ಸಾರಾಂಶ
ಸೆಂಚೂರಿಯನ್: ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ...ಹೀಗೆ ಭಾರತ ಎಲ್ಲೆಲ್ಲಾ ಟೆಸ್ಟ್ ಸರಣಿ ಆಡಿದೆಯೋ ಅಲ್ಲೆಲ್ಲಾ ಆತಿಥೇಯರನ್ನೇ ಮಣ್ಣು ಮುಕ್ಕಿಸಿ ಸರಣಿ ಗೆದ್ದು ಪರಾಕ್ರಮ ಮೆರೆದಿದೆ. ಆದರೆ ಭಾರತ ಟೆಸ್ಟ್ ಸರಣಿ ಗೆಲ್ಲದ ಏಕೈಕ ದೇಶವೆಂದರೆ ಅದು ದಕ್ಷಿಣ ಆಫ್ರಿಕಾ ಮಾತ್ರ. 3 ದಶಕಗಳಿಂದಲೂ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಆಡುತ್ತಿದ್ದರೂ ಒಮ್ಮೆಯೂ ಸರಣಿ ಗೆದ್ದಿಲ್ಲ. ಅದನ್ನು ಈ ಬಾರಿಯಾದರೂ ಸಾಧಿಸಲು ಪಣ ತೊಟ್ಟಿದ್ದು, ಮಂಗಳವಾರದಿಂದ ಆತಿಥೇಯರ ವಿರುದ್ಧ 2 ಪಂದ್ಯಗಳ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಮೊದಲ ಪಂದ್ಯಕ್ಕೆ ಸೆಂಚೂರಿಯನ್ ಆತಿಥ್ಯ ವಹಿಸಲಿದೆ.
ಅನುಭವಿ ಹಾಗೂ ಯುವ ಪಡೆಗಳೊಂದಿಗೆ ಆಫ್ರಿಕಾಕ್ಕೆ ವಿಮಾನವೇರಿರುವ ಭಾರತಕ್ಕೆ ಈ ಬಾರಿಯೂ ಅಗ್ನಿಪರೀಕ್ಷೆ ಎದುರಾಗುವುದು ಖಚಿತ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಪ್ರಮುಖರು ತಂಡದಲ್ಲಿದ್ದು ಈ ಮೊದಲು ಸಾಧಿಸಲಾಗದ್ದನ್ನು ಈ ಬಾರಿ ಸಾಧಿಸಲು ಎದುರು ನೋಡುತ್ತಿದ್ದಾರೆ. ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್ ದ.ಆಫ್ರಿಕಾದ ಬೌನ್ಸಿ ಪಿಚ್‌ಗಳಲ್ಲಿ ಎಷ್ಟರ ಮಟ್ಟಿಗೆ ಯಶಸ್ಸು ಸಾಧಿಸಲಿದ್ದಾರೆ ಎಂಬ ಕುತೂಹಲವಿದೆ. ಇನ್ನು ಶ್ರೇಯಸ್ ಅಯ್ಯರ್ ಮೇಲೆ ಹೆಚ್ಚಿನ ನಿರೀಕ್ಷೆ ಇದ್ದು, ವಿಕೆಟ್ ಕೀಪರ್ ಬ್ಯಾಟರ್ ಆಗಿ ಕೆ.ಎಲ್.ರಾಹುಲ್ ಕಣಕ್ಕಿಳಿಯುವುದು ಬಹುತೇಕ ಖಚಿತ.ಮತ್ತೊಂದೆಡೆ ಆಲ್ರೌಂಡ್ ವಿಭಾಗದಲ್ಲಿ ರವೀಂದ್ರ ಜಡೇಜಾ ತಂಡದ ಮೊದಲ ಆಯ್ಕೆಯಾಗಿದ್ದು, ಮತ್ತೊಂದು ಸ್ಥಾನಕ್ಕೆ ಶಾರ್ದೂಲ್ ಠಾಕೂರ್ ಮತ್ತು ಆರ್.ಅಶ್ವಿನ್ ನಡುವೆ ಸ್ಪರ್ಧೆ ಏರ್ಪಡಬಹುದು. ಪಿಚ್ ವೇಗಿಗಳಿಗೆ ಹೆಚ್ಚಿನ ನೆರವು ಸಿಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅಶ್ವಿನ್‌ಗೆ ಜಾಗ ಸಿಗದೇ ಇರಬಹುದು. ಜಸ್‌ಪ್ರೀತ್ ಬೂಮ್ರಾ, ಮೊಹಮದ್ ಸಿರಾಜ್ ಅವರನ್ನೊಳಗೊಂಡ ವೇಗದ ಬೌಲಿಂಗ್ ವಿಭಾಗ ಬಲಿಷ್ಠವಾಗಿದ್ದು, ಅನುಭವಿ ಮೊಹಮದ್ ಶಮಿ ಅನುಪಸ್ಥಿತಿ ಕಾರಣ ಆ ಜಾಗಕ್ಕೆ ಪ್ರಸಿದ್ಧ್ ಕೃಷ್ಣ ಅಥವಾ ಮುಕೇಶ್ ಕುಮಾರ್ ನಡುವೆ ಪೈಪೋಟಿ ಇದೆ.
