ಭಾರೀ ಕುತೂಹಲ, ಹೋರಾಟ, ವಿವಾದ ಹಾಗೂ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾದ ಈ ಬಾರಿಯ ತೆಂಡುಲ್ಕರ್‌-ಆ್ಯಂಡರ್‌ಸನ್‌ ಸರಣಿ ಅಷ್ಟೇ ರೋಚಕವಾಗಿ ಕೊನೆಗೊಂಡಿದೆ

ಲಂಡನ್‌: ಭಾರೀ ಕುತೂಹಲ, ಹೋರಾಟ, ವಿವಾದ ಹಾಗೂ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾದ ಈ ಬಾರಿಯ ತೆಂಡುಲ್ಕರ್‌-ಆ್ಯಂಡರ್‌ಸನ್‌ ಸರಣಿ ಅಷ್ಟೇ ರೋಚಕವಾಗಿ ಕೊನೆಗೊಂಡಿದೆ. ದಿ ಓವಲ್‌ ಕ್ರೀಡಾಂಗಣದಲ್ಲಿ ಭಾರೀ ಥ್ರಿಲ್ಲರ್‌ ಕ್ಷಣಗಳನ್ನು ಕಟ್ಟಿಕೊಟ್ಟ 5ನೇ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಟೀಂ ಇಂಡಿಯಾ 6 ರನ್‌ಗಳ ರೋಚಕ ಜಯಭೇರಿ ಬಾರಿಸಿತು. ಇದರೊಂದಿಗೆ 5 ಪಂದ್ಯಗಳ ಸರಣಿ 2-2ರಲ್ಲಿ ಡ್ರಾಗೊಂಡಿತು.

2 ಬಲಿಷ್ಠ ತಂಡಗಳ ನಡುವಿನ ಕೊನೆ ಪಂದ್ಯ ಭಾನುವಾರವೇ ಕೊನೆಗೊಳ್ಳಬೇಕಿತ್ತು. ಆದರೆ ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳು ಕಾದು ಕುಳಿತಿದ್ದ ಮತ್ತೊಂದು ಕ್ಲೈಮ್ಯಾಕ್ಸ್‌ ಕ್ಷಣಗಳನ್ನು ಸೋಮವಾರಕ್ಕೆ ಮುಂದೂಡಿದ್ದು ಮಳೆರಾಯ. 374 ರನ್‌ಗಳ ದೊಡ್ಡ ಗುರಿ ಪಡೆದಿದ್ದ ಇಂಗ್ಲೆಂಡ್‌ಗೆ ಕೊನೆ ದಿನ 35 ರನ್‌ ಅಗತ್ಯವಿತ್ತು. ಭಾರತಕ್ಕೆ ಸರಣಿ ಸಮಬಲಗೊಳಿಸಲು 4 ವಿಕೆಟ್‌ಗಳು ಬೇಕಿತ್ತು.

ಕೊನೆ ದಿನದ ಡ್ರಾಮಾ:

