ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಫೈನಲ್‌ ಹಾದಿ ಕಠಿಣ: ಹೇಗಿದೆ ಲೆಕ್ಕಾಚಾರ?

| Published : Oct 27 2024, 02:23 AM IST / Updated: Oct 27 2024, 04:11 AM IST

ಸಾರಾಂಶ

ತಂಡಕ್ಕೆ ಇನ್ನು ಒಟ್ಟು 6 ಟೆಸ್ಟ್‌(ನ್ಯೂಜಿಲೆಂಡ್‌ ವಿರುದ್ಧ 1, ಆಸ್ಟ್ರೇಲಿಯಾ ವಿರುದ್ಧ 5) ಪಂದ್ಯಗಳು ಬಾಕಿಯಿದ್ದು, ಫೈನಲ್‌ಗೇರಬೇಕಿದ್ದರೆ ಕನಿಷ್ಠ 4ರಲ್ಲಿ ಗೆಲುವು ಸಾಧಿಸಬೇಕಿದೆ.

ದುಬೈ: ನ್ಯೂಜಿಲೆಂಡ್‌ ವಿರುದ್ಧ ಸರಣಿ ಸೋಲುವುದರೊಂದಿಗೆ 2023-25ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಫೈನಲ್‌ ಹಾದಿ ಕಠಿಣಗೊಂಡಿದೆ. ಆದರೂ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಕಾಯ್ದುಕೊಂಡಿದೆ.ಸರಣಿಗೂ ಮುನ್ನ ಶೇ.74.24 ಗೆಲುವಿನ ಪ್ರತಿಶತ ಹೊಂದಿದ್ದ ಭಾರತ 2 ಪಂದ್ಯಗಳ ಸೋಲಿನ ಬಳಿಕ ಸದ್ಯ ಶೇ.62.82ಕ್ಕೆ ಕುಸಿದಿದೆ. 

ತಂಡ 2ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ(ಶೇ.62.50)ಕ್ಕಿಂತ ಕೇವಲ 0.32 ಅಂತರದಲ್ಲಿ ಮುಂದಿದೆ.ಭಾರತ ಈ ವರೆಗೂ 13 ಪಂದ್ಯಗಳನ್ನಾಡಿದ್ದು, 8 ಗೆಲುವು, 4 ಸೋಲು ಹಾಗೂ 1 ಡ್ರಾ ಸಾಧಿಸಿದೆ. ತಂಡಕ್ಕೆ ಇನ್ನು ಒಟ್ಟು 6 ಟೆಸ್ಟ್‌(ನ್ಯೂಜಿಲೆಂಡ್‌ ವಿರುದ್ಧ 1, ಆಸ್ಟ್ರೇಲಿಯಾ ವಿರುದ್ಧ 5) ಪಂದ್ಯಗಳು ಬಾಕಿಯಿದ್ದು, ಫೈನಲ್‌ಗೇರಬೇಕಿದ್ದರೆ ಕನಿಷ್ಠ 4ರಲ್ಲಿ ಗೆಲುವು ಸಾಧಿಸಬೇಕಿದೆ.ಶ್ರೀಲಂಕಾ (ಶೇ.55.56) 3ನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್‌(ಶೇ.50.00) 4ನೇ ಸ್ಥಾನಕ್ಕೇರಿದೆ. 

ಉಳಿದಂತೆ ದಕ್ಷಿಣ ಆಫ್ರಿಕಾ (ಶೇ.47.62), ಇಂಗ್ಲೆಂಡ್‌ (ಶೇ.40.79), ಪಾಕಿಸ್ತಾನ (ಶೇ.33.33), ಬಾಂಗ್ಲಾದೇಶ (ಶೇ.30.56),ಹಾಗೂ ವೆಸ್ಟ್‌ಇಂಡೀಸ್‌ (ಶೇ.18.5) ನಂತರದ ಸ್ಥಾನಗಳಲ್ಲಿವೆ.

ಭಾರತ ಈ ಹಿಂದಿನ ಎರಡೂ ಆವೃತ್ತಿಗಳಲ್ಲಿ ಫೈನಲ್‌ ಪ್ರವೇಶಿಸಿತ್ತು. ಮೊದಲ ಆವೃತ್ತಿಯಲ್ಲಿ ನ್ಯೂಜಿಲೆಂಡ್‌, ಕಳೆದ ಬಾರಿ ಆಸ್ಟ್ರೇಲಿಯಾ ವಿರುದ್ಧ ಸೋತು ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.