ಭಾರತ ವನಿತೆಯರಿಗೆ ಐತಿಹಾಸಿಕ ಜಯ!

| Published : Dec 25 2023, 01:31 AM IST

ಸಾರಾಂಶ

ಆಸ್ಟ್ರೇಲಿಯಾ ವಿರುದ್ಧ 46 ವರ್ಷಗಳಿಂದಲೂ ಭಾರತ ಟೆಸ್ಟ್‌ ಆಡುತ್ತಿದ್ದರೂ ಇದೇ ಮೊದಲ ಬಾರಿ ಗೆಲುವು ದಾಖಲಿಸಿದೆ. ಇತ್ತೀಚೆಗಷ್ಟೇ ಇಂಗ್ಲೆಂಡ್‌ ವಿರುದ್ಧವೂ ಭಾರತ ವಿಶ್ವದಾಖಲೆಯ ಜಯ ಸಂಪಾದಿಸಿತ್ತು.

ಮುಂಬೈ: ಇತ್ತೀಚೆಗಷ್ಟೇ ಇಂಗ್ಲೆಂಡ್‌ ವಿರುದ್ಧ ವಿಶ್ವದಾಖಲೆಯ ಗೆಲುವು ಪಡೆದಿದ್ದ ಭಾರತ ಮಹಿಳಾ ತಂಡ, ಕೆಲ ದಿನಗಳ ಅಂತರದಲ್ಲೇ ಮತ್ತೊಂದು ಇತಿಹಾಸ ಸೃಷ್ಟಿಸಿದೆ. ಆಸ್ಟ್ರೇಲಿಯಾ ವಿರುದ್ಧ 46 ವರ್ಷಗಳಲ್ಲೇ ಮೊತ್ತ ಮೊದಲ ಬಾರಿ ಭಾರತ ಮಹಿಳಾ ತಂಡ ಟೆಸ್ಟ್‌ ಗೆಲುವು ದಾಖಲಿಸಿ ಸಂಭ್ರಮಿಸಿದೆ. ಭಾನುವಾರ ಮುಕ್ತಾಯಗೊಂಡ ಏಕೈಕ ಟೆಸ್ಟ್‌ನಲ್ಲಿ ಭಾರತಕ್ಕೆ 8 ವಿಕೆಟ್‌ ಭರ್ಜರಿ ಗೆಲುವು ಲಭಿಸಿತು.

ಕೊನೆ ದಿನ ಗೆಲುವಿಗೆ ಕೇವಲ 75 ರನ್ ಗುರಿ ಪಡೆದ ಹರ್ಮನ್‌ಪ್ರೀತ್‌ ನಾಯಕತ್ವದ ಭಾರತ, 18.4 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟದಲ್ಲಿ ಜಯ ದಾಖಲಿಸಿತು. ಶಫಾಲಿ ವರ್ಮಾ(04), ರಿಚಾ ಘೋಷ್‌(13) ಬೇಗನೇ ಔಟಾದರೂ, ಸ್ಮೃತಿ ಮಂಧನಾ 38 ರನ್‌ ಗಳಿಸಿ ತಂಡವನ್ನು ಗೆಲ್ಲಿಸಿದರು.

ಆಸೀಸ್‌ಗೆ ಆಘಾತ: ಇದಕ್ಕೂ ಮುನ್ನ 3ನೇ ದಿನದಂತ್ಯಕ್ಕೆ 5 ವಿಕೆಟ್‌ಗೆ 233 ರನ್‌ ಗಳಿಸಿದ್ದ ಆಸೀಸ್‌, ಭಾನುವಾರ ಉಳಿದ 5 ವಿಕೆಟ್‌ಗಳನ್ನು 15.4 ಓವರ್‌ಗಳಲ್ಲಿ ಕೇವಲ 28 ರನ್‌ ಸೇರಿಸುವಷ್ಟರಲ್ಲಿ ಕಳೆದುಕೊಂಡಿತು. ಕೆಳ ಕ್ರಮಾಂಕದ ಬ್ಯಾಟರ್‌ಗಳನ್ನು ಔಟ್‌ ಮಾಡಲು ಭಾರತದ ಬೌಲರ್‌ಗಳಿಗೆ ಹೆಚ್ಚಿನ ಸಮಯ ಬೇಕಾಗಲಿಲ್ಲ. ಸ್ನೇಹ ರಾಣಾ 4, ರಾಜೇಶ್ವರಿ ಗಾಯಕ್ವಾಡ್‌ 2 ವಿಕೆಟ್‌ ಕಿತ್ತು, ಆಸೀಸನ್ನು 261ಕ್ಕೆ ನಿಯಂತ್ರಿಸಿದರು.

