ಇಂಗ್ಲೆಂಡ್‌ ವಿರುದ್ಧ ಟೀಂ ಇಂಡಿಯಾ ಬ್ಯಾಟಿಂಗ್‌ ಪರಾಕ್ರಮ

| Published : Mar 09 2024, 01:34 AM IST / Updated: Mar 09 2024, 08:58 AM IST

ಸಾರಾಂಶ

5ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಬಿಗಿ ಹಿಡಿತ ಸಾಧಿಸಿದ್ದು, 2ನೇ ದಿನದಂತ್ಯಕ್ಕೆ ಟೀಂ ಇಂಡಿಯಾ 8 ವಿಕೆಟ್‌ಗೆ 473 ರನ್‌ ರನ್‌ ಕಲೆಹಾಕಿದೆ. ತಂಡ 255 ರನ್‌ ಭರ್ಜರಿ ಮುನ್ನಡೆಯಲ್ಲಿದೆ. ಪ್ರವಾಸಿ ಇಂಗ್ಲೆಂಡ್‌ ಇನ್ನಿಂಗ್ಸ್‌ ಸೋಲಿನ ಭೀತಿಯಲ್ಲಿದೆ.

ಧರ್ಮಶಾಲಾ: ಐಪಿಎಲ್‌ ಆರಂಭಗೊಳ್ಳಲು ಇನ್ನೆರಡು ವಾರ ಬಾಕಿ ಇರುವಾಗಲೇ ಟೀಂ ಇಂಡಿಯಾದ ಕೆಲ ಆಟಗಾರರು ಹೊಡಿಬಡಿ ಆಟದ ಟೂರ್ನಿಗೆ ಈಗಲೇ ಸಿದ್ಧತೆ ಆರಂಭಿಸಿರುವಂತಿದೆ. 

ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ನಲ್ಲಿ ಸದ್ಯ ಭಾರತದ ಬ್ಯಾಟರ್‌ಗಳ ಆರ್ಭಟ, ಆಕ್ರಮಣಕಾರಿ ಆಟವನ್ನು ನೋಡಿದರೆ ಈ ಮಾತು ಅತಿಶಯೋಕ್ತಿ ಅನಿಸಲ್ಲ.

ಇಂಗ್ಲೆಂಡ್‌ ವಿರುದ್ಧ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 5ನೇ ಟೆಸ್ಟ್‌ ಪಂದ್ಯದಲ್ಲಿ ಭಾರತೀಯ ಬ್ಯಾಟರ್‌ಗಳು ಪರಾಕ್ರಮ ಮೆರೆದಿದ್ದಾರೆ. 

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 2ನೇ ದಿನದಂತ್ಯಕ್ಕೆ 8 ವಿಕೆಟ್‌ಗೆ 473 ರನ್‌ ಕಲೆಹಾಕಿದ್ದು, 255 ರನ್‌ ಭರ್ಜರಿ ಮುನ್ನಡೆ ಸಾಧಿಸಿದೆ.ಮೊದಲೆರಡು ದಿನ ಪಿಚ್‌ ಬ್ಯಾಟರ್‌ಗಳಿಗೆ ನೆರವಾಗಲಿದೆ ಎಂಬ ಮಾತನ್ನು ಟೀಂ ಇಂಡಿಯಾ ಬ್ಯಾಟರ್‌ಗಳು ನಿಜವಾಗಿಸಿದರು.

ರೋಹಿತ್‌ ಶರ್ಮಾ ಹಾಗೂ ಶುಭ್‌ಮನ್‌ ಗಿಲ್‌ ಸಿಡಿಸಿದ ಸ್ಫೋಟಕ ಸೆಂಚುರಿ, ಬಳಿಕ ಸರ್ಫರಾಜ್‌ ಖಾನ್‌ ಹಾಗೂ ಚೊಚ್ಚಲ ಪಂದ್ಯವಾಡುತ್ತಿರುವ ದೇವದತ್‌ ಪಡಿಕ್ಕಲ್‌ರ ಆಕರ್ಷಕ ಅರ್ಧಶತಕದ ಆಟ ಭಾರತವನ್ನು ಜಯದ ಹಾದಿಯಲ್ಲಿ ತಂದು ನಿಲ್ಲಿಸಿದೆ. 