ಆತ್ಮವಿಶ್ವಾಸದಲ್ಲಿ ಆಫ್ರಿಕಾ: ಇನ್ನೊಂದೆಡೆ ದ.ಆಫ್ರಿಕಾ ತವರಿನಲ್ಲಿ ಭಾರತ ವಿರುದ್ಧ ಅತ್ಯುತ್ತಮ ದಾಖಲೆ ಹೊಂದಿದ್ದು, ಇದೇ ಹುಮ್ಮಸ್ಸಿನಲ್ಲಿ ಸರಣಿಗೆ ಕಾಲಿಡಲಿದೆ. ತನ್ನ ವೇಗಿಗಳ ಮೇಲೆ ಹೆಚ್ಚಿನ ಭರವಸೆ ಇಟ್ಟುಕೊಂಡಿರುವ ಆಫ್ರಿಕಾ, ಕೊಹ್ಲಿ, ರೋಹಿತ್ ಸೇರಿದಂತೆ ಬಲಿಷ್ಠ ಭಾರತೀಯ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ನಿರೀಕ್ಷೆಯಲ್ಲಿದೆ. ಎಲ್ಗರ್, ಮಾರ್ಕ್‌ರಮ್ ಅವರನ್ನೊಳಗೊಂಡ ಬ್ಯಾಟಿಂಗ್ ಬಳಗವೂ ದ.ಆಫ್ರಿಕಾದ ಪ್ಲಸ್ ಪಾಯಿಂಟ್.-
ಒಟ್ಟು ಮುಖಾಮುಖಿ: 42ಭಾರತ: 15
ದ.ಆಫ್ರಿಕಾ: 17ಡ್ರಾ: 10
--ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್(ನಾಯಕ), ಜೈಸ್ವಾಲ್, ಗಿಲ್, ವಿರಾಟ್, ರಾಹುಲ್, ಶ್ರೇಯಸ್, ಜಡೇಜಾ, ಶಾರ್ದೂಲ್/ಅಶ್ವಿನ್, ಬೂಮ್ರಾ, ಪ್ರಸಿದ್ಧ್, ಸಿರಾಜ್.ದ.ಆಫ್ರಿಕಾ: ಎಲ್ಗರ್, ಮಾರ್ಕ್‌ರಮ್, ಜೊರ್ಜಿ, ಬವುಮಾ(ನಾಯಕ), ಬೆಡಿಂಗ್‌ಹ್ಯಾಮ್/ಕೀಗನ್, ವೆರೈನ್, ಯಾನ್ಸನ್, ಕೇಶವ್, ಕೋಟ್ಜೀ, ರಬಾಡ, ಎನ್‌ಗಿಡಿ.
-ಪಿಚ್ ರಿಪೋರ್ಟ್
ಸೆಂಚೂರಿಯನ್ ಕ್ರೀಡಾಂಗಣದ ಪಿಚ್ ವೇಗಿಗಳಿಗೆ ಹೆಚ್ಚಿನ ನೀಡುವ ನಿರೀಕ್ಷೆಯಿದೆ. ಹೆಚ್ಚಿನ ಬೌನ್ಸ್ ಕೂಡಾ ಇರಲಿದೆ. ಆದರೆ ಪಂದ್ಯ ಸಾಗಿದಂತೆ ಬ್ಯಾಟರ್‌ಗಳಿಗೆ ರನ್ ಗಳಿಸಲು ಸುಲಭವಾಗಬಹುದು. ಟಾಸ್ ಗೆಲ್ಲುವ ತಂಡ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ.---
ಈ ವರೆಗೆ ಆಫ್ರಿಕಾದಲ್ಲಿಭಾರತ ಗೆದ್ದಿದ್ದು 4 ಟೆಸ್ಟ್
ಭಾರತ ತಂಡ 1992ರಿಂದ ದ.ಆಫ್ರಿಕಾದಲ್ಲಿ ಈ ವರೆಗೆ 8 ಟೆಸ್ಟ್ ಸರಣಿ ಆಡಿದೆ. ಆದರೆ ಒಮ್ಮೆ ಕೂಡಾ ಗೆದ್ದಿಲ್ಲ. 7 ಬಾರಿ ಸರಣಿ ಸೋತಿರುವ ಭಾರತ, 2010-11ರಲ್ಲಿ ಸರಣಿಯನ್ನು 1-1ರಲ್ಲಿ ಡ್ರಾಗೊಳಿಸಿತ್ತು. ಆದರೆ ತಂಡ ದ.ಆಫ್ರಿಕಾದಲ್ಲಿ ಒಟ್ಟು 4 ಪಂದ್ಯಗಳನ್ನು ಗೆದ್ದಿದೆ. ಉಳಿದಂತೆ ಉಭಯ ತಂಡಗಳು ಈ ವರೆಗೆ 15 ಟೆಸ್ಟ್ ಆಡಿದ್ದು, 8ರಲ್ಲಿ ಆಫ್ರಿಕಾ ಗೆದ್ದಿದ್ದರೆ, 4 ಸರಣಿ ಭಾರತದ ಕೈವಶವಾಗಿದೆ. 3 ಬಾರಿ ಸರಣಿ ಡ್ರಾಗೊಂಡಿವೆ.-
ಕೃಪೆ ತೋರುವನೇ ಮಳೆರಾಯ?ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಸೆಂಚೂರಿಯನ್‌ನಲ್ಲಿ ಈ ವಾರ ಮಳೆಯಾಗಲಿದೆ. ಅದರಲ್ಲೂ ಪಂದ್ಯದ ಮೊದಲ ದಿನ ಅಂದರೆ ಮಂಗಳವಾರ ಭಾರೀ ಮಳೆ ಮುನ್ಸೂಚನೆ ಇದೆ. ಪಂದ್ಯಕ್ಕೂ ಅಡ್ಡಿಯಾಗುವ ಸಾಧ್ಯತೆ ಹೆಚ್ಚು.
-