ಇಂದು ದುಬೈನಲ್ಲಿ ಭಾರತ vs ನ್ಯೂಜಿಲೆಂಡ್‌ ಫೈನಲ್‌ ಹಣಾಹಣಿ: ನಮ್ಮದಾಗಲಿ ಚಾಂಪಿಯನ್ಸ್‌ ಟ್ರೋಫಿ

| N/A | Published : Mar 09 2025, 01:45 AM IST / Updated: Mar 09 2025, 04:06 AM IST

ಸಾರಾಂಶ

ಅಜೇಯ ಭಾರತಕ್ಕೆ ದಾಖಲೆಯ 3ನೇ ಟ್ರೋಫಿ ಗೆಲ್ಲುವ ಗುರಿ. 2017ರ ಫೈನಲ್‌ ಸೋಲಿನ ಕಹಿ ಮರೆಯುತ್ತಾ ಟೀಂ ಇಂಡಿಯಾ?. 2ನೇ ಕಿರೀಟ ಮುಡಿಗೇರಿಸಿಕೊಳ್ಳಲು ಕಿವೀಸ್‌ ಕಾತರ. ವಿಶ್ವ ಶ್ರೇಷ್ಠ ಬ್ಯಾಟರ್ಸ್‌ vs ಸ್ಪಿನ್ನರ್ಸ್‌ ನಡುವೆ ರೋಚಕ ಪೈಪೋಟಿ ಖಚಿತ

ದುಬೈ(ಯುಎಇ): ಮೂರು ವಾರಗಳ ವಾರ ವಿಶ್ವದೆಲ್ಲೆಡೆಯ ಕ್ರಿಕೆಟ್‌ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿ, ರೋಚಕ ಕ್ಷಣಗಳ ಮೂಲಕ ತುದಿಗಾಲಲ್ಲಿ ನಿಲ್ಲಿಸುವಂತೆ ಮಾಡಿದ 9ನೇ ಆವೃತ್ತಿಯ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಈಗ ನಿರ್ಘಾಯಕ ಘಟ್ಟ ತಲುಪಿದೆ. ಬಿಸಿಸಿಐ, ಪಿಸಿಬಿ ನಡುವೆ ಭಾರೀ ಸಂಘರ್ಷಕ್ಕೆ ಕಾರಣವಾಗಿ ಬಳಿಕ ಹೈಬ್ರಿಡ್‌ ಮಾದರಿಯಲ್ಲಿ ನಡೆಯುತ್ತಿರುವ ಟೂರ್ನಿಯ ಫೈನಲ್‌ ಪಂದ್ಯಕ್ಕೆ ದುಬೈನಲ್ಲಿ ವೇದಿಕೆ ಸಜ್ಜುಗೊಂಡಿದೆ.

 ಭಾನುವಾರ ನಡೆಯಲಿರುವ ಬಹುನಿರೀಕ್ಷಿತ ಫೈನಲ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಟ್ರೋಫಿಗಾಗಿ ಪರಸ್ಪರ ಸೆಣಸಾಡಲಿವೆ.ಕಪ್‌ ಗೆಲ್ಲುವ ಫೇವರಿಟ್‌ ಎಂದೇ ಕರೆಸಿಕೊಂಡು ಟೂರ್ನಿಗೆ ಕಾಲಿಟ್ಟಿರುವ ಟೀಂ ಇಂಡಿಯಾ, ಸತತ 3ನೇ ಹಾಗೂ ಒಟ್ಟಾರೆ 5ನೇ ಬಾರಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ಗೇರಿದೆ. ನ್ಯೂಜಿಲೆಂಡ್‌ನ ಫೈನಲ್‌ ಪ್ರವೇಶ ಕೂಡಾ ಅಚ್ಚರಿಯದ್ದೇನಲ್ಲ. ಯಾವುದೇ ಬಲಿಷ್ಠ ತಂಡವನ್ನು ಸೋಲಿಸಬಲ್ಲ ಸಾಮರ್ಥ್ಯ ಹೊಂದಿರುವ ಕಿವೀಸ್‌ ಪಡೆ, ಟೂರ್ನಿಯ ಇತಿಹಾಸದಲ್ಲಿ 3ನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