ಪ್ರಸಿದ್ಧ್‌ರ ಮೊದಲೆರಡು ಎಸೆತಗಳನ್ನು ಓವರ್‌ಟನ್‌ ಬೌಂಡರಿಗಟ್ಟಿದಾಗ ಭಾರತೀಯ ಪಾಳಯದಲ್ಲಿ ಮೌನ ಆವರಿಸಿತ್ತು. ಆದರೆ ಈ ಮೌನವನ್ನು ಮುರಿದು, ಭಾರತ ಸಂಭ್ರಮಿಸುವಂತೆ ಮಾಡಿದ್ದು ಮೊಹಮ್ಮದ್‌ ಸಿರಾಜ್‌. ದಿನದ 2ನೇ ಓವರ್‌ನಲ್ಲಿ ಸಿರಾಜ್‌ ಎಸೆತದಲ್ಲಿ ಅಪಾಯಕಾರಿ ಜೆಮೀ ಸ್ಮಿತ್‌, ವಿಕೆಟ್‌ ಕೀಪರ್‌ ಧ್ರುವ್‌ ಜುರೆಲ್‌ಗೆ ಕ್ಯಾಚ್‌ ನೀಡಿದರು. 9 ರನ್‌ ಗಳಿಸಿದ್ದ ಓವರ್‌ಟನ್‌ರನ್ನು ತಮ್ಮ ಮುಂದಿನ ಓವರ್‌ನಲ್ಲಿ ಪೆವಿಲಿಯನ್‌ಗೆ ಅಟ್ಟಿದ ಸಿರಾಜ್‌, ಭಾರತದ ಗೆಲುವಿನ ಆಸೆಯನ್ನು ಮತ್ತಷ್ಟು ಹೆಚ್ಚಿಸಿದರು. ಆಗ ಇಂಗ್ಲೆಂಡ್‌ಗೆ 20 ರನ್‌ ಬೇಕಿತ್ತು. 3 ರನ್‌ ಗಳಿಸಿದ ಬಳಿಕ, ಪ್ರಸಿದ್ಧ್‌ ಎಸೆದ ಇನ್ನಿಂಗ್ಸ್‌ನ 83ನೇ ಓವರ್‌ನ ಕೊನೆಯ ಎಸೆತದಲ್ಲಿ ಜೋಶ್ ಟಂಗ್‌ ಕ್ಲೀನ್ ಬೌಲ್ಡ್‌ ಆದರು.

ಗಾಯಾಳು ಕ್ರಿಸ್‌ ವೋಕ್ಸ್‌ ಒಂದು ಕೈನಲ್ಲೇ ಬ್ಯಾಟ್‌ ಹಿಡಿದುಕೊಂಡು ಬಂದು ಎಲ್ಲರ ಅಚ್ಚರಿಗೆ ಕಾರಣರಾದರು. ಆದರೆ 2 ಓವರ್‌ ಪೂರ್ಣವಾಗಿ ಆಡಿ ವೋಕ್ಸ್‌ಗೆ ಕ್ರೀಸ್‌ ಬಿಟ್ಟುಕೊಡದ ಗಸ್‌ ಆಟ್ಕಿನ್ಸನ್‌, ಸಿರಾಜ್‌ರ ಎಸೆತವನ್ನು ಸಿಕ್ಸರ್‌ಗಟ್ಟಿ ಭಾರತೀಯರಲ್ಲಿ ಸೋಲಿನ ಭೀತಿ ಉಂಟು ಮಾಡಿದರು. ಆದರೆ ಗೆಲುವಿಗೆ 7 ರನ್‌ ಬೇಕಿದ್ದಾಗ, ಇನ್ನಿಂಗ್ಸ್‌ನ 86ನೇ ಓವರ್‌ನ ಮೊದಲ ಎಸೆತದಲ್ಲೇ ಆಟ್ಕಿನ್ಸನ್‌ರನ್ನು ಸಿರಾಜ್‌ ಬೌಲ್ಡ್‌ ಮಾಡಿದರು. ಇದರೊಂದಿಗೆ ಇಂಗ್ಲೆಂಡ್‌ ಇನ್ನಿಂಗ್ಸ್‌ಗೆ ತೆರೆಬಿತ್ತು. ಭಾರತದ ಆಟಗಾರರು ಮೈದಾನದುದ್ದಕ್ಕೂ ಓಡಾಡಿ ಸಂಭ್ರಮಿಸಿದರೆ, ಅಭಿಮಾನಿಗಳು ಸ್ಟ್ಯಾಂಡ್‌ನಲ್ಲಿ ಹುಚ್ಚೆದ್ದು ಕುಣಿದರು.

ಇದಕ್ಕೂ ಮುನ್ನ ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 224 ರನ್‌ ಗಳಿಸಿದ್ದರೆ, ಇಂಗ್ಲೆಂಡ್‌ 247 ರನ್‌ ಕಲೆಹಾಕಿ ಮುನ್ನಡೆ ಸಾಧಿಸಿತ್ತು. ಆದರೆ ಯಶಸ್ವಿ ಜೈಸ್ವಾಲ್‌ರ ಶತಕದ ನೆರವಿನಿಂದ ಭಾರತ 2ನೇ ಇನ್ನಿಂಗ್ಸ್‌ನಲ್ಲಿ 396 ರನ್‌ ಸಿಡಿಸಿ, ಇಂಗ್ಲೆಂಡ್‌ಗೆ 374 ರನ್‌ ಗುರಿ ನಿಗದಿಪಡಿಸಿತ್ತು.

