ಸಾರಾಂಶ
ಹಲವು ವರ್ಷಗಳ ಬಳಿಕ ಕ್ರಿಕೆಟ್ ಅಭಿಮಾನಿಗಳು ಭಾರತೀಯ ತಂಡದಿಂದ ಕೆಚ್ಚೆದೆಯ ಹೋರಾಟ, ಶರಣಾಗಲ್ಲ ಎಂಬ ಛಲ ಹಾಗೂ ಎದುರಾಳಿಗೆ ಕೊಟ್ಟ ದಿಟ್ಟ ಉತ್ತರವನ್ನು ಕಣ್ತುಂಬಿಕೊಂಡರು
ಮ್ಯಾಂಚೆಸ್ಟರ್: ಹಲವು ವರ್ಷಗಳ ಬಳಿಕ ಕ್ರಿಕೆಟ್ ಅಭಿಮಾನಿಗಳು ಭಾರತೀಯ ತಂಡದಿಂದ ಕೆಚ್ಚೆದೆಯ ಹೋರಾಟ, ಶರಣಾಗಲ್ಲ ಎಂಬ ಛಲ ಹಾಗೂ ಎದುರಾಳಿಗೆ ಕೊಟ್ಟ ದಿಟ್ಟ ಉತ್ತರವನ್ನು ಕಣ್ತುಂಬಿಕೊಂಡರು. ಇನ್ನಿಂಗ್ಸ್ ಸೋಲಿನ ಭೀತಿಗೆ ಒಳಗಾಗಿದ್ದರೂ ಅಪ್ರತಿಮ ಹೋರಾಟ ಪ್ರದರ್ಶಿಸಿದ ಟೀಂ ಇಂಡಿಯಾ, ಭಾನುವಾರ ಕೊನೆಗೊಂಡ ಇಂಗ್ಲೆಂಡ್ ವಿರುದ್ದ 4ನೇ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಇದರೊಂದಿಗೆ ಸರಣಿ ಸೋಲಿನ ಭೀತಿಯಿಂದ ಪಾರಾಗಿದೆ. 4 ಪಂದ್ಯಗಳ ಬಳಿಕ ಇಂಗ್ಲೆಂಡ್ ಸದ್ಯ 2-1ರಿಂದ ಮುನ್ನಡೆಯಲ್ಲಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ 311 ರನ್‌ಗಳ ಹಿನ್ನಡೆ ಅನುಭವಿಸಿ, ಬಳಿಕ ಸೊನ್ನೆಗೆ 2 ವಿಕೆಟ್ ಬಿದ್ದಾಗ ಭಾರತದ ಸೋಲು ಖಚಿತ ಎಂದೇ ಹೇಳಲಾಗುತ್ತಿತ್ತು. ಆದರೆ ಭಾರತೀಯರು ಸೋಲೊಪ್ಪಲು ತಯಾರಿರಲಿಲ್ಲ. ನಾಯಕ ಶುಭ್‌ಮನ್ ಗಿಲ್ ಹಾಗೂ ಕೆ.ಎಲ್.ರಾಹುಲ್‌ರ ಹೋರಾಟದಿಂದಾಗಿ 4ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 174 ರನ್ ಗಳಿಸಿದ್ದ ತಂಡ, ಕೊನೆ ದಿನವಾದ ಭಾನುವಾರವೂ ಅಭೂತಪೂರ್ವ ಆಟವಾಡಿತು. ತಂಡ 4 ವಿಕೆಟ್‌ಗೆ 425 ರನ್ ಗಳಿಸಿದ್ದಾಗ ಪಂದ್ಯ ಡ್ರಾಗೊಳಿಸಲಾಯಿತು.
ಮೂವರು ಶತಕ:
3ನೇ ವಿಕೆಟ್‌ಗೆ ರಾಹುಲ್-ಗಿಲ್ 188 ರನ್ ಜೊತೆಯಾಟವಾಡಿದರು. ಆದರೆ ಶತಕದ ಅಂಚಿನಲ್ಲಿದ್ದ ರಾಹುಲ್(90) ಎಡವಿದರು. ರಿಷಭ್ ಪಂತ್ ಗಾಯಗೊಂಡಿದ್ದರಿಂದ ಭಡ್ತಿ ಪಡೆದು ಬಂದ ವಾಷಿಂಗ್ಟನ್ ಸುಂದರ್, ಗಿಲ್ ಜೊತೆಗೂಡಿ ಇನ್ನಿಂಗ್ಸ್ ಕಟ್ಟಿದರು. ಸರಣಿಯಲ್ಲಿ 4ನೇ ಶತಕ ಸಿಡಿಸಿದ ಗಿಲ್, 238 ಎಸೆತಗಳಲ್ಲಿ 103 ರನ್ ಗಳಿಸಿ ಔಟಾದರು.