ರಣ ರೋಚಕ ಪೈಪೋಟಿ: ಟೂರ್ನಿಯಲ್ಲಿ ಭಾರತದ ಪ್ರದರ್ಶನ ನೋಡಿದರೆ ತಂಡ ಕಪ್‌ ಗೆಲ್ಲುವ ಫೇವರಿಟ್‌. ದುಬೈನ ಒಂದೇ ಕ್ರೀಡಾಂಗಣದಲ್ಲಿ ಎಲ್ಲಾ ಪಂದ್ಯ ಆಡಿರುವ ರೋಹಿತ್‌ ಶರ್ಮಾ ಪಡೆ, ಟೂರ್ನಿಯುದ್ದಕ್ಕೂ ಅಜೇಯವಾಗಿ ಉಳಿದಿದೆ. ತಾರಾ ಬ್ಯಾಟರ್‌ಗಳು ಹಾಗೂ ವಿಶ್ವ ಶ್ರೇಷ್ಠ ಸ್ಪಿನ್ನರ್‌ಗಳೇ ತಂಡದ ಆಧಾರಸ್ತಂಭ. ಒಂದಿಬ್ಬರ ಆಟಕ್ಕೆ ಜೋತು ಬೀಳದೆ ತಂಡವಾಗಿ ಆಡುತ್ತಿರುವ ಭಾರತ, ಫೈನಲ್‌ನಲ್ಲೂ ಅದೇ ರೀತಿ ಆಡಲಿದೆಯೇ ಎಂಬುದಷ್ಟೇ ಸದ್ಯದ ಕುತೂಹಲ.

ತಾರೆಗಳ ದಂಡು: ಕಳೆದ 5 ಪಂದ್ಯಗಳಲ್ಲಿ 1 ಶತಕ, 2 ಅರ್ಧಶತಕ ಬಾರಿಸಿರುವ ವಿರಾಟ್‌ ಕೊಹ್ಲಿ, ಅಭೂತಪೂರ್ವ ಲಯದಲ್ಲಿರುವ ಶುಭ್‌ಮನ್‌ ಗಿಲ್‌, ಅವಕಾಶ ಸಿಕ್ಕಾಗಲೆಲ್ಲಾ ತಂಡಕ್ಕೆ ನೆರವಾಗುವ ಶ್ರೇಯಸ್‌ ಅಯ್ಯರ್‌, ಕೆ.ಎಲ್‌.ರಾಹುಲ್‌ ತಂಡದ ಆಧಾರಸ್ತಂಭ. ರೋಹಿತ್‌ ತನ್ನ ಆಕ್ರಮಣಕಾರಿ ಆಟವನ್ನು ಮತ್ತಷ್ಟು ವಿಸ್ತರಿಸಿದರೆ ತಂಡಕ್ಕೆ ಪ್ಲಸ್‌ಪಾಯಿಂಟ್‌.

ಸ್ಪಿನ್ನರ್ಸ್‌, ಆಲ್ರೌಂಡರ್ಸ್‌ ಶಕ್ತಿ: ಅಕ್ಷರ್‌ ಪಟೇಲ್‌, ರವೀಂದ್ರ ಜಡೇಜಾ, ಹಾರ್ದಿಕ್‌ ಪಾಂಡ್ಯರಂತಹ ವಿಶ್ವಶ್ರೇಷ್ಠ ಆಲ್ರೌಂಡರ್‌ಗಳು ತಂಡದ ಪ್ರಮುಖ ಶಕ್ತಿ. ಬ್ಯಾಟಿಂಗ್‌, ಬೌಲಿಂಗ್‌ ಜೊತೆ ಫೀಲ್ಡಿಂಗ್‌ನಲ್ಲೂ ಇವರ ಕೊಡುಗೆ ಅಪಾರ. ಇನ್ನು, ಭಾರತ ಟೂರ್ನಿಯಲ್ಲಿ ಯಶಸ್ಸು ಸಾಧಿಸಲು ಪ್ರಮುಖ ಕಾರಣ ಸ್ಪಿನ್ನರ್‌ಗಳು. 2 ಪಂದ್ಯಗಳಲ್ಲೇ 7 ವಿಕೆಟ್‌ ಕಿತ್ತಿರುವ ವರುಣ್‌, ಮಧ್ಯಮ ಓವರ್‌ಗಳಲ್ಲಿ ಎದುರಾಳಿ ಬ್ಯಾಟರ್‌ಗಳನ್ನು ಕಾಡಬಲ್ಲ ಕುಲ್ದೀಪ್‌, ಅಕ್ಷರ್‌, ಜಡೇಜಾ ಭಾರತಕ್ಕೆ ಮತ್ತೊಂದು ಗೆಲುವು ತಂದುಕೊಡುವ ಕಾತರದಲ್ಲಿದ್ದಾರೆ. ಇನ್ನು, ವೇಗಿ ಮೊಹಮ್ಮದ್‌ ಶಮಿ 4 ಪಂದ್ಯಗಳಲ್ಲಿ 8 ವಿಕೆಟ್‌ ಕಿತ್ತಿದ್ದು, ನಿರ್ಣಾಯಕ ಪಂದ್ಯದಲ್ಲೂ ತಂಡದ ಕೈಹಿಡಿಯಬೇಕಿದೆ.