ಸ್ಕೋರ್‌: ಭಾರತ 224/10 ಮತ್ತು 396/10, ಇಂಗ್ಲೆಂಡ್‌ 247/10 ಮತ್ತು 367/10 (ಆಟ್ಕಿನ್ಸನ್‌ 17, ಸಿರಾಜ್‌ 5-105, ಪ್ರಸಿದ್ಧ್‌ 4-126)

ಪಂದ್ಯಶ್ರೇಷ್ಠ: ಮೊಹಮ್ಮದ್‌ ಸಿರಾಜ್‌(ಒಟ್ಟು 9 ವಿಕೆಟ್‌)

ಸರಣಿಶ್ರೇಷ್ಠ: ಶುಭ್‌ಮನ್‌ ಗಿಲ್‌(754 ರನ್‌) ಮತ್ತು ಹ್ಯಾರಿ ಬ್ರೂಕ್‌(481 ರನ್‌)

ರೋಚಕತೆ ಕಟ್ಟಿಕೊಟ್ಟ

5ನೇ ದಿನದ 52 ಎಸೆತ

ಕೊನೆ ದಿನ ಒಟ್ಟು 52 ಎಸೆತಗಳನ್ನು ಎಸೆಯಲಾಯಿತು. ಮೊದಲೆರಡು ಎಸೆತಗಳಲ್ಲಿ ಬೌಂಡರಿ ಹೋದರೂ, ಆ ಬಳಿಕ ಪ್ರಸಿದ್ಧ್‌ ಹಾಗೂ ಸಿರಾಜ್ ಎಸೆದ ಪ್ರತಿ ಎಸೆತವೂ ನೋಡುಗರ ಎದೆಬಡಿತ ಹೆಚ್ಚಿಸುತ್ತಿತ್ತು. ಪ್ರತಿ ಎಸೆತ, ಪ್ರತಿ ರನ್‌ಗೂ ರೋಚಕತೆ ಹೆಚ್ಚುತ್ತಲೇ ಹೋಯಿತು. ಇಬ್ಬರು ಬೌಲರ್ಸ್‌ ಎರಡೂ ಕಡೆಯಿಂದ ಬೆಂಕಿಯುಂಡೆಗಳನ್ನು ಎಸೆಯುತ್ತಿದ್ದರೆ, ಇಂಗ್ಲೆಂಡ್‌ ಆಟಗಾರರು ವಿಕೆಟ್‌ ಉಳಿಸಿಕೊಳ್ಳಲು ಪರದಾಡುತ್ತಿದ್ದರು. 80 ಓವರ್‌ ಬಳಿಕ ಭಾರತಕ್ಕೆ ಹೊಸ ಚೆಂಡು ಪಡೆಯಲು ಅವಕಾಶವಿದ್ದರೂ, ಹಳೆ ಚೆಂಡಿನಲ್ಲೇ ದಾಳಿ ಮುಂದುವರಿಸಿತು. ಗೆಲುವಿಗೆ ಅಗತ್ಯವಿದ್ದ 4 ವಿಕೆಟ್‌ಗಳನ್ನು ಪಡೆದ ಭಾರತ, ವಿಜಯಮಾಲೆಯನ್ನು ತನ್ನ ಕೊರಳಿಗೇರಿಸಿಕೊಂಡಿತು.

ದೇಶವನ್ನು ಗೆಲ್ಲಿಸಿದ

ಮೊಹಮ್ಮದ್‌-ಕೃಷ್ಣ!

