ಟಿ20, ಏಕದಿನದಲ್ಲಿ ಟೀಂ ಇಂಡಿಯಾ ಅಗ್ರಸ್ಥಾನ ಭದ್ರ. ಟಿ20 ರ್‍ಯಾಂಕಿಂಗ್‌ನಲ್ಲಿ ಭಾರತ 264 ಅಂಕಗಳನ್ನು ಹೊಂದಿದ್ದರೆ, ಏಕದಿನಲ್ಲಿ ಭಾರತ 122 ಅಂಕಗಳನ್ನು ಸಂಪಾದಿಸಿದೆ.

ದುಬೈ: ಐಸಿಸಿ ವಿಶ್ವ ಟೆಸ್ಟ್‌ನ ವಾರ್ಷಿಕ ರ್‍ಯಾಂಕಿಂಗ್‌ನಲ್ಲಿ ಹಾಲಿ ವಿಶ್ವ ಟೆಸ್ಟ್‌ ಚಾಂಪಿಯನ್‌ ಆಸ್ಟ್ರೇಲಿಯಾ ಅಗ್ರಸ್ಥಾನಕ್ಕೇರಿದ್ದು, ಟೀಂ ಇಂಡಿಯಾ 2ನೇ ಸ್ಥಾನಕ್ಕೆ ಕುಸಿದಿದೆ.ಶುಕ್ರವಾರ ಐಸಿಸಿ ನೂತನ ರ್‍ಯಾಂಕಿಂಗ್‌ ಪಟ್ಟಿ ಪ್ರಕಟಿಸಿತು. ಆಸ್ಟ್ರೇಲಿಯಾ 124 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರೆ, ಭಾರತ 120 ಅಂಕಗಳನ್ನು ಹೊಂದಿದೆ. 

ಇಂಗ್ಲೆಂಡ್‌ 105 ಅಂಕಗಳೊಂದಿಗೆ 3ನೇ ಹಾಗೂ ದಕ್ಷಿಣ ಆಫ್ರಿಕಾ ತಂಡ 103 ಅಂಕದೊಂದಿಗೆ 4ನೇ ಸ್ಥಾನದಲ್ಲಿದೆ. ಆದರೆ ಭಾರತ ಟಿ20 ಹಾಗೂ ಏಕದಿನ ಕ್ರಿಕೆಟ್‌ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತರೂ ವಾರ್ಷಿಕ ರ್‍ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾಕ್ಕಿಂತ ಭಾರತ 6 ಅಂಕ ಮುಂದಿದೆ. 

ಭಾರತ ಸದ್ಯ 122 ಅಂಕಗಳನ್ನು ಹೊಂದಿದ್ದರೆ, ಆಸ್ಟ್ರೇಲಿಯಾ 116 ಅಂಕಗಳನ್ನು ಸಂಪಾದಿಸಿದೆ. ದಕ್ಷಿಣ ಆಫ್ರಿಕಾ(112), ಪಾಕಿಸ್ತಾನ(106) ಹಾಗೂ ನ್ಯೂಜಿಲೆಂಡ್‌(101) ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.ಇನ್ನು, ಟಿ20 ರ್‍ಯಾಂಕಿಂಗ್‌ನಲ್ಲಿ ಭಾರತ 264 ಅಂಕಗಳನ್ನು ಹೊಂದಿದ್ದರೆ, 2ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ 257 ಅಂಕ ಸಂಪಾದಿಸಿದೆ. ಇಂಗ್ಲೆಂಡ್‌(252), ದ.ಆಫ್ರಿಕಾ(250), ನ್ಯೂಜಿಲೆಂಡ್‌(250) ಕ್ರಮವಾಗಿ 3, 4 ಮತ್ತು 5ನೇ ಸ್ಥಾನಗಳಲ್ಲಿವೆ.