ರಚಿನ್‌, ಕೇನ್‌ ಭೀತಿ: ಭಾರತ ಗುಂಪು ಹಂತದ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಗೆದ್ದಿತ್ತು. ಆದರೂ ಕಿವೀಸ್‌ ಬಳಗವನ್ನು ಭಾರತ ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಕಿವೀಸ್‌ನ ಬ್ಯಾಟಿಂಗ್‌ ಶಕ್ತಿಗಳಾಗಿರುವ ರಚಿನ್‌ ರವೀಂದ್ರ, ಕೇನ್‌ ವಿಲಿಯಮ್ಸನ್‌ರನ್ನು ಭಾರತೀಯ ಸ್ಪಿನ್ನರ್‌ಗಳು ಎಷ್ಟರ ಮಟ್ಟಿಗೆ ಕಟ್ಟಿಹಾಕಲು ಯಶಸ್ವಿಯಾಗುತ್ತಾರೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗಬಹುದು. ಅಲ್ಲದೆ, ಕಿವೀಸ್‌ ಕೂಡಾ ವಿಶ್ವ ಶ್ರೇಷ್ಠ ಸ್ಪಿನ್ನರ್‌ಗಳನ್ನು ಹೊಂದಿದ್ದು, ಭಾರತೀಯ ಬ್ಯಾಟರ್ಸ್‌ಗೆ ಸವಾಲಾಗಿ ಪರಿಣಮಿಸಬಲ್ಲರು. ನಾಯಕ ಸ್ಯಾಂಟ್ನರ್‌, ಮೈಕಲ್‌ ಬ್ರೇಸ್‌ವೆಲ್‌ ಉತ್ತಮ ದಾಳಿ ಸಂಘಟಿಸುತ್ತಿದ್ದಾರೆ. ಆದರೆ 4 ಪಂದ್ಯಗಳಲ್ಲಿ 10 ವಿಕೆಟ್‌ ಕಿತ್ತು, ಟೂರ್ನಿಯ ಗರಿಷ್ಠ ವಿಕೆಟ್‌ ಸರದಾರ ಎನಿಸಿಕೊಂಡಿರುವ ವೇಗಿ ಮ್ಯಾಟ್‌ ಹೆನ್ರಿ ಫೈನಲ್‌ನಲ್ಲಿ ಆಡುವುದು ಅನುಮಾನ. ಇದು ತಂಡದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು.

ಸಂಭವನೀಯ ಆಟಗಾರರು

ಭಾರತ: ರೋಹಿತ್‌(ನಾಯಕ), ಗಿಲ್‌, ವಿರಾಟ್‌, ಶ್ರೇಯಸ್‌, ಅಕ್ಷರ್‌, ರಾಹುಲ್‌, ಹಾರ್ದಿಕ್‌, ಜಡೇಜಾ, ಕುಲ್ದೀಪ್‌, ಶಮಿ, ವರುಣ್‌.ನ್ಯೂಜಿಲೆಂಡ್‌: ಯಂಗ್‌, ರಚಿನ್‌, ವಿಲಿಯಮ್ಸನ್‌, ಡ್ಯಾರಿಲ್‌, ಲೇಥಮ್‌, ಫಿಲಿಪ್ಸ್‌, ಬ್ರೇಸ್‌ವೆಲ್‌, ಸ್ಯಾಂಟ್ನರ್‌, ಜೇಮಿಸನ್‌, ಹೆನ್ರಿ/ಜೇಕಬ್‌/ಸ್ಮಿತ್‌, ಒರೌರ್ಕೆ.

ಪಂದ್ಯ: ಮಧ್ಯಾಹ್ನ 2.30ಕ್ಕೆನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಜಿಯೋ ಹಾಟ್‌ಸ್ಟಾರ್‌.

ಪಿಚ್ ರಿಪೋರ್ಟ್‌: ದುಬೈ ಕ್ರೀಡಾಂಗಣದ ಪಿಚ್‌ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಹೆಸರುವಾಸಿ. ಇಲ್ಲಿ ಈ ಸಲ ಟೂರ್ನಿಯಲ್ಲಿ ನಡೆದ 4 ಪಂದ್ಯಗಳ 8 ಇನ್ನಿಂಗ್ಸ್‌ಗಳಲ್ಲಿ ಗರಿಷ್ಠ ಸ್ಕೋರ್‌ 267. ಪಂದ್ಯ ಸಾಗಿದಂತೆ ಪಿಚ್‌ ನಿಧಾನಗತಿ ವರ್ತಿಸಲಿದ್ದು, ರನ್‌ ಗಳಿಸಲು ಬ್ಯಾಟರ್‌ಗಳು ಹೆಚ್ಚಿನ ಶ್ರಮ ಪಡಬೇಕಾಗಬಹುದು.

ಇಂದು ಮಳೆ ಬಂದರೆ ಏನ್‌ ಮಾಡೋದು?

