ಆಸೀಸ್‌ನ ಸೋಲಿಸಿದ ಟೀಂ ಇಂಡಿಯಾ ಸೆಮಿಫೈನಲ್‌ಗೆ ಲಗ್ಗೆ!

| Published : Jun 25 2024, 12:38 AM IST / Updated: Jun 25 2024, 04:07 AM IST

ಸಾರಾಂಶ

ಆಸ್ಟ್ರೇಲಿಯಾ ವಿರುದ್ಧ 24 ರನ್‌ ಗೆಲುವು. ಗುಂಪು-1ರಲ್ಲಿ ಮೊದಲ ಸ್ಥಾನದೊಂದಿಗೆ ಸೆಮಿಫೈನಲ್‌ಗೆ ಅಧಿಕೃತ ಪ್ರವೇಶ. ನಾಡಿದ್ದು ಇಂಗ್ಲೆಂಡ್‌ ವಿರುದ್ಧ ಸೆಣಸಾಟ. ಭಾರತ 205/5, ರೋಹಿತ್‌ 92 ರನ್‌. ಹೆಡ್‌ ಅಬ್ಬರಿಸಿದರೂ ಆಸೀಸ್‌ 181/7

ಗ್ರಾಸ್‌ ಐಲೆಟ್‌ (ಸೇಂಟ್‌ ಲೂಶಿಯಾ): 10 ವರ್ಷ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ಕನಸಿನೊಂದಿಗೆ 2024ರ ಟಿ20 ವಿಶ್ವಕಪ್‌ನಲ್ಲಿ ಆಡುತ್ತಿರುವ ಭಾರತ, ಸೆಮಿಫೈನಲ್‌ ಪ್ರವೇಶಿಸಿದ್ದು ಟ್ರೋಫಿ ಗೆಲುವಿಗೆ ಇನ್ನೆರಡೇ ಹೆಜ್ಜೆ ಬಾಕಿ ಇದೆ. ಸೋಮವಾರ ನಡೆದ ಸೂಪರ್‌-8 ಹಂತದ ತನ್ನ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 24 ರನ್‌ಗಳಿಂದ ಬಗ್ಗುಬಡಿದ ಭಾರತ, ಗುಂಪು-1ರಲ್ಲಿ ಮೊದಲ ಸ್ಥಾನ ಖಚಿತಪಡಿಸಿಕೊಂಡು ಸೆಮೀಸ್‌ಗೆ ಲಗ್ಗೆಯಿಟ್ಟಿತು. ಗುರುವಾರ ಗಯಾನದಲ್ಲಿ ನಡೆಯಲಿರುವ ಸೆಮೀಸ್‌ನಲ್ಲಿ ಭಾರತಕ್ಕೆ ಹಾಲಿ ಚಾಂಪಿಯನ್ ಇಂಗ್ಲೆಂಡ್‌ನ ಸವಾಲು ಎದುರಾಗಲಿದೆ. ಟೂರ್ನಿಯಲ್ಲಿ ಆಸೀಸ್‌ನ ಭವಿಷ್ಯ, ಅಫ್ಘಾನಿಸ್ತಾನದ ಕೈಯಲ್ಲಿದ್ದು, ಮಂಗಳವಾರ ಬಾಂಗ್ಲಾದೇಶ ವಿರುದ್ಧ ಆಫ್ಘನ್‌ ಗೆದ್ದರೆ ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಬೀಳಲಿದೆ.

