ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್’ ಕ್ರಿಕೆಟ್‌. ಸುನಿಲ್‌ ಗವಾಸ್ಕರ್‌ ನೇತೃತ್ವದಲ್ಲಿ ನಡೆದ ಪಂದ್ಯ ಭಾರತ ಹಾಗೂ ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗರು ಸಮಾಗಮಕ್ಕೆ ಸಾಕ್ಷಿಯಾಯಿತು.

ಕೊಟ್ರೇಶ್‌ ಜಿಎಂ

 ಮುದ್ದೇನಹಳ್ಳಿ :  ಬೆಂಗಳೂರು ಸಮೀಪದ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಶನಿವಾರ ನಡೆದ ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್’ ಕ್ರಿಕೆಟ್‌ ಪಂದ್ಯದಲ್ಲಿ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.ಎಲ್ಲರಿಗೂ ಪೌಷ್ಟಿಕತೆ, ಆರೋಗ್ಯ ಮತ್ತು ಶಿಕ್ಷಣವನ್ನು ಸಕ್ರಿಯಗೊಳಿಸುವ ಮೂಲಕ ಮಾನವೀಯತೆಯ ಸೇವೆ ಮಾಡುವ ಗುರಿ ಇಟ್ಟುಕೊಂಡು ಶ್ರೀ ಮಧುಸೂದನ್ ಸಾಯಿ ಗ್ಲೋಬಲ್ ಹ್ಯುಮಾನಿಟೇರಿಯನ್ ಮಿಷನ್ ಈ ಪಂದ್ಯ ಆಯೋಜಿಸಿತ್ತು. 

ಸುನಿಲ್‌ ಗವಾಸ್ಕರ್‌ ನೇತೃತ್ವದಲ್ಲಿ ನಡೆದ ಪಂದ್ಯ ಭಾರತ ಹಾಗೂ ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗರು ಸಮಾಗಮಕ್ಕೆ ಸಾಕ್ಷಿಯಾಯಿತು.ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 195 ರನ್‌ ಗಳಿಸಿತು. 

ಯೂಸುಫ್‌ ಪಠಾಣ್‌ 61, ನಮನ್‌ ಓಜಾ 53, ಮನೋಜ್‌ ತಿವಾರಿ 44 ರನ್‌ ಗಳಿಸಿದರು. ವೆಂಕಟೇಶ್ ಪ್ರಸಾದ್ ನಾಯಕತ್ವದ ತಂಡದಲ್ಲಿ ಇರ್ಫಾನ್‌ ಪಠಾಣ್‌, ಪಾರ್ಥಿವ್‌ ಪಟೇಲ್‌, ಬದ್ರೀನಾಥ್‌ ಕೂಡಾ ಇದ್ದರು. ದೊಡ್ಡ ಗುರಿ ಬೆನ್ನತ್ತಿದ ಶ್ರೀಲಂಕಾ 9 ವಿಕೆಟ್‌ಗೆ 189 ರನ್‌ ಗಳಿಸಿ, 6 ರನ್‌ಗಳಿಂದ ಪರಾಭವಗೊಂಡಿತು. 

ಮುತ್ತಯ್ಯ ಮುರಳೀಧರನ್‌, ಮಾರ್ವನ್ ಅಟಪಟ್ಟು, ಅರವಿಂದ ಡಿ ಸಿಲ್ವಾ, ಅರ್ಜುನ ರಣತುಂಗ, ಚಮಿಂಡಾ ವಾಸ್, ಉಪುಲ್‌ ತರಂಗ ಸೇರಿ ಪ್ರಮುಖರು ಶ್ರೀಲಂಕಾ ತಂಡದ ಭಾಗವಾಗಿದ್ದರು.ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಗವಾಸ್ಕರ್‌, ‘ಕ್ರಿಕೆಟ್ ಭಾರತದಲ್ಲಿ ಕೇವಲ ಕ್ರೀಡೆಯಲ್ಲ. ಅದನ್ನು ಒಂದು ಧರ್ಮವಾಗಿ ಗೌರವಿಸಲಾಗುತ್ತದೆ. ಉದಾತ್ತ ಗುರಿಯೊಂದಿಗೆ ಕ್ರಿಕೆಟ್‌ ಆಯೋಜಿಸಿದ ಸದ್ಗುರು ಶ್ರೀ ಮಧುಸೂದನ್ ಸಾಯಿ ಅವರಿಗೆ ಧನ್ಯವಾದಗಳು’ ಎಂದು ಹೇಳಿದರು.