ಭಾರತದ ಗೆಲುವಿನ ಹಿಂದೆ 11 ಆಟಗಾರರ ಕೊಡುಗೆಯೂ ಇದೆ. ಆದರೆ ಕೊನೆ ದಿನದ ಥ್ರಿಲ್ಲರ್‌ನಲ್ಲಿ ಭಾರತವನ್ನು ಗೆಲ್ಲಿಸಿದ್ದು ಇಬ್ಬರು ವೇಗಿಗಳಾದ ಮೊಹಮ್ಮದ್‌ ಸಿರಾಜ್‌ ಹಾಗೂ ಕನ್ನಡಿಗ ಪ್ರಸಿದ್ಧ್‌ ಕೃಷ್ಣ. ಮಾರಕ ದಾಳಿ ಸಂಘಟಿಸಿದ ಇವರಿಬ್ಬರು, ಕೊನೆ ದಿನದ 4 ವಿಕೆಟ್‌ಗಳನ್ನು ಹಂಚಿಕೊಂಡರು. ಇವರಿಬ್ಬರ ಆಟಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದ್ದು, ಮೀಮ್ಸ್‌, ಶ್ಲಾಘನೆಯ ಪೋಸ್ಟ್‌ಗಳು ವೈರಲ್ ಆಗಿವೆ.

ಕ್ಯಾಚ್‌ ಡ್ರಾಪ್‌ ಆದರೂ ಪಂದ್ಯ

ಗೆಲ್ಲಿಸಿ ಹೀರೋ ಆದ ಸಿರಾಜ್‌

ಇಂಗ್ಲೆಂಡ್‌ನ 2ನೇ ಇನ್ನಿಂಗ್ಸ್‌ ವೇಳೆ ಭಾನುವಾರ ಹ್ಯಾರಿ ಬ್ರೂಕ್‌ ಬಾರಿಸಿದ ಚೆಂಡನ್ನು ಬೌಂಡರಿ ಲೈನ್‌ ಬಳಿ ಹಿಡಿಯುವ ಯತ್ನದಲ್ಲಿದ್ದ ಸಿರಾಜ್‌ ಎಡವಟ್ಟು ಮಾಡಿಕೊಂಡಿದ್ದರು. ಕ್ಯಾಚ್‌ ಪಡೆದರೂ ಕಾಲು ಲೈನ್‌ಗೆ ತಾಗಿದ್ದರಿಂದ ಅದು ಸಿಕ್ಸರ್‌ ಆಗಿತ್ತು. ಆ ಬಳಿಕ ಬ್ರೂಕ್‌ ಭಾರತೀಯ ಬೌಲರ್‌ಗಳ ಬೆಂಡೆತ್ತಿ ಶತಕ ಬಾರಿಸಿದ್ದರು. ಹಲವರ ಕಣ್ಣಿಗೆ ಸಿರಾಜ್‌ ವಿಲನ್‌ ಆಗಿ ಕಂಡಿದ್ದರು. ಆದರೆ ಬೌಲಿಂಗ್‌ನಲ್ಲಿ ಅಭೂತಪೂರ್ವ ಪ್ರದರ್ಶನ ತೋರಿದ ಸಿರಾಜ್‌, ಭಾರತಕ್ಕೆ ಪಂದ್ಯ ಗೆಲ್ಲಿಸಿಕೊಟ್ಟು ಹೀರೋ ಆಗಿ ಹೊರಹೊಮ್ಮಿದ್ದಾರೆ.

ಒಂದೇ ಕೈನಲ್ಲಿ ಬ್ಯಾಟ್‌

ಹಿಡಿದು ಬಂದ ವೋಕ್ಸ್‌!