ರನ್‌ ಹೊಳೆ: ಭಾರೀ ನಿರೀಕ್ಷೆ ಮೂಡಿಸಿದ್ದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಇಳಿಸಲ್ಪಟ್ಟ ಭಾರತಕ್ಕೆ ರೋಹಿತ್‌ ಶರ್ಮಾ ಅವರ ವಿಸ್ಫೋಟಕ ಬ್ಯಾಟಿಂಗ್‌ ಆಸರೆಯಾಯಿತು. ಕೊಹ್ಲಿ ಸೊನ್ನೆಗೆ ಔಟಾದರೂ, ಆರ್ಭಟ ನಿಲ್ಲಿಸದ ರೋಹಿತ್‌ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 205 ರನ್‌ಗಳ ದೊಡ್ಡ ಮೊತ್ತ ಕಲೆಹಾಕಲು ನೆರವಾದರು. ನೆಟ್‌ ರನ್‌ರೇಟ್‌ನಲ್ಲಿ ಭಾರತವನ್ನು ಹಿಂದಿಕ್ಕಬೇಕಿದ್ದರೆ ಆಸ್ಟ್ರೇಲಿಯಾ 206 ರನ್‌ ಗುರಿಯನ್ನು 15.3 ಓವರ್‌ನೊಳಗೆ ಬೆನ್ನತ್ತಬೇಕಿತ್ತು. ಒಂದು ವೇಳೆ 149 ರನ್‌ಗಿಂತ ಕಡಿಮೆ ಮೊತ್ತ ದಾಖಲಿಸಿದ್ದರೆ, ಆಸೀಸ್‌ ಹೊರಬೀಳುತ್ತಿತ್ತು. ಇನ್ನು ಆಫ್ಘನ್‌ಗೆ ಬಾಂಗ್ಲಾ ವಿರುದ್ಧದ ಪಂದ್ಯವನ್ನು ಮಾಡು ಇಲ್ಲವೇ ಮಡಿ ಪಂದ್ಯವಾಗಿಸಲು ಆಸೀಸ್‌ ಕನಿಷ್ಠ 176 ರನ್‌ ಗಳಿಸಲೇಬೇಕಿತ್ತು. ಈ ಗುರಿಯನ್ನು ತಲುಪಲು ಆಸೀಸ್‌ ಯಶಸ್ವಿಯಾಯಿತು. ಟ್ರ್ಯಾವಿಸ್‌ ಹೆಡ್ (43 ಎಸೆತದಲ್ಲಿ 76 ರನ್‌) ಮತ್ತೊಮ್ಮೆ ಭಾರತೀಯರನ್ನು ಕಾಡಿದರೂ, ನಿರ್ಣಾಯಕ ಹಂತಗಳಲ್ಲಿ ವಿಕೆಟ್‌ ಉರುಳಿಸಿದ ಭಾರತ, ಕಾಂಗರೂಗಳನ್ನು ಗೆಲುವಿನಿಂದ ದೂರವಿರಿಸಿತು. ಆಕರ್ಷಕ ಫೀಲ್ಡಿಂಗ್‌ ತಂಡಕ್ಕೆ ನೆರವಾಯಿತು. ಆಸೀಸ್‌ 20 ಓವರಲ್ಲಿ 7 ವಿಕೆಟ್‌ಗೆ 181 ರನ್‌ ಕಲೆಹಾಕಿ ಸೋಲೊಪ್ಪಿಕೊಂಡಿತು.

ರೋ‘ಹಿಟ್‌’ ರೋಷಾವೇಶ!: 2023ರ ಏಕದಿನ ವಿಶ್ವಕಪ್‌ ಫೈನಲ್‌ ಸೋಲಿಗೆ ಸೇಡು ತೀರಿಸಿಕೊಳ್ಳಬೇಕು ಎನ್ನುವ ರೀತಿಯಲ್ಲಿ ರೋಹಿತ್‌ ಬ್ಯಾಟ್‌ ಬೀಸಿದರು. 19 ಎಸೆತಗಳಲ್ಲಿ ರೋಹಿತ್‌ 50 ರನ್‌ ಪೂರೈಸಿದಾಗ, ತಂಡದ ಮೊತ್ತ 52 ರನ್‌ ಆಗಿತ್ತು. ಪವರ್‌-ಪ್ಲೇನಲ್ಲಿ 1 ವಿಕೆಟ್‌ಗೆ 60 ರನ್‌ ಸಿಡಿಸಿದ ಭಾರತ, 8.4 ಓವರಲ್ಲಿ 100 ರನ್‌ ಪೂರೈಸಿತು. 10 ಓವರಲ್ಲಿ 2 ವಿಕೆಟ್‌ಗೆ 114 ರನ್‌ ಗಳಿಸಿದ ಭಾರತ, ಕೊನೆಯ 10 ಓವರಲ್ಲಿ 91 ರನ್‌ ಕಲೆಹಾಕಿತು.ರೋಹಿತ್‌ 41 ಎಸೆತದಲ್ಲಿ 7 ಬೌಂಡರಿ, 8 ಸಿಕ್ಸರ್‌ಗಳೊಂದಿಗೆ 92 ರನ್‌ ಗಳಿಸಿ ಔಟಾಗುವ ಮೂಲಕ ಶತಕ ವಂಚಿತರಾದರು. ಸೂರ್ಯ, ದುಬೆ, ಹಾರ್ದಿಕ್‌ರಿಂದ ಉಪಯುಕ್ತ ಕೊಡುಗೆ ಮೂಡಿಬಂತು.ಸ್ಕೋರ್ ವಿವರ

