ರಣಜಿ : ಭಾರತ ತಂಡದ ಬ್ಯಾಟಿಂಗ್‌ ಸ್ಟಾರ್ಸ್‌ ಫ್ಲಾಪ್‌ - ಅಭಿಮಾನಿಗಳಿಗೆ ಭಾರಿ ನಿರಾಸೆ.

| Published : Jan 24 2025, 12:45 AM IST / Updated: Jan 24 2025, 04:14 AM IST

ಸಾರಾಂಶ

ರೋಹಿತ್‌ ಶರ್ಮಾ 3, ಶುಭ್‌ಮನ್‌ ಗಿಲ್‌ 4, ರಿಷಭ್‌ ಪಂತ್‌ 1, ಯಶಸ್ವಿ ಜೈಸ್ವಾಲ್‌ 4 ರನ್‌. ಅಭಿಮಾನಿಗಳಿಗೆ ಭಾರಿ ನಿರಾಸೆ.

ಬೆಂಗಳೂರು: ಬಿಸಿಸಿಐ ತಾಕೀತು ಮಾಡಿದ್ದಕ್ಕೆ ರಣಜಿ ಪಂದ್ಯವನ್ನಾಡುತ್ತಿರುವ ಭಾರತ ಟೆಸ್ಟ್‌ ತಂಡದ ಆಟಗಾರರು, ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದಾರೆ. ಮುಂಬೈನಲ್ಲಿ ನಡೆಯುತ್ತಿರುವ ಜಮ್ಮು-ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಆರಂಭಿಕ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಕಳಪೆ ಪ್ರದರ್ಶನ ತೋರಿದರು. 

ಜೈಸ್ವಾಲ್‌ 4 ರನ್‌ಗೆ ಔಟಾದರೆ, ಕ್ರೀಸ್‌ನಲ್ಲಿ ನೆಲೆಯೂರಲು ಪರದಾಡಿದ ರೋಹಿತ್‌ 19 ಎಸೆತದಲ್ಲಿ 3 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ರೋಹಿತ್‌ ದಿನದಾಟದ 3ನೇ ಅವಧಿಯಲ್ಲಿ ಫೀಲ್ಡ್‌ ಮಾಡಲು ಮೈದಾನಕ್ಕಿಳಿಯಲಿಲ್ಲ.

ಇನ್ನು, ಟೆಸ್ಟ್‌ ತಂಡಕ್ಕೆ ಮರಳಲು ಕಾತರಿಸುತ್ತಿರುವ ಶ್ರೇಯಸ್‌ ಅಯ್ಯರ್‌ 11 ರನ್‌ಗೆ ವಿಕೆಟ್‌ ಕಳೆದುಕೊಂಡರು. ಬೆಂಗಳೂರಲ್ಲಿ ಕರ್ನಾಟಕ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಪಂಜಾಬ್‌ ಪರ ಇನ್ನಿಂಗ್ಸ್‌ ಆರಂಭಿಸಿದ ಶುಭ್‌ಮನ್‌ ಗಿಲ್‌ 4 ರನ್‌ಗೆ ಔಟಾದರೆ, ರಾಜ್‌ಕೋಟ್‌ನಲ್ಲಿ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ದೆಹಲಿಯ ರಿಷಭ್‌ ಪಂತ್‌ 1 ರನ್‌ಗೆ ವಿಕೆಟ್‌ ಕಳೆದುಕೊಂಡರು. ಜಡೇಜಾಗೆ 5 ವಿಕೆಟ್‌: ಆಲ್ರೌಂಡರ್‌ ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಗಮನ ಸೆಳೆದರು. ದೆಹಲಿ ವಿರುದ್ಧ ಮೊದಲ ಇನ್ನಿಂಗ್ಸಲ್ಲಿ ಸೌರಾಷ್ಟ್ರ ಸ್ಪಿನ್ನರ್‌ಗೆ 5 ವಿಕೆಟ್‌ ದೊರೆಯಿತು.