ಚೊಚ್ಚಲ ಅಂಡರ್‌-19 ಮಹಿಳಾ ಏಷ್ಯಾಕಪ್‌: ಕನ್ನಡತಿ ನಿಕಿ ನಾಯಕತ್ವದ ಭಾರತ ಚಾಂಪಿಯನ್‌

| Published : Dec 23 2024, 01:01 AM IST / Updated: Dec 23 2024, 04:09 AM IST

ಸಾರಾಂಶ

ಫೈನಲ್‌ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 41 ರನ್‌ ಗೆಲುವು. ಟೂರ್ನಿಯುದ್ದಕ್ಕೂ ಅಬ್ಬರಿಸಿದ್ದ ಭಾರತ ಫೈನಲ್‌ನಲ್ಲೂ ಎದುರಾಳಿ ಮೇಲೆ ಸವಾರಿ ಮಾಡಿತು.

ಕೌಲಾ ಲಂಪುರ: ಚೊಚ್ಚಲ ಆವೃತ್ತಿಯ ಅಂಡರ್‌-19 ಮಹಿಳಾ ಟಿ20 ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

 ಟೂರ್ನಿಯುದ್ದಕ್ಕೂ ಅಬ್ಬರಿಸಿದ್ದ ಭಾರತ ಫೈನಲ್‌ನಲ್ಲೂ ಎದುರಾಳಿ ಮೇಲೆ ಸವಾರಿ ಮಾಡಿತು. ಭಾನುವಾರ ನಡೆದ ಪ್ರಶಸ್ತಿ ಕದನದಲ್ಲಿ ಬಾಂಗ್ಲಾದೇಶ ವಿರುದ್ಧ 41 ರನ್‌ ಗೆಲುವು ಸಾಧಿಸಿತು.ಮೊದಲು ಬ್ಯಾಟ್‌ ಮಾಡಿದ ಭಾರತ ಬ್ಯಾಟಿಂಗ್‌ ವೈಫಲ್ಯಕ್ಕೆ ಒಳಗಾಗಿ 7 ವಿಕೆಟ್‌ಗೆ ಕೇವಲ 117 ರನ್‌ ಕಲೆಹಾಕಿತು.

 ಆರಂಭಿಕ ಆಟಗಾರ್ತಿ ಗೊಂಗಾಡಿ ತ್ರಿಷಾ 47 ಎಸೆತಗಳಲ್ಲಿ 52 ರನ್‌ ಸಿಡಿಸಿ ತಂಡಕ್ಕೆ ಆಸರೆಯಾದರು. ಬೇರೆ ಯಾರಿಂದಲೂ ತಂಡಕ್ಕೆ ಹೆಚ್ಚಿನ ಕೊಡುಗೆ ಸಿಗಲಿಲ್ಲ. ಮಿಥಿಲಾ ವಿನೋದ್‌ 17, ನಿಕಿ ಪ್ರಸಾದ್ 12 ರನ್‌ ಗಳಿಸಿದರು.

ಸುಲಭ ಗುರಿ ನೀಡಿದರೂ, ಮೊನಚು ದಾಳಿ ಸಂಘಟಿಸಿತ ಭಾರತ ತಂಡ ಬಾಂಗ್ಲಾವನ್ನು 18.3 ಓವರ್‌ಗಳಲ್ಲಿ 76 ರನ್‌ಗೆ ಆಲೌಟ್‌ ಮಾಡಿತು. ಆಯುಶಿ ಶುಕ್ಲಾ 17ಕ್ಕೆ 3 ವಿಕೆಟ್‌ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಸ್ಕೋರ್: ಭಾರತ 20 ಓವರಲ್ಲಿ 117/7 (ತ್ರಿಷಾ 52, ಮಿಥಿಲಾ 17, ಫರ್ಜಾನಾ 4/32), ಬಾಂಗ್ಲಾ 18.3 ಓವರಲ್ಲಿ 76/10 (ಫಿರ್ದೌಸ್‌ 22, ಆಯುಶಿ 3/17)

ಪಂದ್ಯಶ್ರೇಷ್ಠ: ಗೊಂಗಾಡಿ ತ್ರಿಷಾ

ಕನ್ನಡತಿ ನಿಕಿ ನಾಯಕತ್ವಕ್ಕೆ ಸಿಕ್ತು ಕಪ್‌

ಭಾರತ ತಂಡ ಕರ್ನಾಟಕದ ನಿಕಿ ಪ್ರಸಾದ್‌ ನಾಯಕತ್ವದಲ್ಲಿ ಚಾಂಪಿಯನ್‌ ಆಗಿದೆ. ಅವರು 3 ಇನ್ನಿಂಗ್ಸ್‌ಗಳಲ್ಲಿ 37 ರನ್‌ ಗಳಿಸಿದರೂ, ನಾಯಕತ್ವದಲ್ಲಿ ಮಿಂಚಿದ್ದಾರೆ. ತಂಡದ ಗೆಲುವಿನಲ್ಲಿ ಕರ್ನಾಟಕದ ಮತ್ತೋರ್ವ ಆಟಗಾರ್ತಿ ಮಿಥಿಲಾ ವಿನೋದ್‌ ಕೂಡಾ ಪ್ರಮುಖ ಪಾತ್ರ ವಹಿಸಿದ್ದಾರೆ.