ಭಾರತ 20 ಓವರಲ್ಲಿ 205/5ರೋಹಿತ್‌ ಬಿ ಸ್ಟಾರ್ಕ್‌ 92(41), ಕೊಹ್ಲಿ ಸಿ ಡೇವಿಡ್‌ ಬಿ ಹೇಜಲ್‌ವುಡ್ 00(05), ಪಂತ್‌ ಸಿ ಹೇಜಲ್‌ವುಡ್‌ ಬಿ ಸ್ಟೋಯ್ನಿಸ್‌ 15(14), ಸೂರ್ಯ ಸಿ ವೇಡ್‌ ಬಿ ಸ್ಟಾರ್ಕ್‌ 31(16), ದುಬೆ ಸಿ ವಾರ್ನರ್‌ ಬಿ ಸ್ಟೋಯ್ನಿಸ್‌ 28(22), ಹಾರ್ದಿಕ್‌ ಔಟಾಗದೆ 27(17), ಜಡೇಜಾ ಔಟಾಗದೆ 09(05). ವಿಕೆಟ್‌: 1-6, 2-93, 3-127, 4-159, 5-194. ಇತರೆ 3(ಲೆಗ್‌ಬೈ 1, ವೈಡ್‌ 2). ಬೌಲಿಂಗ್‌: ಸ್ಟಾರ್ಕ್‌ 4-0-45-2, ಹೇಜಲ್‌ವುಡ್‌ 4-0-14-1, ಕಮಿನ್ಸ್‌ 4-0-48-0, ಝಂಪಾ 4-0-41-0, ಸ್ಟೋಯ್ನಿಸ್‌ 4-0-56-2.

ಆಸ್ಟ್ರೇಲಿಯಾ 20 ಓವರಲ್ಲಿ 181/7

ವಾರ್ನರ್‌ ಸಿ ಸೂರ್ಯ ಬಿ ಅರ್ಶ್‌ದೀಪ್‌ 06(06), ಹೆಡ್‌ ಸಿ ರೋಹಿತ್‌ ಬಿ ಬೂಮ್ರಾ 76(43), ಮಾರ್ಷ್‌ ಸಿ ಅಕ್ಷರ್‌ ಬಿ ಕುಲ್ದೀಪ್‌ 37(28), ಮ್ಯಾಕ್ಸ್‌ವೆಲ್‌ ಬಿ ಕುಲ್ದೀಪ್‌ 20(12), ಸ್ಟೋಯ್ನಿಸ್‌ ಸಿ ಹಾರ್ದಿಕ್‌ ಬಿ ಅಕ್ಷರ್‌ 02(04), ಡೇವಿಡ್‌ ಸಿ ಬೂಮ್ರಾ ಬಿ ಅರ್ಶ್‌ದೀಪ್‌ 15(11), ವೇಡ್‌ ಸಿ ಕುಲ್ದೀಪ್‌ ಬಿ ಅರ್ಶ್‌ದೀಪ್‌ 01(02), ಕಮಿನ್ಸ್‌ ಔಟಾಗದೆ 11(07), ಸ್ಟಾರ್ಕ್‌ ಔಟಾಗದೆ 04(07). ವಿಕೆಟ್‌: 1-6, 2-87, 3-128, 4-135, 5-150, 6-153, 7-166. ಇತರೆ 9(ಬೈ 5, ಲೆಗ್‌ಬೈ 1, ವೈಡ್‌ 3). ಬೌಲಿಂಗ್‌: ಅರ್ಶ್‌ದೀಪ್‌ 4-0-37-3, ಬೂಮ್ರಾ 4-0-29-1, ಅಕ್ಷರ್‌ 3-0-21-1, ಹಾರ್ದಿಕ್‌ 4-0-47-0, ಕುಲ್ದೀಪ್‌ 4-0-24-2, ಜಡೇಜಾ 1-0-17-0.

ಪಂದ್ಯಶ್ರೇಷ್ಠ: ರೋಹಿತ್‌ ಶರ್ಮಾ