ಇದಕ್ಕೂ ಮೊದಲು ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾವನ್ನು 219ಕ್ಕೆ ನಿಯಂತ್ರಿಸಿದ್ದ ಭಾರತ, 406 ರನ್‌ ದಾಖಲಿಸಿ 187 ರನ್‌ ಮುನ್ನಡೆ ಪಡೆದಿತ್ತು.

ಸ್ಕೋರ್‌: ಆಸ್ಟ್ರೇಲಿಯಾ 219/10 ಹಾಗೂ 261/10(ಸುಥರ್‌ಲಂಡ್‌ 27, ಸ್ನೇಹ 4-63), ಭಾರತ 406/10 ಮತ್ತು 75/2 (ಸ್ಮೃತಿ 38*, ಗಾರ್ಡ್ನರ್‌ 1-18) ಪಂದ್ಯಶ್ರೇಷ್ಠ: ಸ್ನೇಹ ರಾಣಾ----1977ರ ಬಳಿಕ ಮೊದಲಬಾರಿ ಭಾರತಕ್ಕೆ ಜಯಭಾರತ ಹಾಗೂ ಆಸ್ಟ್ರೇಲಿಯಾ ಮಹಿಳಾ ತಂಡಗಳು ಟೆಸ್ಟ್‌ನಲ್ಲಿ 1977ರಿಂದಲೂ ಮುಖಾಮುಖಿಯಾಗುತ್ತಿದೆ. ಇದೇ ಮೊದಲ ಬಾರಿ ಭಾರತಕ್ಕೆ ಗೆಲುವು ಲಭಿಸಿದೆ. ಈ ಪಂದ್ಯಕ್ಕೂ ಮುನ್ನ ನಡೆದಿದ್ದ 10 ಪಂದ್ಯಗಳಲ್ಲಿ ಭಾರತ 4 ಪಂದ್ಯಗಳಲ್ಲಿ ಸೋತಿದ್ದರೆ, 6 ಪಂದ್ಯಗಳು ಡ್ರಾಗೊಂಡಿದ್ದವು.-01ನೇ ನಾಯಕಿಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ಜಯಸಿದ ವಿಶ್ವದ ಏಕೈಕ ಟೆಸ್ಟ್‌ ನಾಯಕಿ ಹರ್ಮನ್‌ಪ್ರೀತ್‌.

--

ಡಿ.24ರಂದೇ ಪುರುಷರ

ತಂಡಕ್ಕೂ ಮೊದಲ ಜಯ

ಡಿ.24 ಭಾರತದ ಮಹಿಳೆಯರ ಜೊತೆ ಪುರುಷರ ತಂಡಕ್ಕೂ ಅವಿಸ್ಮರಣೀಯ. ಭಾರತ ಪುರುಷರ ತಂಡ ಆಸ್ಟ್ರೇಲಿಯಾ ವಿರುದ್ಧ ಮೊದಲ ಬಾರಿ ಟೆಸ್ಟ್‌ ಪಂದ್ಯ ಗೆದ್ದಿದ್ದು 1959ರ ಡಿ.24ರಂದು. 2023ರ ಡಿ.24ಕ್ಕೆ ಮಹಿಳಾ ತಂಡ ಮೊದಲ ಸಲ ಗೆದ್ದಿದೆ.

---

ಭಾರತೀಯರ ಫೋಟೋ

ಕ್ಲಿಕ್ಕಿಸಿದ ಆಸೀಸ್‌ ನಾಯಕಿ

ಟೆಸ್ಟ್‌ ಗೆಲುವಿನ ಬಳಿಕ ಸಂಭ್ರಮಾಚರಣೆ ನಡೆಸುತ್ತಿದ್ದ ಭಾರತೀಯ ಆಟಗಾರ್ತಿಯ ಫೋಟೋವನ್ನು ಆಸ್ಟ್ರೇಲಿಯಾ ನಾಯಕಿ ಅಲೀಸಾ ಹೀಲಿ ಕ್ಲಿಕ್ಕಿಸಿದ್ದಾರೆ. ಇದರ ಫೋಟೋ, ವಿಡಿಯೋ ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್‌ ಆಗಿದ್ದು, ಆಸೀಸ್‌ ನಾಯಕಿಯ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.