3ನೇ ದಿನದಿಂದ ಪಿಚ್‌ ಸ್ಪಿನ್ನರ್‌ಗಳಿಗೆ ನೆರವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ ಇನ್ನಿಂಗ್ಸ್‌ ಸೋಲನುಭವಿಸಿದರೂ ಅಚ್ಚರಿಯೇನಿಲ್ಲ.

ಸ್ಫೋಟಕ ಬ್ಯಾಟಿಂಗ್‌: ಇಂಗ್ಲೆಂಡ್‌ನ 218 ರನ್‌ಗೆ ಉತ್ತರವಾಗಿ ಮೊದಲ ದಿನ 1 ವಿಕೆಟ್‌ಗೆ 135 ರನ್‌ ಗಳಿಸಿದ್ದ ಭಾರತ ಶುಕ್ರವಾರ ಮತ್ತೆ 338 ರನ್‌ ಸೇರಿಸಿತು. 

ಮೊದಲ ಅವಧಿಯಲ್ಲಿ ಇಂಗ್ಲೆಂಡ್‌ ಬೌಲರ್‌ಗಳನ್ನು ಚೆಂಡಾಡಿದ ರೋಹಿತ್‌ ಹಾಗೂ ಗಿಲ್‌ 2ನೇ ವಿಕೆಟ್‌ಗೆ ಒಟ್ಟು ಸೇರಿಸಿದ್ದು 171 ರನ್‌. ಟೆಸ್ಟ್‌ನಲ್ಲಿ 12ನೇ ಶತಕ ಪೂರೈಸಿದ ರೋಹಿತ್‌ 103 ರನ್‌ ಗಳಿಸಿದ್ದಾಗ ಬೆನ್‌ ಸ್ಟೋಕ್ಸ್‌ರ ಮ್ಯಾಜಿಕ್‌ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು. 

ಅವರ ಬೆನ್ನಲ್ಲೇ ಗಿಲ್‌(110) ಕೂಡಾ ನಿರ್ಗಮಿಸಿದರು. ಇನ್ನೇನು ಪಂದ್ಯದ ಮೇಲೆ ಇಂಗ್ಲೆಂಡ್‌ ಹಿಡಿತ ಸಾಧಿಸಿತು ಅನ್ನುವಷ್ಟರಲ್ಲಿ ಸರ್ಫರಾಜ್‌-ದೇವದತ್‌ ಜೊತೆಯಾದರು. 

ಆಕರ್ಷಕ ಹೊಡೆತಗಳ ಮೂಲಕ ರಂಜಿಸಿದ ಸರ್ಫರಾಜ್‌(60 ಎಸೆತದಲ್ಲಿ 56) ಸರಣಿಯ 3ನೇ ಅರ್ಧಶತಕ ಪೂರೈಸಿದ ಬೆನ್ನಲ್ಲೇ ಔಟಾದರೆ, ಚೊಚ್ಚಲ ಪಂದ್ಯವನ್ನೇ ಸ್ಮರಣೀಯಗೊಳಿಸಿದ ದೇವದತ್‌ 65 ರನ್‌ ಸಿಡಿಸಿ ಬಶೀರ್‌ಗೆ ವಿಕೆಟ್‌ ಒಪ್ಪಿಸಿದರು.

ಕೊನೆ ಅವಧಿಯಲ್ಲಿ ಚುರುಕಿನ ದಾಳಿ ಸಂಘಟಿಸಿದ ಇಂಗ್ಲೆಂಡ್‌ ಜಡೇಜಾ(15), ಧ್ರುವ್‌ ಜುರೆಲ್‌(15), ಆರ್‌.ಅಶ್ವಿನ್‌(00) ರನ್ನು ಕ್ರೀಸ್‌ನಲ್ಲಿ ನೆಲೆಯೂರಲು ಬಿಡಲಿಲ್ಲ. 