ದುಬೈನಲ್ಲಿ ಸದ್ಯ ಮಳೆ ಮುನ್ಸೂಚನೆ ಇಲ್ಲ. ಭಾನುವಾರದ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಕಡಿಮೆ. ಒಂದು ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ, ಮೀಸಲು ದಿನವಾದ ಸೋಮವಾರ ಪಂದ್ಯ ನಡೆಸಲಾಗುತ್ತದೆ. ಈ ಎರಡೂ ದಿನಗಳಲ್ಲಿ ಪಂದ್ಯ ನಡೆಯದಿದ್ದರೆ ಭಾರತ-ನ್ಯೂಜಿಲೆಂಡ್‌ ತಂಡಗಳನ್ನು ಜಂಟಿ ಚಾಂಪಿಯನ್‌ ಎಂದು ಘೋಷಿಸಲಾಗುತ್ತದೆ. 2002ರಲ್ಲಿ ಭಾರತ-ಶ್ರೀಲಂಕಾ ಜಂಟಿ ಚಾಂಪಿಯನ್‌ ಆಗಿದ್ದವು.

ಐಸಿಸಿ ಟೂರ್ನಿಯಲ್ಲಿ 6-6 ಗೆಲುವಿನ ದಾಖಲೆ

ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಐಸಿಸಿ ಟೂರ್ನಿಗಳಲ್ಲಿ ಈ ವರೆಗೂ 12 ಬಾರಿ ಮುಖಾಮುಖಿಯಾಗಿವೆ. 2 ತಂಡಗಳೂ ತಲಾ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ವಿಶ್ವಕಪ್‌ನಲ್ಲಿ 5-5 ಹಾಗೂ ಚಾಂಪಿಯನ್ಸ್‌ ಟ್ರೋಫಿಯಲ್ಲಿ 1-1 ಗೆಲುವಿನ ದಾಖಲೆ ಹೊಂದಿವೆ.

ಸ್ಪಿನ್‌ vs ಸ್ಪಿನ್‌ ಕದನ

ಫೈನಲ್‌ ಪಂದ್ಯ ಉಭಯ ತಂಡಗಳ ಸ್ಪಿನ್ನರ್‌ಗಳ ನಡುವಿನ ಕಾದಾಟಕ್ಕೆ ಸಾಕ್ಷಿಯಾಗಲಿದೆ. ಭಾರತದ ನಾಲ್ವರು ಸ್ಪಿನ್ನರ್‌ಗಳಾದ ವರುಣ್‌, ಕುಲ್ದೀಪ್‌, ಜಡೇಜಾ, ಅಕ್ಷರ್‌ ಟೂರ್ನಿಯಲ್ಲಿ ಒಟ್ಟು 21 ವಿಕೆಟ್‌ ಕಬಳಿಸಿದ್ದಾರೆ. ಕಿವೀಸ್‌ ಸ್ಪಿನ್ನರ್‌ಗಳೂ ಕೂಡಾ ಎದುರಾಳಿ ಬ್ಯಾಟರ್‌ಗಳನ್ನು ಕಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಟೂರ್ನಿಯಲ್ಲಿ ಒಟ್ಟು 17 ವಿಕೆಟ್‌ ಪಡೆದಿರುವ ಕಿವೀಸ್‌ ಸ್ಪಿನ್ನರ್ಸ್‌ ಭಾರತದ ಬ್ಯಾಟರ್‌ಗಳನ್ನೂ ಕಟ್ಟಿಹಾಕುವ ವಿಶ್ವಾಸದಲ್ಲಿದ್ದಾರೆ.

ಭಾರತವೇ ಗೆಲ್ಲುವ ಫೇವರಿಟ್‌ ಏಕೆ?

- ಸ್ಫೋಟಕ ಆರಂಭ ಒದಗಿಸುವ ರೋಹಿತ್‌ - ವಿರಾಟ್‌, ಶುಭ್‌ಮನ್‌ ಗಿಲ್‌ ಅಭೂತಪೂರ್ವ ಲಯದಲ್ಲಿದ್ದಾರೆ.- ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್‌, ರಾಹುಲ್‌ ಬಲ.- ಅಕ್ಷರ್‌, ಜಡೇಜಾ, ಹಾರ್ದಿಕ್‌ ಆಲ್ರೌಂಡ್‌ ಸಾರ್ಮಥ್ಯ - ವರುಣ್‌ ಚಕ್ರವರ್ತಿ, ಕುಲ್ದೀಪ್‌ ಮಾರಕ ಸ್ಪಿನ್‌ ಕೈಚಳಕ.- ಉತ್ತಮ ಲಯದಲ್ಲಿ ಅನುಭವಿ ವೇಗಿ ಮೊಹಮ್ಮದ್‌ ಶಮಿ