ಈ ವೇಳೆ ಭಾರತ ಸಂಕಷ್ಟಕ್ಕೆ ಒಳಗಾಯಿತು. ಆದರೆ ಮುರಿಯದ 5ನೇ ವಿಕೆಟ್‌ಗೆ ಜೊತೆಯಾದ ಸುಂದರ್ ಹಾಗೂ ರವೀಂದ್ರ ಜಡೇಜಾ ಇಂಗ್ಲೆಂಡ್‌ನ ಗೆಲುವಿನ ಆಸೆಗೆ ತಣ್ಣೀರೆರಚಿದರು. ಈ ಜೋಡಿ 334 ಎಸೆತಗಳನ್ನು ಎದುರಿಸಿ 203 ರನ್ ಸೇರಿಸಿತು. ತಂಡವನ್ನು ಇನ್ನಿಂಗ್ಸ್ ಸೋಲಿನಿಂದ ಪಾರು ಮಾಡಿದ್ದಲ್ಲದೇ, 114 ರನ್ ಮುನ್ನಡೆಯನ್ನೂ ಒದಗಿಸಿದರು. ಸುಂದರ್(ಔಟಾಗದೆ 101) ಟೆಸ್ಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದರೆ, ಜಡೇಜಾ(ಔಟಾಗದೆ 107) 5ನೇ ಶತಕ ಪೂರ್ಣಗೊಳಿಸಿದರು. ಇದರ ಬೆನ್ನಲ್ಲೇ ಪಂದ್ಯ ಡ್ರಾಗೊಳಿಸಲಾಯಿತು.
ಇದಕ್ಕೂ ಮುನ್ನ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 358 ರನ್ ಗಳಿಸಿದ್ದರೆ, ಇಂಗ್ಲೆಂಡ್ 669 ರನ್ ಸಿಡಿಸಿ ಬೃಹತ್ ಮುನ್ನಡೆ ಪಡೆದಿತ್ತು.
ಸ್ಕೋರ್: ಭಾರತ 358/10 ಮತ್ತು 425/4 (ಜಡೇಜಾ 107*, ಗಿಲ್ 103, ವಾಷಿಂಗ್ಟನ್ 101*, ವೋಕ್ಸ್ 2-67), ಇಂಗ್ಲೆಂಡ್ 669/10
ಪಂದ್ಯಶ್ರೇಷ್ಠ: ಬೆನ್ ಸ್ಟೋಕ್ಸ್(141 ರನ್, 5 ವಿಕೆಟ್)
ಸ್ಟೋಕ್ಸ್ ಡ್ರಾ ಮಾಡೋಣ ಎಂದರೂ ಒಪ್ಪದ ಭಾರತ!
ಜಡೇಜಾ-ವಾಷಿಂಗ್ಟನ್ ಸುಂದರ್ ದಿಟ್ಟ ಹೋರಾಟದ ಮೂಲಕ ಪಂದ್ಯವನ್ನು ಡ್ರಾ ಮಾಡಿದರು. ಆದರೆ5ನೇ ದಿನದಾಟ ಕೊನೆಗೊಳ್ಳಲು 10ಕ್ಕೂ ಹೆಚ್ಚು ಓವರ್ ಬಾಕಿ ಇದ್ದಾಗಲೇ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಪಂದ್ಯ ಡ್ರಾ ಮಾಡಲು ಮನವಿ ಮಾಡಿದರು. ಆಗ ಜಡೇಜಾ 89, ಸುಂದರ್ 80 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಸ್ಟೋಕ್ಸ್ ಡ್ರಾ ಮಾಡಲು ಹಸ್ತಾಲಾಘವಕ್ಕೆ ಮುಂದಾದರೂ, ಜಡೇಜಾ-ಸುಂದರ್ ಒಪ್ಪಲಿಲ್ಲ. ಹೀಗಾಗಿ ಪಂದ್ಯ ಮುಂದುವರಿಯಿತು. ಬಳಿಕ 5 ಓವರ್ ಆಡಿ, ಇಬ್ಬರೂ ಶತಕ ಸಿಡಿಸಿದ ನಂತರ ಪಂದ್ಯ ಡ್ರಾಗೊಳಿಸಲಾಯಿತು.