ಕೊನೆ ದಿನದ ಕ್ಲೈಮ್ಯಾಕ್ಸ್‌ ಶೋನಲ್ಲಿ ಇಂಗ್ಲೆಂಡ್‌ನ ಕ್ರಿಸ್‌ ವೋಕ್ಸ್‌ ಪಾತ್ರ ಇನ್ನೊಂದಿಷ್ಟು ಕಾಲ ಕ್ರಿಕೆಟ್‌ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ಭಾರತದ 2ನೇ ಇನ್ನಿಂಗ್ಸ್‌ ವೇಳೆ ಭುಜದ ಗಾಯಕ್ಕೆ ತುತ್ತಾಗಿದ್ದ ವೋಕ್ಸ್‌ ಪಂದ್ಯದಿಂದಲೇ ಹೊರಬಿದ್ದಿದ್ದರು. ಆದರೆ ಸೋಮವಾರ ಇಂಗ್ಲೆಂಡ್‌ನ 9 ವಿಕೆಟ್‌ ಬಿದ್ದಾಗ ವೋಕ್ಸ್, ತಮ್ಮ ಕೈಯನ್ನು ತೂಗುಹಾಕಲಾಗಿದ್ದರೂ ಒಂದು ಕೈನಲ್ಲೇ ಬ್ಯಾಟ್‌ ಹಿಡಿದು ಕ್ರೀಸ್‌ಗೆ ಬಂದರು. ತಂಡವನ್ನು ಸೋಲಿನಿಂದ ಪಾರು ಮಾಡಲು ವೋಕ್ಸ್‌ ಪಟ್ಟ ಶ್ರಮಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

ಅಪ್ರತಿಮ ಹೋರಾಟಕ್ಕೆ

ಸಾಕ್ಷಿಯಾದ ಟೆಸ್ಟ್‌ ಸರಣಿ

ಈ ಬಾರಿಯ ಸರಣಿ ಅಪ್ರತಿಮ ಹೋರಾಟಕ್ಕೆ ಸಾಕ್ಷಿಯಾಯಿತು. ಲಾರ್ಡ್ಸ್‌ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ಸ್ಪಿನ್ನರ್‌ ಗಾಯಗೊಂಡಿದ್ದರೂ ನಿರ್ಣಾಯಕ ಘಟ್ಟದಲ್ಲಿ ಬೌಲ್‌ ಮಾಡಿ ತಂಡವನ್ನು ಗೆಲ್ಲಿಸಿದರು. 4ನೇ ಟೆಸ್ಟ್‌ನಲ್ಲಿ ಪಾದ ಗಾಯಕ್ಕೆ ತುತ್ತಾಗಿದ್ದ ರಿಷಭ್‌ ಪಂತ್‌ ಬಳಿಕ ಕುಂಟುತ್ತಲೇ ಆಟವಾಡಿ ಎಲ್ಲರ ಗಮನಸೆಳೆದಿದ್ದರು. 5ನೇ ಟೆಸ್ಟ್‌ನಲ್ಲಿ ವೋಕ್ಸ್‌ ಒಂದು ಕೈನಲ್ಲೇ ಬ್ಯಾಟ್‌ ಹಿಡಿದುಕೊಂಡು ಬಂದು ಹೋರಾಡಿದರು.

01ನೇ ಬಾರಿ

ಭಾರತ ತಂಡ ವಿದೇಶಿ ಟೆಸ್ಟ್‌ ಸರಣಿಯ ಕೊನೆ ಪಂದ್ಯದಲ್ಲಿ ಗೆದ್ದಿದ್ದು ಇದೇ ಮೊದಲು.

04ನೇ ಬಾರಿ

ಇಂಗ್ಲೆಂಡ್‌ ತಂಡ 4ನೇ ಬಾರಿ 6 ಅಥವಾ ಅದಕ್ಕಿಂತ ಕಡಿಮೆ ಅಂತರದಲ್ಲಿ ಟೆಸ್ಟ್‌ ಸೋತಿತು.