376ಕ್ಕೆ 3 ವಿಕೆಟ್‌ ನಷ್ಟಕ್ಕೊಳಗಾಗಿದ್ದ ಭಾರತ ಬಳಿಕ 52 ರನ್‌ ಸೇರಿಸುವಷ್ಟರಲ್ಲಿ 5 ವಿಕೆಟ್‌ ಕಳೆದುಕೊಂಡಿತು. ಆದರೆ ಮುರಿಯದ 9ನೇ ವಿಕೆಟ್‌ಗೆ ಜೊತೆಗೂಡಿರುವ ಬೂಮ್ರಾ(ಔಟಾಗದೆ 19) ಹಾಗೂ ಕುಲ್ದೀಪ್‌ ಯಾದವ್‌(ಔಟಾಗದೆ 27) ತಂಡದ ಮೊತ್ತವನ್ನು 500ರ ಗಡಿ ದಾಟಿಸುವ ಭರವಸೆ ಹುಟ್ಟಿಸಿದ್ದಾರೆ. ಬಶೀರ್‌ 4, ಹಾರ್ಟ್ಲಿ 2 ವಿಕೆಟ್‌ ಕಿತ್ತರು.

ಸ್ಕೋರ್‌: ಇಂಗ್ಲೆಂಡ್‌ 218/10, ಭಾರತ 473/8(2ನೇ ದಿನದಂತ್ಯಕ್ಕೆ)(ಗಿಲ್‌ 110, ರೋಹಿತ್‌ 103, ಪಡಿಕ್ಕಲ್‌ 65, ಸರ್ಫರಾಜ್‌ 56, ಬಶೀರ್ 6-170, ಹಾರ್ಟ್ಲಿ 2-126)

ಇಂದೇ ಮುಗಿಯುತ್ತಾ ಪಂದ್ಯ?
ಭಾರತ ಈಗಾಗಲೇ ದೊಡ್ಡ ಮುನ್ನಡೆ ಪಡೆದಿದೆ. ತಂಡ ಶನಿವಾರ ಇನ್ನಷ್ಟು ರನ್‌ ಸೇರಿಸಿ ಆಲೌಟ್‌ ಅಥವಾ ಡಿಕ್ಲೇರ್‌ ಮಾಡಬಹುದು. ಧರ್ಮಶಾಲಾ ಪಿಚ್‌ನಲ್ಲಿ 3ನೇ ದಿನದಿಂದ ಹೆಚ್ಚಿನ ತಿರುವು ಪಡೆಯಲಿರುವ ಕಾರಣ ಇಂಗ್ಲೆಂಡ್‌ಗೆ ಶನಿವಾರ ಬ್ಯಾಟಿಂಗ್‌ ಕಷ್ಟವಾಗಬಹುದು.

ಅಲ್ಲದೆ ಸರಣಿಯಲ್ಲಿ ಇಂಗ್ಲೆಂಡ್‌ನ ಬ್ಯಾಟಿಂಗ್‌ ಕೂಡಾ ಕಳಪೆಯಾಗಿದೆ. ಸರಣಿಯ 9 ಇನ್ನಿಂಗ್ಸ್‌ಗಳಲ್ಲಿ 4 ಬಾರಿ ಮಾತ್ರ ತಂಡ 260+ ರನ್‌ ಕಲೆಹಾಕಿದೆ. ಇದೆಲ್ಲವನ್ನೂ ಗಮನಿಸಿದರೆ ಇಂಗ್ಲೆಂಡ್‌ ಶನಿವಾರವೇ ಗಂಟುಮೂಟೆ ಕಟ್ಟಿದರೂ ಅಚ್ಚರಿಯಿಲ್ಲ.

04ನೇ ಬಾರಿ: ಭಾರತದ ಅಗ್ರ-5 ಬ್ಯಾಟರ್‌ಗಳು ಟೆಸ್ಟ್‌ನ ಒಂದೇ ಇನ್ನಿಂಗ್ಸ್‌ನಲ್ಲಿ ತಲಾ 50ಕ್ಕೂ ಹೆಚ್ಚು ರನ್‌ ಗಳಿಸಿದ್ದು ಇದು 4ನೇ ಬಾರಿ.

01ನೇ ಬಾರಿ: ಟೆಸ್ಟ್‌ ಸರಣಿಯೊಂದರಲ್ಲಿ ಭಾರತ ಅಗ್ರ-3 ಬ್ಯಾಟರ್‌ಗಳು ತಲಾ 400ಕ್ಕೂ ಹೆಚ್ಚು ರನ್‌ ಗಳಿಸಿದ್ದು ಇದೇ ಮೊದಲು. ಜೈಸ್ವಾಲ್‌, ರೋಹಿತ್, ಗಿಲ್ ಈ ಸಾಧಕರು.