ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಡ್ರಗ್ಸ್ ಮತ್ತು ಮಾದಕ ದ್ರವ್ಯಗಳ ಮಾರಾಟ ಮತ್ತು ಬಳಕೆ ಏರಿಕೆಯಾಗುತ್ತಿದ್ದು, ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಹೇಳಿದರು.
ಕರ್ನಾಟಕ ರಾಜ್ಯ ಪೊಲೀಸ್ ಸುವರ್ಣ ಮಹೋತ್ಸವ ಅಂಗವಾಗಿ ಡ್ರಗ್ಸ್ ಮತ್ತು ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಪೊಲೀಸ್ ಆಶ್ರಯದಲ್ಲಿ ನಡೆದ ವಾಕಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಕೊಡಗು ಜಿಲ್ಲೆಯಲ್ಲಿ 2021ರಲ್ಲಿ 17 ಗಾಂಜಾ ಮತ್ತು ಮಾದಕ ವಸ್ತುಗಳ ಪ್ರಕರಣಗಳು ದಾಖಲಾಗಿದ್ದು, 36 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. 2022ರಲ್ಲಿ 21 ಪ್ರಕರಣಗಳು ದಾಖಲಾಗಿದ್ದು, 49 ಮಂದಿ ಬಂಧನಕ್ಕೆ ಒಳಗಾಗಿದ್ದರು. 2023ರಲ್ಲಿ ಜಿಲ್ಲೆಯಲ್ಲಿ 101 ಪ್ರಕರಣಗಳು ಕಂಡುಬಂದಿದ್ದು, 234 ಮಂದಿಯನ್ನು ಬಂಧಿಸಲಾಗಿದೆ. 2024ರ ಅವಧಿಯ ಎರಡು ತಿಂಗಳ ಒಳಗೆ 16 ಪ್ರಕರಣಗಳು ದಾಖಲಾಗಿದ್ದು, 31 ಮಂದಿ ಬಂಧನಕ್ಕೆ ಒಳಗಾಗಿದ್ದಾರೆ ಎಂದು ಮಾಹಿತಿ ನೀಡಿದರು.ಪ್ರಕರಣ ಒಂದರಲ್ಲಿ ಮೂವರು ವ್ಯಕ್ತಿಗಳಿಗೆ ಘನ ನ್ಯಾಯಾಲಯ ಹತ್ತು ವರ್ಷ ಸಜೆ ವಿಧಿಸಿದೆ ಎಂದು ಅವರು ಮಾಹಿತಿ ಒದಗಿಸಿದರು. ಯುವ ಪೀಳಿಗೆ ಈ ಮನೋಭಾವದಿಂದ ಹೊರಗೆ ಬರಬೇಕಾಗಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.
ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಜಿಲ್ಲೆಗೆ ನುಸುಳುವ ಡ್ರಗ್ಸ್ ದಂಧೆಯನ್ನು ಶಾಶ್ವತವಾಗಿ ಕಡಿವಾಣ ಹಾಕುವ ನಿಟ್ಟಿನಲ್ಲಿ ಗಡಿ ಭಾಗದಲ್ಲಿ ಕಟ್ಟುನಿಟ್ಟಿನ ತಪಾಸಣೆ ಅಗತ್ಯ. ಇಂತಹ ದಂಧೆಯಲ್ಲಿ ಪಾಲ್ಗೊಳ್ಳುವ ಆರೋಪಿಗಳಿಗೆ ವಕೀಲರು ಯಾವುದೇ ಸಂದರ್ಭ ಜಾಮೀನು ನೀಡುವಲ್ಲಿ ಸಹಕಾರ ನೀಡಬಾರದು. ಈ ಮೂಲಕ ಮಾದಕ ವಸ್ತು ದಂಧೆಗಳಿಗೆ ಶಾಶ್ವತ ಕಡಿವಾಣ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಮಾದಕ ವಸ್ತುಗಳ ತಡೆಗೆ ಸಾರ್ವಜನಿಕರ, ಪತ್ರಕರ್ತರ ಜವಾಬ್ದಾರಿ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ದುಶ್ಚಟ ಮುಕ್ತ ಸಮಾಜಕ್ಕಾಗಿ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದರು.ಕುಶಾಲನಗರ-ಮಡಿಕೇರಿ ರಸ್ತೆಯ ಮಾದಾಪಟ್ಟಣ ಗ್ರಾಮ ಬಳಿ ಇರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್ ಬಳಿಯಿಂದ ಹೊರಟ ವಾಕಥಾನ್, ಮುಖ್ಯ ರಸ್ತೆಯ ಮೂಲಕ ಕುಶಾಲನಗರ ಪಟ್ಟಣಕ್ಕೆ ಬಂದು ಬೈಪಾಸ್ ರಸ್ತೆ ಮೂಲಕ ರಥಬೀದಿಗೆ ತೆರಳಿ ಅಂದಾಜು ನಾಲ್ಕು ಕಿಲೋ ಮೀಟರ್ ಅಂತರ ಕ್ರಮಿಸಿ ಕುಶಾಲನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಅಂತ್ಯಗೊಂಡಿತು.
ಪಟ್ಟಣ, ಗ್ರಾಮಗಳ ನಾಗರಿಕರಿಗೆ ಬಡಾವಣೆ ನಿವಾಸಿಗಳಿಗೆ ಹಾಗೂ ಹೆದ್ದಾರಿ ಮೂಲಕ ತೆರಳಿದ ಪ್ರವಾಸಿಗರಿಗೆ ಡ್ರಗ್ಸ್ ಹಾಗೂ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಅರಿವು, ಜಾಗೃತಿ ಮೂಡಿಸುಲ್ಲಿ ಕಾರ್ಯಕ್ರಮ ಬಹುತೇಕ ಯಶಸ್ವಿಯಾಯಿತು.ಕೊಡಗು ಜಿಲ್ಲೆಯ ವಿವಿಧಡೆಯ 250ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ, ಕುಶಾಲನಗರ ಮಾಜಿ ಸೈನಿಕರ ಸಂಘ, ರೋಟರಿ, ರೆಡ್ ಕ್ರಾಸ್ ಸಂಸ್ಥೆ, ಲಯನ್ಸ್, ಜೆಸಿಸ್, ಸ್ಥಳೀಯ ಚೇಂಬರ್ ಆಫ್ ಕಾಮರ್ಸ್, ಕಾವೇರಿ ಸುದ್ದಿ ಸೆಂಟರ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ವಾಕಥಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ ರಾಜ್ ಹಾಗೂ ಸೋಮವಾರಪೇಟೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಆರ್.ವಿ. ಗಂಗಾಧರಪ್ಪ ನೇತೃತ್ವದಲ್ಲಿ ನಡೆದ ಬೃಹತ್ ವಾಕಥಾನ್‌ನಲ್ಲಿ ಮಡಿಕೇರಿ ಡಿವೈಎಸ್ಪಿ ಮಹೇಶ್ ಕುಮಾರ್, ವಿರಾಜಪೇಟೆ ಡಿವೈಎಸ್ಪಿ ಮೋಹನ್ ಕುಮಾರ್, ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಇನ್‌ಸ್ಪೆಕ್ಟರ್‌ಗಳು, ವೃತ್ತ ನಿರೀಕ್ಷಕರು ಠಾಣಾಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಸ್ಥಳೀಯ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು, ನಾಗರಿಕರು ಪಾಲ್ಗೊಂಡಿದ್ದರು.