ಸಾರಾಂಶ
ಪುಣೆ: ಬೆಂಗಳೂರಿನಲ್ಲಿ ಸಂಪೂರ್ಣ ಕುಗ್ಗಿಹೋಗಿದ್ದ ಭಾರತ, ಪುಣೆ ಟೆಸ್ಟ್‌ಗೂ ಮುನ್ನ ಆಲ್ರೌಂಡರ್ ವಾಷಿಂಗ್ಟನ್ ಸುಂದರ್‌ರನ್ನು ತಂಡಕ್ಕೆ ಸೇರಿಸಿಕೊಂಡಿದ್ದು ಹಲವರಿಗೆ ಅಚ್ಚರಿ ತಂದಿತ್ತು. ಆದರೆ ಆಯ್ಕೆ ಸಮಿತಿ ನಿರ್ಧಾರ ತಪ್ಪಾಗಲಿಲ್ಲ. ವಾಷಿಂಗ್ಟನ್ ಕೂಡಾ ನಿರೀಕ್ಷೆ ಹುಸಿಗೊಳಿಸಲಿಲ್ಲ.
ಗುರುವಾರ ಆರಂಭಗೊಂಡ 2ನೇ ಟೆಸ್ಟ್ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಹಾಗೂ ಆರ್.ಅಶ್ವಿನ್ ಮನಮೋಹಕ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್, ಮೊದಲ ದಿನವೇ 259 ರನ್‌ಗೆ ಸರ್ವಪತನ ಕಂಡಿದೆ. ಎಲ್ಲರ ನಿರೀಕ್ಷೆಯಂತೆಯೇ ಪುಣೆ ಟೆಸ್ಟ್‌ನಲ್ಲಿ ಸ್ಪಿನ್ನರ್‌ಗಳೇ ಪ್ರಾಬಲ್ಯ ಸಾಧಿಸಿದ್ದಾರೆ. ಆದರೆ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಆರಂಭಿಕ ಆಘಾತಕ್ಕೆ ತುತ್ತಾಗಿದ್ದು, 2ನೇ ದಿನ ಕಿವೀಸ್ ಸ್ಪಿನ್ನರ್‌ಗಳನ್ನು ಹೇಗೆ ಎದುರಿಸಲಿದೆ ಎಂಬ ಕುತೂಹಲವಿದೆ.
ಪುಣೆಯಲ್ಲಿ ಟಾಸ್ ಗೆದ್ದ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಲಿದೆ ಎಂಬ ಪ್ರಮೇಯ ಬದಲಾಗಲಿಲ್ಲ. ಕಿವೀಸ್ ಮೊದಲು ಬ್ಯಾಟಿಂಗ್ ಆರಂಭಿಸಿತು. ವೇಗಿಗಳ ಸ್ವಿಂಗ್ ಹಾಗೂ ಸ್ಪಿನ್ನರ್‌ಗಳ ತಿರುವಿನ ನಡುವೆಯೂ ನ್ಯೂಜಿಲೆಂಡ್ ಉತ್ತಮ ಆರಂಭವೇನೂ ಪಡೆಯಿತು. ತಂಡದ ಮೊದಲ ವಿಕೆಟ್ ಬಿದ್ದಿದ್ದು 8ನೇ ಓವರ್‌ನಲ್ಲಿ. ಟಾಮ್ ಲೇಥಮ್(15) ಅಶ್ವಿನ್‌ಗೆ ಬಲಿಯಾದರು.
ವಿಲ್ ಯಂಗ್(18) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆದರೆ ಡೆವೋನ್ ಕಾನ್‌ವೇ ಹಾಗೂ ರಚಿನ್ ರವೀಂದ್ರ ಮತ್ತೊಮ್ಮೆ ಭಾರತವನ್ನು ಕಾಡಿದರು. ಇಬ್ಬರೂ ಅರ್ಧಶತಕ ಪೂರ್ಣಗೊಳಿಸಿದರು. ಕಾನ್‌ವೇ 76 ರನ್ ಗಳಿಸಿದ್ದಾಗ ಅಶ್ವಿನ್ ಎಸೆತದಲ್ಲಿ ರಿಷಭ್ ಪಂತ್‌ಗೆ ಕ್ಯಾಚ್ ನೀಡಿದರು. ಇದರ ಹೊರತಾಗಿಯೂ ತಂಡ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ತಂಡದ ಮೊತ್ತ 197 ಆಗಿದ್ದಾಗ ರಚಿನ್(65 ರನ್)ರನ್ನು ವಾಷಿಂಗ್ಟನ್ ಮನಮೋಹಕ ಶೈಲಿಯಲ್ಲಿ ಕ್ಲೀನ್ ಬೌಲ್ಡ್ ಮಾಡುವುದರೊಂದಿಗೆ ಕಿವೀಸ್ ಪತನ ಆರಂಭಗೊಂಡಿತು.
