ಸಾರಾಂಶ
ಟೆಸ್ಟ್‌ನಲ್ಲಿ ಇತಿಹಾಸ ಸೃಷ್ಟಿಸಿದ ಬಳಿಕ ಏಕದಿನಲ್ಲಿ ಭಾರತ ಮಹಿಳೆಯರು ವೈಟ್‌ವಾಶ್ ಮುಖಭಂಗಕ್ಕೊಳಗಾಗಿದ್ದರು. ಆದರೆ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲೇ ಭರ್ಜರಿ ಗೆಲುವಿನ ಮೂಲಕ ಪುಟಿದೇಳುವ ಮುನ್ಸೂಚನೆ ನೀಡಿದ್ದಾರೆ. 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದಾರೆ.
ನವಿ ಮುಂಬೈ: ಮಾರಕ ಬೌಲಿಂಗ್ ದಾಳಿ ಬಳಿಕ ಬ್ಯಾಟಿಂಗ್‌ನಲ್ಲಿ ಅಬ್ಬರದ ಪ್ರದರ್ಶನ ನೀಡಿದ ಭಾರತ ಮಹಿಳಾ ತಂಡ, ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 9 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.ಮೊದಲು ಬ್ಯಾಟ್ ಮಾಡಿದ ಆಸೀಸ್ 19.2 ಓವರ್‌ಗಳಲ್ಲಿ 141ಕ್ಕೆ ಆಲೌಟಾಯಿತು. 33ಕ್ಕೆ 4 ವಿಕೆಟ್ ಕಳೆದುಕೊಂಡ ಬಳಿಕ 5ನೇ ವಿಕೆಟ್‌ಗೆ ಫೋಚ್ ಲಿಚ್‌ಫೀಲ್ಡ್(32 ಎಸೆತದಲ್ಲಿ 49) ಹಾಗೂ ಎಲೈಸಿ ಪೆರ್ರಿ(37) 79 ರನ್ ಸಿಡಿಸಿ ತಂಡವನ್ನು ಅಪಾಯದಿಂದ ಪಾರು ಮಾಡಿದರು. ಆದರೆ ಭಾರತಕ್ಕೆ ದೊಡ್ಡ ಗುರಿ ನಿಗದಿಪಡಿಸಲು ಸಾಧ್ಯವಾಗಲಿಲ್ಲ. ಯುವ ವೇಗಿ ಟಿಟಾಸ್ ಸಧು 4 ಓವರಲ್ಲಿ 17 ರನ್‌ಗೆ 4 ವಿಕೆಟ್ ಕಬಳಿಸಿದರು.
ಸುಲಭ ಗುರಿಯನ್ನು ಬೆನ್ನತ್ತಿದ ಭಾರತ 17.4 ಓವರ್‌ಗಳಲ್ಲೇ ಜಯ ತನ್ನದಾಗಿಸಿಕೊಂಡಿತು. ಶಫಾಲಿ ವರ್ಮಾ ಔಟಾಗದೆ 44 ಎಸೆತಗಳಲ್ಲಿ 64 ರನ್ ಚಚ್ಚಿದರೆ, ಸ್ಮೃತಿ ಮಂಧನಾ 54 ರನ್ ಬಾರಿಸಿದರು. ಸ್ಮೃತಿ ಮೊದಲ 11 ಎಸೆತಗಳಲ್ಲಿ ಯಾವುದೇ ರನ್ ಗಳಿಸದಿದ್ದರೂ ಬಳಿಕ ಅಬ್ಬರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.ಸ್ಕೋರ್: ಆಸ್ಟ್ರೇಲಿಯಾ 19.2 ಓವರಲ್ಲಿ 141/10(ಲಿಚ್‌ಫೀಲ್ಡ್ 49, ಪೆರ್ರಿ 37, ಟಿಟಾಸ್ 4-17), ಭಾರತ 17.4 ಓವರಲ್ಲಿ 145/1 (ಶಫಾಲಿ 64*, ಸ್ಮೃತಿ 54, ವೇರ್‌ಹ್ಯಾಮ್ 1-20)
ಸ್ಮೃತಿ ವೇಗದ 3000 ರನ್ ದಾಖಲೆ ಸ್ಮೃತಿ ಮಂಧನಾ ಮಹಿಳಾ ಅಂತಾರಾಷ್ಟ್ರೀಯ ಟಿ20ಯಲ್ಲಿ ವೇಗವಾಗಿ 3000 ರನ್ ಪೂರ್ತಿಗೊಳಿಸಿದ ಸಾಧನೆ ಮಾಡಿದರು. ಅವರು 2461 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದರು. ನ್ಯೂಜಿಲೆಂಡ್‌ನ ಸೋಫಿ ಡಿವೈನ್ 2470 ಎಸೆತಗಳಲ್ಲಿ 3000 ರನ್ ಗಳಿಸಿದ್ದರು. ಸ್ಮೃತಿ 3 ಸಾವಿರ ರನ್ ಗಳಿಸಿದ ಭಾರತ 2ನೇ ಹಾಗೂ ವಿಶ್ವದ 6ನೇ ಬ್ಯಾಟರ್. ಹರ್ಮನ್‌ಪ್ರೀತ್ ಕೌರ್(3195) ಕೂಡಾ ಈ ಸಾಧನೆ ಮಾಡಿದ್ದಾರೆ.