ಸರಣಿಯಲ್ಲಿ ಅಗ್ರ-5 ಗರಿಷ್ಠ ರನ್‌

ಆಟಗಾರ ರನ್‌ ಸರಾಸರಿ ಗರಿಷ್ಠ 100/50

ಶುಭ್‌ಮನ್‌ 754 75.40 269 4/0

ಜೋ ರೂಟ್‌ 537 67.12 150 3/1

ರಾಹುಲ್‌ 532 53.20 137 2/2

ಜಡೇಜಾ 516 86.00 107* 1/5

ಬ್ರೂಕ್‌ 481 53.44 158 2/2

ಸರಣಿಯಲ್ಲಿ ಅಗ್ರ-5 ಗರಿಷ್ಠ ವಿಕೆಟ್‌

ಆಟಗಾರ ವಿಕೆಟ್‌ ಓವರ್ಸ್‌ ಸರಾಸರಿ ಶ್ರೇಷ್ಠ

ಸಿರಾಜ್‌ 23 185.3 32.42 6-70

ಟಂಗ್‌ 19 127.0 29.05 5-125

ಸ್ಟೋಕ್ಸ್‌ 17 140.0 25.23 5-72

ಬೂಮ್ರಾ 14 119.4 26.00 5-74

ಪ್ರಸಿದ್ಧ್‌ 14 105.0 37.07 4-62

ಟೆಸ್ಟ್‌ನ ಇತಿಹಾಸದಲ್ಲೇ

ಮೊದಲ ಬಾರಿ ಒಂದಂಕಿ

ರನ್‌ನಿಂದ ಗೆದ್ದ ಭಾರತ!

ಭಾರತ ತಂಡ ಟೆಸ್ಟ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿ ಒಂದಂಕಿ ರನ್‌ ಅಂತರದಲ್ಲಿ ಪಂದ್ಯದಲ್ಲಿ ಜಯಗಳಿಸಿತು. ತಂಡ 1932ರಿಂದಲೂ ಟೆಸ್ಟ್‌ ಆಡುತ್ತಿದೆ. ಇಂಗ್ಲೆಂಡ್‌ ವಿರುದ್ಧ 6 ರನ್‌ ಅಂತರದ ಗೆಲುವು, ತಂಡಕ್ಕೆ ಲಭಿಸಿದ ಅತಿ ಕನಿಷ್ಠ ಅಂತರದ ಜಯ. ಈ ಹಿಂದೆ 2004ರಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ 13 ರನ್‌ಗಳಲ್ಲಿ ಜಯಗಳಿಸಿತ್ತು.

ವೇಗಿ ಸಿರಾಜ್‌ 5+ ವಿಕೆಟ್‌

ಕಿತ್ತಾಗ ಸೋತಿಲ್ಲ ಭಾರತ

ವಿದೇಶಿ ಟೆಸ್ಟ್‌ನಲ್ಲಿ ವೇಗಿ ಮೊಹಮ್ಮದ್‌ ಸಿರಾಜ್‌ 5+ ವಿಕೆಟ್‌ ಕಿತ್ತಾಗ ಭಾರತ ಒಮ್ಮೆಯೂ ಸೋತಿಲ್ಲ. ವಿದೇಶದಲ್ಲಿ ಸಿರಾಜ್ 5 ಬಾರಿ 5+ ವಿಕೆಟ್ ಗೊಂಚಲು ಪಡೆದಿದ್ದಾರೆ. ಈ ಪೈಕಿ 4ರಲ್ಲಿ ಭಾರತ ಗೆದ್ದಿದ್ದು, 1 ಪಂದ್ಯ ಡ್ರಾಗೊಂಡಿದೆ.

ಈ ಸರಣಿಯ ಫಲಿತಾಂಶ

ಪಂದ್ಯ ಫಲಿತಾಂಶ ಅಂತರ

1ನೇ ಟೆಸ್ಟ್‌ ಇಂಗ್ಲೆಂಡ್‌ಗೆ ಜಯ 5 ವಿಕೆಟ್‌

2ನೇ ಟೆಸ್ಟ್‌ ಭಾರತಕ್ಕೆ ಗೆಲುವು 336 ರನ್‌

3ನೇ ಟೆಸ್ಟ್‌ ಇಂಗ್ಲೆಂಡ್‌ಗೆ ಜಯ 22 ರನ್‌

4ನೇ ಟೆಸ್ಟ್‌ ಡ್ರಾ -

5ನೇ ಟೆಸ್ಟ್‌ ಭಾರತಕ್ಕೆ ಜಯ 6 ರನ್‌