ನಿರಂತರ ಧಾರಾಕಾರ ಮಳೆ : ಭಾರತ vs ಪ್ರೈಮ್‌ ಮಿನಿಸ್ಟರ್‌ XI ಮೊದಲ ದಿನದಾಟ ರದ್ದು

| Published : Dec 01 2024, 01:32 AM IST / Updated: Dec 01 2024, 05:10 AM IST

ಸಾರಾಂಶ

ಸಂಜೆ ವೇಳೆ ಕೆಲಕಾಲ ಮಳೆ ನಿಂತರೂ, ಕೆಲ ಸಮಯದ ಬಳಿಕ ಮತ್ತೆ ಧಾರಾಕಾರ ಮಳೆ ಸುರಿಯಿತು. ಭಾನುವಾರ ಮಳೆ ನಿಂತರೆ ತಲಾ 50 ಓವರ್‌ ಪಂದ್ಯ.

ಕ್ಯಾನ್‌ಬೆರಾ: ಭಾರತ ಹಾಗೂ ಆಸ್ಟ್ರೇಲಿಯಾದ ಪ್ರೈಮ್‌ ಮಿನಿಸ್ಟರ್‌ ಇಲೆವೆನ್‌ ತಂಡಗಳ ನಡುವಿನ 2 ದಿನಗಳ ಹಗಲು-ರಾತ್ರಿ(ಪಿಂಕ್‌ ಬಾಲ್‌) ಅಭ್ಯಾಸ ಪಂದ್ಯದ ಮೊದಲ ದಿನ ಮಳೆಗೆ ಆಹುತಿಯಾಗಿದೆ. 

ಡಿ.6ರಂದು ಅಡಿಲೇಡ್‌ನಲ್ಲಿ ಆರಂಭಗೊಳ್ಳಲಿರುವ ಹಗಲು-ರಾತ್ರಿ ಟೆಸ್ಟ್‌ ದೃಷ್ಟಿಯಿಂದ ಈ ಅಭ್ಯಾಸ ಪಂದ್ಯ ಭಾರತದ ಪಾಲಿಗೆ ಮಹತ್ವದ್ದಾಗಿದೆ. ಮೊದಲ ಟೆಸ್ಟ್‌ಗೆ ಗೈರಾಗಿದ್ದ ಖಾಯಂ ನಾಯಕ ರೋಹಿತ್‌ ಶರ್ಮಾ, ಶುಭ್‌ಮನ್‌ ಗಿಲ್‌ ಅಭ್ಯಾಸ ಪಂದ್ಯದ ಮೂಲಕ ಟೆಸ್ಟ್‌ಗೆ ಸಜ್ಜಾಗುವ ಗುರಿ ಇಟ್ಟುಕೊಂಡಿದ್ದರು. 

ಆದರೆ ನಿರಂತರ ಮಳೆ ಕಾರಣ ಶನಿವಾರ ಟಾಸ್‌ ಕೂಡಾ ಸಾಧ್ಯವಾಗಲಿಲ್ಲ. ಸಂಜೆ ವೇಳೆ ಕೆಲಕಾಲ ಮಳೆ ನಿಂತರೂ, ಕೆಲ ಸಮಯದ ಬಳಿಕ ಮತ್ತೆ ಧಾರಾಕಾರ ಮಳೆ ಸುರಿಯಿತು.ಭಾನುವಾರವೂ ಮಳೆ ಮುನ್ಸೂಚನೆ ಇದ್ದು, ಪಂದ್ಯಕ್ಕೆ ಅಡ್ಡಿಪಡಿಸುವ ಭೀತಿಯಿದೆ. ಮಳೆರಾಯ ಕೃಪೆ ತೋರಿದರೆ ಉಭಯ ತಂಡಗಳ ನಡುವೆ ತಲಾ 50 ಓವರ್‌ ಪಂದ್ಯ ನಡೆಯುವ ನಿರೀಕ್ಷೆಯಿದೆ.

ಆಸೀಸ್‌ ಪಿಎಂಗೆ ಅಟೋಗ್ರಾಫ್‌ ಕ್ಯಾಪ್‌ ಗಿಫ್ಟ್ ನೀಡಿದ ಭಾರತ

ಪಂದ್ಯಕ್ಕೂ ಮುನ್ನ ಶನಿವಾರ ಭಾರತೀಯ ಆಟಗಾರರು ಆಸ್ಟ್ರೇಲಿಯಾ ಪ್ರಧಾನಿ ಅಂಥೋನಿ ಅಲ್ಬನೀಸ್‌ ಜೊತೆ ಫೋಟೋ ತೆಗೆಸಿಕೊಂಡರು. ಈ ವೇಳೆ ಪ್ರಧಾನಿ ರೋಹಿತ್‌ ಶರ್ಮಾ, ಭಾರತೀಯ ಆಟಗಾರರ ಸಹಿ ಇರುವ ಕ್ಯಾಪ್‌ ಉಡುಗೊರೆಯಾಗಿ ನೀಡಿದರು.

 ಗಾಯ: 2ನೇ ಟೆಸ್ಟ್‌ಗೆ ಹೇಜಲ್‌ವುಡ್‌ ಗೈರು

ಆಡಿಲೇಡ್: ಭಾರತದ ವಿರುದ್ಧ 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನವೇ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ಎದುರಾಗಿದೆ. ಗಾಯದ ಸಮಸ್ಯೆಯಿಂದ ಸ್ಟಾರ್‌ ಆಟಗಾರ ಜೋಶ್‌ ಹೇಜಲ್‌ವುಡ್‌ ಮುಂದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ. ''''ಹೇಜಲ್‌ವುಡ್ ದೇಹದ ಎಡಭಾಗದಲ್ಲಿ ನೋವು ಕಾಣಿಸಿಕೊಂಡಿದೆ. ಆದ್ದರಿಂದ 2ನೇ ಟೆಸ್ಟ್‌ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಮುಂದಿನ ಪಂದ್ಯಗಳಿಗೆ ಸಿದ್ಧತೆ ನಡೆಸಲು ಆಡಿಲೇಡ್‌ನಲ್ಲಿಯೇ ಉಳಿಯಲಿದ್ದಾರೆ'''' ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ತಿಳಿಸಿದೆ.