ಸಾರಾಂಶ
ನ್ಯೂಯಾರ್ಕ್: ಯುಎಸ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್, ವಿಶ್ವ ನಂ.1 ಆಟಗಾರ ಯಾನಿಕ್ ಸಿನ್ನರ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಆದರೆ 2022ರ ಚಾಂಪಿಯನ್ ಇಗಾ ಸ್ವಿಯಾಟೆಕ್ ಸೋತು ಹೊರಬಿದ್ದಿದ್ದಾರೆ.ಗುರುವಾರ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಇಟಲಿಯ ಅಗ್ರ ಶ್ರೇಯಾಂಕಿತ ಸಿನ್ನರ್, ತಮ್ಮ ದೇಶದವರೇ ಆದ ಲೊರೆಂಜೊ ಮುಸೆಟ್ಟಿ ವಿರುದ್ಧ 6-1, 6-4, 6-2 ಸೆಟ್‌ಗಳಲ್ಲಿ ಗೆಲುವು ಸಾಧಿಸಿ, ಸತತ 5ನೇ ಬಾರಿ ಗ್ರ್ಯಾನ್‌ಸ್ಲಾಂ ಸೆಮಿಫೈನಲ್‌ಗೇರಿದರು. ಈ ವರ್ಷ 3ನೇ ಗ್ರ್ಯಾನ್‌ಸ್ಲಾಂ ಗೆಲ್ಲುವ ನಿರೀಕ್ಷೆಯಲ್ಲಿರುವ ಸಿನ್ನರ್‌ಗೆ ಸೆಮಿಫೈನಲ್‌ನಲ್ಲಿ ಕೆನಡಾದ ಫೆಲಿಕ್ಸ್ ಅಲಿಯಾಸ್ಸಿಮ್ ಸವಾಲು ಎದುರಾಗಲಿದೆ. ಕ್ವಾರ್ಟರ್‌ನಲ್ಲಿ 25ನೇ ಶ್ರೇಯಾಂಕಿತ ಫೆಲಿಕ್ಸ್, ಆಸ್ಟ್ರೇಲಿಯಾದ ಅಲೆಕ್ಸ್ ಡಿ ಮಿನೌರ್ ವಿರುದ್ಧ 4-6, 7-6(7), 7-5, 7-6(4) ಸೆಟ್‌ಗಳಲ್ಲಿ ಗೆದ್ದರು.
ಸ್ವಿಯಾಟೆಕ್ ಔಟ್:6 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡತಿ, ಪೋಲೆಂಡ್‌ನ ಸ್ವಿಯಾಟೆಕ್ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕದ 8ನೇ ಶ್ರೇಯಾಂಕಿತ ಅಮಂಡಾ ಅನಿಸಿಮೋವಾ ವಿರುದ್ಧ 4-6, 3-6 ನೇರ ಸೆಟ್‌ಗಳಲ್ಲಿ ಸೋಲನುಭವಿಸಿದರು. ಇತ್ತೀಚೆಗಷ್ಟೇ ವಿಂಬಲ್ಡನ್ ಫೈನಲ್‌ಗೇರಿ ರನ್ನರ್-ಅಪ್ ಆಗಿದ್ದ 24 ವರ್ಷದ ಅಮಂಡಾ, ಇದೇ ಮೊದಲ ಬಾರಿ ಯುಎಸ್ ಓಪನ್ ಸೆಮಿಫೈನಲ್‌ಗೇರಿದ್ದಾರೆ. ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ 2018, 2020ರ ಚಾಂಪಿಯನ್, ಜಪಾನ್‌ನ ನವೊಮಿ ಒಸಾಕ ಅವರು ಚೆಕ್ ಗಣರಾಜ್ಯದ ಕ್ಯಾರೊಲಿನಾ ಮುಕೋವಾ ವಿರುದ್ಧ 6-4, 7-6(7/3) ಸೆಟ್‌ಗಳಲ್ಲಿ ಗೆದ್ದು ಸೆಮೀಸ್‌ಗೇರಿದರು. ಸೆಮೀಸ್‌ನಲ್ಲಿ ಒಸಾಕಗೆ ಅಮಂಡಾ ಸವಾಲು ಎದುರಾಗಲಿದೆ.