ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ರಿಲೇ ತಂಡಗಳು. ಬಹಮಾಸ್‌ನಲ್ಲಿ ನಡೆದ ವಿಶ್ವ ರಿಲೇ ಚಾಂಪಿಯನ್‌ಶಿಪ್‌ನಲ್ಲಿ ಆಕರ್ಷಕ ಪ್ರದರ್ಶನ ತೋರಿದ ಭಾರತ ಪುರುಷ, ಮಹಿಳಾ ತಂಡಗಳು.

ನಸ್ಸೌ(ಬಹಮಾಸ್‌): ಭಾರತದ ಪುರುಷ ಹಾಗೂ ಮಹಿಳಾ 4X400 ರಿಲೇ ತಂಡಗಳು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿವೆ. ಇಲ್ಲಿ ನಡೆದ ವಿಶ್ವ ರಿಲೇ ಚಾಂಪಿಯನ್‌ಶಿಪ್‌ನ 2ನೇ ಸುತ್ತಿನಲ್ಲಿ ಭಾರತ ಪುರುಷ ಹಾಗೂ ಮಹಿಳಾ ತಂಡಗಳೆರಡೂ 2ನೇ ಸ್ಥಾನ ಪಡೆದವು. 

ಮೊದಲು ರೂಪಲ್‌ ಚೌಧರಿ, ಎಂ.ಆರ್‌.ಪೂವಮ್ಮ, ಜ್ಯೋತಿಕಾ ಶ್ರೀ ದಂಡಿ ಹಾಗೂ ಶುಭಾ ವೆಂಕಟೇಶನ್‌ ಅವರಿದ್ದ ತಂಡ 3 ನಿಮಿಷ 29.35 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 2ನೇ ಸ್ಥಾನ ಪಡೆಯಿತು. 

ಜಮೈಕಾ (3:28.54) ಮೊದಲ ಸ್ಥಾನ ಗಳಿಸಿತು. ಬಳಿಕ ಮುಹಮ್ಮದ್‌ ಅನಾಸ್‌, ಮುಹಮ್ಮದ್‌ ಅಜ್ಮಲ್‌, ರಾಜೀವ್‌ ಅರೋಕಿಯಾ ಹಾಗೂ ಅಮೋಲ್‌ ಜೇಕಬ್‌ ಅವರಿದ್ದ ತಂಡ 3 ನಿಮಿಷ 3.23 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 2ನೇ ಸ್ಥಾನ ಪಡೆಯಿತು. ಅಮೆರಿಕ (2:59.95) ಮೊದಲ ಸ್ಥಾನ ಗಳಿಸಿತು.