆಂಗಳೂರು ಓಪನ್ ಟೆನಿಸ್ ಟೂರ್ನಿಗೆ ಭಾನುವಾರ ಚಾಲನೆ ದೊರೆಯಲಿದ್ದು, ಭಾರತದ ಪ್ರತಿಷ್ಠ ಟೂರ್ನಿಯಲ್ಲಿ ಒಟ್ಟು 19 ದೇಶಗಳ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದ ಪ್ರಜ್ವಲ್ ದೇವ್ ಸೇರಿ ಭಾರತದ 6 ಆಟಗಾರರು ಸಿಂಗಲ್ಸ್ ವಿಭಾಗದ ಪ್ರಧಾನ ಸುತ್ತಿನಲ್ಲಿ ಆಡಲು ನೇರ ಪ್ರವೇಶ ಪಡೆದಿದ್ದಾರೆ.
ಅರ್ಹತಾ ಸುತ್ತಿನ ಪಂದ್ಯಗಳು ಭಾನುವಾರ
ಅರ್ಹತಾ ಸುತ್ತಿನ ಪಂದ್ಯಗಳು ಭಾನುವಾರ ನಡೆಯಲಿದ್ದು, ಸೋಮವಾರದಿಂದ ಪ್ರಧಾನ ಸುತ್ತು ಆರಂಭಗೊಳ್ಳಲಿದೆ. ಕರ್ನಾಟಕದ ಪ್ರಜ್ವಲ್ ದೇವ್ ಮೊದಲ ಸುತ್ತಿನಲ್ಲಿ ಭಾರತದ ನಂ.1 ಆಟಗಾರ ಸುಮಿತ್ ನಗಾಲ್‌ರನ್ನು ಎದುರಿಸಲಿದ್ದಾರೆ. ಅನುಭವಿ ಟೆನಿಸಿಗರಾದ ಹರೊಲ್ಡ್ ಮಯೊಟ್, ಜೇ ಕ್ಲಾರ್ಕ್, ಲಾಯ್ಡ್ ಹ್ಯಾರಿಸ್ ಸೇರಿ ಹಲವು ತಾರಾ ವಿದೇಶಿ ಆಟಗಾರರು ಸ್ಪರ್ಧಿಸಲಿದ್ದಾರೆ.
ನಗಾಲ್, ಪ್ರಜ್ವಲ್ ಜೊತೆಗೆ ಪ್ರಧಾನ ಸುತ್ತಿನಲ್ಲಿ ಆಡಲು ಭಾರತದ ನಂ.2 ಆಟಗಾರ ಆರ್ಯನ್ ಶಾ, ನಂ.3 ಕರಣ್ ಸಿಂಗ್, ವೈಲ್ಡ್ ಕಾರ್ಡ್ ಪ್ರವೇಶ ಪಡೆದಿರುವ ದಕ್ಷಿಣೇಶ್ವರ್ ಸುರೇಶ್ ಹಾಗೂ ಮಾನಸ್ ದಾಮ್ನೆ ಅವಕಾಶ ಪಡೆದಿದ್ದಾರೆ. ಅರ್ಹತಾ ಸುತ್ತಿನಲ್ಲಿ ರಾಮ್‌ಕುಮಾರ್ ರಾಮನಾಥನ್, ಮನೀಶ್ ಸುರೇಶ್, ಆದಿತ್ಯ ಬಾಲಶೇಖರ್, ಆದಿಲ್ ಕಲ್ಯಾಣ್‌ಪುರ್ ಸ್ಪರ್ಧಿಸಲಿದ್ದು, ಪ್ರಧಾನ ಸುತ್ತಿಗೇರಲು ಎದುರು ನೋಡುತ್ತಿದ್ದಾರೆ.
ಟೂರ್ನಿಯು ಒಟ್ಟು 2.25 ಲಕ್ಷ ಅಮೆರಿಕನ್ ಡಾಲರ್ ಬಹುಮಾನ
ಟೂರ್ನಿಯು ಒಟ್ಟು 2.25 ಲಕ್ಷ ಅಮೆರಿಕನ್ ಡಾಲರ್ (ಅಂದಾಜು 2 ಕೋಟಿ ರು.) ಬಹುಮಾನ ಮೊತ್ತ ಹೊಂದಿದ್ದು, ಸಿಂಗಲ್ಸ್‌ನಲ್ಲಿ ಗೆಲ್ಲುವ ಆಟಗಾರನಿಗೆ 125 ಎಟಿಪಿ ರ್‍ಯಾಂಕಿಂಗ್ ಅಂಕಗಳು ಸಿಗಲಿವೆ.
ಡಬಲ್ಸ್‌ನಲ್ಲಿ ಒಟ್ಟು 8 ಜೋಡಿಗಳು ಸ್ಪರ್ಧಿಸಲಿದ್ದು, ಅನುಭವಿ ಆಟಗಾರ ಶ್ರೀರಾಮ್ ಬಾಲಾಜಿ ಸೇರಿ 13 ಭಾರತೀಯರು ಕಣಕ್ಕಿಳಿಯಲಿದ್ದಾರೆ. ಟೂರ್ನಿಯ ಸೆಮಿಫೈನಲ್ ಪಂದ್ಯಗಳು ಜ.9ರಂದು ನಡೆಯಲಿದ್ದು, ಫೈನಲ್ ಜ.10ಕ್ಕೆ ನಿಗದಿಯಾಗಿದೆ.