ಬೆರಗಾದ ಕಿವೀಸ್: ರಚಿನ್ ಔಟಾಗುವುದನ್ನೇ ಕಾದು ಕುಳಿತಂತಿದ್ದ ವಾಷಿಂಗ್ಟನ್, ಬಳಿಕ ಕಿವೀಸ್‌ನ ಯಾವ ಬ್ಯಾಟರ್‌ಗೂ ಕ್ರೀಸ್‌ನಲ್ಲಿ ನೆಲೆಯೂರಲು ಬಿಡಲಿಲ್ಲ. ತಮ್ಮ ಅತ್ಯಾಕರ್ಷಕ ಸ್ಪಿನ್ ಮೋಡಿ ಮೂಲಕ ಕಿವೀಸ್‌ಗೆ ಮಾರಕವಾಗಿ ಪರಿಣಮಿಸಿದರು. ಕಿವೀಸ್‌ನ ಕೊನೆ 7 ವಿಕೆಟ್‌ಗಳು ವಾಷಿಂಗ್ಟನ್ ಪಾಲಾಯಿತು. ಈ ಎಲ್ಲಾ ವಿಕೆಟ್‌ಗಳು ಕೇವಲ 62 ರನ್ ಅಂತರದಲ್ಲಿ ಉರುಳಿತು.
ಸ್ಯಾಂಟ್ನರ್ 33, ಡ್ಯಾರಿಲ್ ಮಿಚೆಲ್ 18 ರನ್ ಗಳಿಸಿದರು.23.1 ಓವರ್ ಎಸೆದ ವಾಷಿಂಗ್ಟನ್ 4 ಓವರ್ ಮೇಡಿನ್ ಮಾಡಿ, 59 ರನ್‌ಗೆ 7 ವಿಕೆಟ್ ಕಿತ್ತರು. ಅಶ್ವಿನ್ 64 ರನ್‌ಗೆ 3 ವಿಕೆಟ್ ಕಬಳಿಸಿದರು.ರೋಹಿತ್ ಡಕೌಟ್: ಬಳಿಕ ಇನ್ನಿಂಗ್ಸ್ ಆರಂಭಿಸಿದ ಭಾರತ 3ನೇ ಓವರ್‌ನಲ್ಲೇ ವಿಕೆಟ್ ಕಳೆದುಕೊಂಡಿತು.
ರೋಹಿತ್ ಶರ್ಮಾ ಖಾತೆ ತೆರೆಯುವ ಮೊದಲೇ ಸೌಥಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಸದ್ಯ ಯಶಸ್ವಿ ಜೈಸ್ವಾಲ್(ಔಟಾಗದೆ 6) ಹಾಗೂ ಶುಭ್‌ಮನ್ ಗಿಲ್(ಔಟಾಗದೆ 10) 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.ಸ್ಕೋರ್: ನ್ಯೂಜಿಲೆಂಡ್ 259/10 (ಕಾನ್‌ವೇ 76, ರಚಿನ್ 65, ಸ್ಯಾಂಟ್ನರ್ 33, ವಾಷಿಂಗ್ಟನ್ 7-59, ಅಶ್ವಿನ್ 3-64), ಭಾರತ 16/1 (ಮೊದಲ ದಿನದಂತ್ಯಕ್ಕೆ) (ಗಿಲ್ 10*, ಜೈಸ್ವಾಲ್ 6*, ಸೌಥಿ 1-4)
06ನೇ ಬಾರಿ: ಭಾರತದಲ್ಲಿ ಟೆಸ್ಟ್‌ನ ಮೊದಲ ದಿನ ಇನ್ನಿಂಗ್ಸ್‌ನ ಎಲ್ಲಾ 10 ವಿಕೆಟ್‌ಗಳನ್ನು ಸ್ಪಿನ್ನರ್‌ಗಳ ಪಾಲಾಗಿದ್ದು ಇದು 6ನೇ ಬಾರಿ.
05ನೇ ಬೌಲರ್: ಇನ್ನಿಂಗ್ಸ್‌ನಲ್ಲಿ ಎದುರಾಳಿ ತಂಡದ 5 ಬ್ಯಾಟರ್‌ಗಳನ್ನು ಬೌಲ್ಡ್ ಮಾಡಿದ ಭಾರತದ 5ನೇ ಬೌಲರ್ ವಾಷಿಂಗ್ಟನ್.
01ನೇ ಬಾರಿ: ವಾಷಿಂಗ್ಟನ್ ಸುಂದರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿ 5+ ವಿಕೆಟ್ ಪಡೆದರು.
ಕಿವೀಸ್ ವಿರುದ್ಧ 7+ ವಿಕೆಟ್ ಕಿತ್ತ ಭಾರತ 4ನೇ ಬೌಲರ್
ವಾಷಿಂಗ್ಟನ್ ಸುಂದರ್ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ಭಾರತ ಪರ 7+ ವಿಕೆಟ್ ಕಿತ್ತ 4ನೇ ಬೌಲರ್. 1965ರಲ್ಲಿ ವೆಂಕಟರಾಘವನ್ 8(ಡೆಲ್ಲಿ ಟೆಸ್ಟ್), 1975ರಲ್ಲಿ ಕರ್ನಾಟಕದ ಇಎಎಸ್ ಪ್ರಸನ್ನ 8(ಆಕ್ಲಂಡ್), 2017ರಲ್ಲಿ ಆರ್.ಅಶ್ವಿನ್(ಇಂದೋರ್) 7 ವಿಕೆಟ್ ಪಡೆದಿದ್ದರು. ಪ್ರಸನ್ನ ಹೊರತುಪಡಿಸಿ ಇತರ ಮೂವರು ಕೂಡಾ ತಮಿಳುನಾಡಿನವರು.