ಗ್ರೀಕೊ-ರೋಮನ್‌ ಕುಸ್ತಿ: ಈ ಬಾರಿ ಒಲಿಂಪಿಕ್ಸ್‌ನಲ್ಲೂ ಭಾರತೀಯರ ಸ್ಪರ್ಧೆ ಇಲ್ಲ!

| Published : May 10 2024, 11:48 PM IST

ಸಾರಾಂಶ

ಕುಸ್ತಿಯಲ್ಲಿ 3 ವಿಭಾಗಗಳಿವೆ. ಸದ್ಯ ಮಹಿಳಾ ಮತ್ತು ಪುರುಷರ ಫ್ರೀಸ್ಟೈಲ್‌ನಲ್ಲಿ ಭಾರತ ಪ್ಯಾರಿಸ್‌ ಒಲಿಂಪಿಕ್ಸ್‌ ಕೋಟಾ ಗೆಲ್ಲುವ ನಿರೀಕ್ಷೆಯಲ್ಲಿದೆ.

ಇಸ್ತಾಂಬುಲ್‌(ಟರ್ಕಿ): 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಭಾರತದ ಗ್ರೀಕೊ-ರೋಮನ್‌ ಕುಸ್ತಿಪಟುಗಳು ಅರ್ಹತೆ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲೂ ಭಾರತಕ್ಕೆ ಈ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿರಲಿಲ್ಲ. ಕುಸ್ತಿಯಲ್ಲಿ 3 ವಿಭಾಗಗಳಿದ್ದು, ಮಹಿಳಾ ಮತ್ತು ಪುರುಷರ ಫ್ರೀಸ್ಟೈಲ್‌ನಲ್ಲಿ ಭಾರತ ಕೋಟಾ ಗೆಲ್ಲುವ ನಿರೀಕ್ಷೆಯಲ್ಲಿದೆ. ಸದ್ಯ ಇಸ್ತಾಂಬುಲ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ ವಿಶ್ವ ಅರ್ಹತಾ ಕುಸ್ತಿ ಟೂರ್ನಿಯಲ್ಲಿ ಭಾರತದ ಗ್ರೀಕೊ-ರೋಮನ್‌ ಕುಸ್ತಿಪಟುಗಳಾದ ಸುಮಿತ್‌(60 ಕೆ.ಜಿ.), ಆಶು(67 ಕೆ.ಜಿ.), ವಿಕಾಸ್‌(77 ಕೆ.ಜಿ.), ಸುನಿಲ್‌ ಕುಮಾರ್‌(87 ಕೆ.ಜಿ.), ನಿತೇಶ್‌(97 ಕೆ.ಜಿ.) ಹಾಗೂ ನವೀನ್‌(130 ಕೆ.ಜಿ.) ಸೋಲನುಭವಿಸಿದರು.ಮೂತ್ರ ಮಾದರಿ ನೀಡಲು ನಿರಾಕರಿಸಿಲ್ಲ: ಬಜರಂಗ್‌

ನವದೆಹಲಿ: ಡೋಪ್‌ ಟೆಸ್ಟ್‌ಗಾಗಿ ಮೂತ್ರದ ಮಾದರಿ ನೀಡಲು ನಿರಾಕರಿಸಿದ್ದಕ್ಕೆ ಜಾಗತಿಕ ಕುಸ್ತಿ ಒಕ್ಕೂಟದಿಂದ ಅಮಾನತುಗೊಂಡಿರುವ ಒಲಿಂಪಿಕ್ಸ್‌ ಪದಕ ವಿಜೇತ ಕುಸ್ತಿಪಟು ಬಜರಂಗ್‌ ಪೂನಿಯಾ, ತಾವು ಮೂತ್ರದ ಮಾದರಿ ನೀಡಲು ನಿರಾಕರಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಶುಕ್ರವಾರ ಮಾತನಾಡಿರುವ ಅವರು, ‘ಆಯ್ಕೆ ಟ್ರಯಲ್ಸ್ ವೇಳೆ ಅಧಿಕಾರಿಗಳು ಸಮರ್ಪಕ ಕಿಟ್‌ ನೀಡಿರಲಿಲ್ಲ. ಹೀಗಾಗಿ ಅದರ ಬಗ್ಗೆ ಸ್ಪಷ್ಟನೆ ಕೇಳಿದ್ದೆ. ಆ ಬಳಿಕವೇ ಮಾದರಿ ನೀಡುವುದಾಗಿ ತಿಳಿಸಿದ್ದೆ. ಈ ಹಿಂದೆಯೂ 2 ಬಾರಿ ಅವಧಿ ಮುಗಿದ ಕಿಟ್‌ ಕೊಟ್ಟಿದ್ದರು. ಇದೇ ಕಾರಣಕ್ಕೆ ಕಿಟ್‌ ಬಗ್ಗೆ ಅಧಿಕಾರಿಗಳಿಂದ ವಿವರಣೆ ಬಯಸಿದ್ದೆ. ಹೀಗಾಗಿ ಮೂತ್ರದ ಮಾದರಿ ನೀಡಿರಲಿಲ್ಲ’ ಎಂದಿದ್ದಾರೆ. ಇತ್ತೀಚೆಗಷ್ಟೇ ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಘಟಕ(ನಾಡಾ) ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು. ಗುರುವಾರ ಜಾಗತಿಕ ಕುಸ್ತಿ ಸಂಸ್ಥೆಯೂ ಅವರ ಮೇಲೆ ಅಮಾನತು ಹೇರಿತ್ತು.