35 ವರ್ಷದ ಕಾಯುವಿಕೆ ಬಳಿಕ ಒಂದೇ ಪಂದ್ಯದಲ್ಲಿ ಭಾರತದಿಂದ 3 ಶತಕ!
ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಬರೋಬ್ಬರಿ 35 ವರ್ಷಗಳ ಬಳಿಕ ಭಾರತೀಯ ಬ್ಯಾಟರ್‌ಗಳು ಶತಕ ಬಾರಿಸಿದರು. 1990ರಲ್ಲಿ ಸಚಿನ್ ತೆಂಡುಲ್ಕರ್ ತಮ್ಮ 17ನೇ ವರ್ಷದಲ್ಲಿ ಈ ಕ್ರೀಡಾಂಗಣದಲ್ಲಿ ಸೆಂಚುರಿ ಸಿಡಿಸಿದ್ದರು. ಬಳಿಕ ಈವರೆಗೂ ಶತಕ ದಾಖಲಾಗಿರಲಿಲ್ಲ. ಆದರೆ ಈಗ ಒಂದೇ ಪಂದ್ಯದಲ್ಲಿ ಗಿಲ್, ಜಡೇಜಾ, ವಾಷಿಂಗ್ಟನ್ ಸುಂದರ್ ಶತಕ ಗಳಿಸಿದ್ದಾರೆ.
7 ಬಾರಿ 350+ ರನ್ : ಭಾರತ ವಿಶ್ವದಾಖಲೆ
ಇಂಗ್ಲೆಂಡ್ ಸರಣಿಯ 4 ಪಂದ್ಯಗಳಲ್ಲಿ ಭಾರತ ತಂಡ 7 ಬಾರಿ 350+ ರನ್ ಗಳಿಸಿದೆ. ಇದು ವಿಶ್ವ ದಾಖಲೆ. ಈ ಹಿಂದೆ ಆಸ್ಟ್ರೇಲಿಯಾ ತಂಡ 3 ಸರಣಿಗಳಲ್ಲಿ ತಲಾ 6 ಬಾರಿ ಈ ಸಾಧನೆ ಮಾಡಿತ್ತು. 1920/21, 1948 ಹಾಗೂ 1989ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಸರಣಿಗಳಲ್ಲಿ ಆಸೀಸ್ ಈ ದಾಖಲೆ ಬರೆದಿತ್ತು. ಅದನ್ನು ಭಾರತ ಮುರಿದಿದೆ.
ಸರಣಿಯಲ್ಲಿ ಭಾರತದ 11 ಶತಕ: ಜಂಟಿ ಗರಿಷ್ಠ
ಭಾರತೀಯ ಆಟಗಾರರು ಈ ಸರಣಿಯಲ್ಲಿ 11 ಶತಕ ಸಿಡಿಸಿದ್ದಾರೆ. ಇದು ತಂಡದ ಜಂಟಿ ಗರಿಷ್ಠ. 1978-19ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ತವರಿನ ಸರಣಿಯಲ್ಲೂ ಟೀಂ ಇಂಡಿಯಾ ಆಟಗಾರರಿಂದ 11 ಶತಕ ದಾಖಲಾಗಿದ್ದವು.
ಭಾರತದ ನಾಲ್ವರಿಂದ400+ ರನ್: ದಾಖಲೆ
ಈ ಸರಣಿಯಲ್ಲಿ ಗಿಲ್, ಕೆ.ಎಲ್.ರಾಹುಲ್, ರಿಷಭ್ ಪಂತ್, ಜಡೇಜಾ ತಲಾ 400+ ರನ್ ಗಳಿಸಿದ್ದಾರೆ. ಟೆಸ್ಟ್ ಸರಣಿಯೊಂದರಲ್ಲಿ ಭಾರತದ ನಾಲ್ವರು ಈ ಸಾಧನೆ ಮಾಡಿದ್ದು ಇದೇ ಮೊದಲು.