ಮಹಿಳಾ ಟಿ20: ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋಲು

| Published : Jan 10 2024, 01:45 AM IST / Updated: Jan 10 2024, 11:56 AM IST

ಸಾರಾಂಶ

3ನೇ ಮಹಿಳಾ ಟಿ20 ಪಂದ್ಯದಲ್ಲಿ ಭಾರತ 7 ವಿಕೆಟ್‌ ಸೋಲುಂಡಿದೆ. 3 ಪಂದ್ಯದ ಸರಣಿಯನ್ನು ಆಸ್ಟ್ರೇಲಿಯಾ 2-1ರಲ್ಲಿ ಗೆದ್ದಕೊಂಡಿದೆ. ಮೊದಲ ಪಂದ್ಯದಲ್ಲಿ ಗೆದ್ದಿದ್ದ ಭಾರತ ವನಿತೆಯರು ಉಳಿದೆರಡು ಪಂದ್ಯಗಳಲ್ಲಿ ಸೋಲನುಭವಿಸುವ ಮೂಲಕ ಸರಣಿ ಬಿಟ್ಟುಕೊಟ್ಟರು.

3ನೇ ಮಹಿಳಾ ಟಿ20 7 ವಿಕೆಟ್‌ ಸೋಲುಂಡ ಭಾರತ3 ಪಂದ್ಯದ ಸರಣಿಯನ್ನು 2-1ರಲ್ಲಿ ಗೆದ್ದ ಆಸ್ಟ್ರೇಲಿಯಾನವ ಮುಂಬೈ: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಸಾಧಾರಣ ಪ್ರದರ್ಶನ ನೀಡಿದ ಭಾರತ ಮಹಿಳಾ ತಂಡ, ಆಸ್ಟ್ರೇಲಿಯಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ 7 ವಿಕೆಟ್‌ ಸೋಲನುಭವಿಸಿದೆ. 

ಇದರೊಂದಿಗೆ ಮೊದಲ ಪಂದ್ಯ ಗೆದ್ದ ಹೊರತಾಗಿಯೂ ಭಾರತ 3 ಪಂದ್ಯಗಳ ಸರಣಿಯನ್ನು ಆಸೀಸ್‌ 1-2 ಅಂತರದಲ್ಲಿ ಬಿಟ್ಟುಕೊಟ್ಟಿದೆ. ಟೆಸ್ಟ್‌ ಸೋಲಿನ ಬಳಿಕ ಏಕದಿನ, ಟಿ20 ಸರಣಿಯಲ್ಲಿ ಆಸೀಸ್ ಮಹಿಳೆಯರು ಆತಿಥೇಯರ ವಿರುದ್ಧ ಸೇಡು ತೀರಿಸಿಕೊಂಡರು.

ಮೊದಲು ಬ್ಯಾಟ್‌ ಮಾಡಿದ ಭಾರತ 6 ವಿಕೆಟ್‌ಗೆ 147 ರನ್‌ ಕಲೆಹಾಕಿತು. ಶಫಾಲಿ ವರ್ಮಾ 26, ಸ್ಮೃತಿ ಮಂಧನಾ 29 ರನ್‌ ಗಳಿಸಿದರೆ, ರಿಚಾ ಘೋಷ್‌ 34 ರನ್‌ ಸಿಡಿಸಿ ತಂಡಕ್ಕೆ ಆಸರೆಯಾದರು. 

ಮತ್ತೆ ಕಳಪೆ ಪ್ರದರ್ಶನ ಮುಂದುವರಿಸಿದ ನಾಯಕಿ ಹರ್ಮನ್‌ಪ್ರೀತ್‌ ಅವರಿಂದ ತಂಡಕ್ಕೆ ಲಭಿಸಿದ್ದು ಕೇವಲ 3 ರನ್‌ ಕೊಡುಗೆ. ಸುಥರ್‌ಲಂಡ್‌ ಹಾಗೂ ವೇರ್‌ಹ್ಯಾಮ್‌ ತಲಾ 2 ವಿಕೆಟ್‌ ಪಡೆದರು.ಸಾಧಾರಣ ಗುರಿ ಬೆನ್ನತ್ತಿದ ಆಸೀಸ್ 18.4 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಜಯಗಳಿಸಿತು. 

ಆರಂಭಿಕರಾದ ಅಲೀಸಾ ಹೀಲಿ(55) ಹಾಗೂ ಬೆಥ್‌ ಮೂನಿ(52) ಮೊದಲ ವಿಕೆಟ್‌ಗೆ 10 ಓವರಲ್ಲಿ 85 ರನ್ ಜೊತೆಯಾಟವಾಡಿ ಭಾರತದ ಗೆಲುವು ಕಸಿದರು. ಪೂಜಾ ವಸ್ತ್ರಾಕರ್‌ 2 ವಿಕೆಟ್‌ ಕಿತ್ತರು.

ಸ್ಕೋರ್‌: ಭಾರತ 20 ಓವರಲ್ಲಿ 147/6 (ರಿಚಾ 34, ಸ್ಮೃತಿ 29, ಸುಥರ್‌ಲಂಡ್‌ 2-12), ಆಸ್ಟ್ರೇಲಿಯಾ 18.4 ಓವರಲ್ಲಿ 149/3 (ಹೀಲಿ 55, ಮೂನಿ 52, ಪೂಜಾ 2-26)

ಮೊದಲ ಪಂದ್ಯ ಗೆದ್ದ ಬಳಿಕ 3 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಸೋತಿದ್ದು ಇದೇ ಮೊದಲ ಬಾರಿ.