ಆತ್ಮಸ್ಥೈರ್ಯ, ಛಲದ ‘ಟೆಸ್ಟ್‌’ ಗೆದ್ದ ಭಾರತ: ಸ್ಟಾರ್‌ಗಳಿಲ್ಲದೆ ಯಂಗ್‌ ಇಂಡಿಯಾ ಅಭೂತಪೂರ್ವ ಸಾಧನೆ

| Published : Aug 05 2025, 11:45 PM IST

ಆತ್ಮಸ್ಥೈರ್ಯ, ಛಲದ ‘ಟೆಸ್ಟ್‌’ ಗೆದ್ದ ಭಾರತ: ಸ್ಟಾರ್‌ಗಳಿಲ್ಲದೆ ಯಂಗ್‌ ಇಂಡಿಯಾ ಅಭೂತಪೂರ್ವ ಸಾಧನೆ
Share this Article
  • FB
  • TW
  • Linkdin
  • Email

ಸಾರಾಂಶ

ಯುವ ಕ್ರಿಕೆಟಿಗರ ಸಾಧನೆಗೆ ಕ್ರಿಕೆಟ್‌ ಜಗದ ಮೆಚ್ಚುಗೆ. ಕೊಹ್ಲಿ, ರೋಹಿತ್‌, ಅಶ್ವಿನ್‌ ಇಲ್ಲದೆಯೂ ಹಿಗ್ಗಿದ ಭಾರತ. ಅಪ್ರತಿಮ ಹೋರಾಟ, ಕೆಚ್ಚೆದೆಯ ಆಟ, ಮಹತ್ವದ ದಾಖಲೆಗೆ ಸಾಕ್ಷಿಯಾದ ಸರಣಿ

ಲಂಡನ್‌: 5 ಪಂದ್ಯ, 25 ದಿನಗಳ ಆಟ, ಒಟ್ಟು 45 ದಿನಗಳ ಸರಣಿ...ಇದು ಬರೀ ಲೆಕ್ಕ ಮಾತ್ರವಾಗಿದ್ದರೆ ಅದರಲ್ಲೇನೂ ವಿಶೇಷವಿಲ್ಲ. ಆದರೆ ಈ ಸರಣಿ ಕೇವಲ ಲೆಕ್ಕದ ಆಟವಲ್ಲ. ಇದು 2 ವಿಶ್ವಶ್ರೇಷ್ಠ ತಂಡಗಳ ನಡುವಿನ ‘ಯುದ್ಧ’ ಮಾದರಿ ಹೋರಾಟ. ತಮ್ಮ ಸರ್ವಸ್ವವನ್ನೂ ದೇಶಕ್ಕಾಗಿ ಬಸಿದುಕೊಟ್ಟ ಕ್ರಿಕೆಟಿಗರ ಕೆಚ್ಚೆದೆಯ ಆಟ. ಕೋಟ್ಯಂತರ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿ, ಕುತೂಹಲದ ಕಣ್ಣಿನಿಂದ ನೋಡುವಂತೆ ಮಾಡಿದ ಟೆಸ್ಟ್‌ ಕ್ರಿಕೆಟ್‌. ಇಂಗ್ಲೆಂಡ್‌ ನೆಲದಲ್ಲಿ ಅವರನ್ನೇ ಕಟ್ಟಿಹಾಕಿ ಭಾರತದ ಎಳೆಯ ಹುಡುಗರು ಸಂಭ್ರಮಿಸಿದ ಅತಿ ಮಹತ್ವದ ಸರಣಿ ಇದು.5 ಪಂದ್ಯಗಳ ಸರಣಿ 2-2ರಲ್ಲಿ ಡ್ರಾ ಆದರೂ, ಗೆದ್ದಂತೆ ಸಂಭ್ರಮಿಸಿದ್ದು ಮತ್ತು ಅದಕ್ಕೆ ಎಲ್ಲಾ ಅರ್ಹತೆ ಇದ್ದಿದ್ದು ಭಾರತಕ್ಕೆ. ಅದಕ್ಕೆ ಕಾರಣಗಳೂ ಹಲವಿದೆ. ಆತ್ಮವಿಶ್ವಾಸ, ಛಲ ಇದ್ದರೆ ಇಂಗ್ಲೆಂಡ್‌ನಲ್ಲೂ ಗೆಲ್ಲಬಹುದು ಎಂದು ಭಾರತದ ಯುವ ಕ್ರಿಕೆಟಿಗರು ತೋರಿಸಿಕೊಟ್ಟಿದ್ದಾರೆ. ಶುಭ್‌ಮನ್‌ ಗಿಲ್‌ರಂತಹ ಇನ್ನೂ 25ರ ಹರೆಯದ ನಾಯಕನೋರ್ವ, ಭಾರತ ತಂಡವನ್ನು ಇಂಗ್ಲೆಂಡ್‌ ನೆಲದಲ್ಲಿ ಗೆದ್ದಂತೆ ಸಂಭ್ರಮಿಸಲು ಕಾರಣರಾಗಿದ್ದಾರೆ. ಅಂದಹಾಗೆ ತನ್ನ 93 ವರ್ಷದ ಟೆಸ್ಟ್‌ ಇತಿಹಾಸದಲ್ಲಿ ಭಾರತ ತಂಡ ಇಂಗ್ಲೆಂಡ್‌ನಲ್ಲಿ ಕೇವಲ 3 ಬಾರಿ ಮಾತ್ರ ಸರಣಿ ಗೆದ್ದಿದೆ. 3 ಬಾರಿ ಮಾತ್ರ ಸರಣಿ ಡ್ರಾ ಮಾಡಿಕೊಂಡಿದೆ. ಅದರಲ್ಲಿ ಒಂದು ಈ ಬಾರಿಯದ್ದು.ಸ್ಟಾರ್‌ಗಳಿಲ್ಲದೆ ಸಾಧನೆಭಾರತ ತಂಡ ಈ ಬಾರಿ ಇಂಗ್ಲೆಂಡ್‌ ಪ್ರವಾಸ ಕೈಗೊಂಡಾಗ ಬಹುತೇಕರಲ್ಲಿ ಆತ್ಮವಿಶ್ವಾಸವೇ ಇರಲಿಲ್ಲ. ತಂಡದಲ್ಲಿ 10ರಷ್ಟು ಆಟಗಾರರಿಗೆ ಇದು ಇಂಗ್ಲೆಂಡ್‌ನ ಮೊದಲ ಸರಣಿಯಾಗಿತ್ತು. ಹೊಸ ನಾಯಕ, ಹೊಸ ತಂಡ, ಯುವ ಆಟಗಾರರನ್ನು ಕಟ್ಟಿಕೊಂಡು ಇಂಗ್ಲೆಂಡ್‌ಗೆ ತೆರಳಿದ್ದ ಭಾರತಕ್ಕೆ, ಸ್ಟಾರ್‌ ಕ್ರಿಕೆಟಿಗರಾದ ವಿರಾಟ್‌ ಕೊಹ್ಲಿ, ರೋಹಿತ್ ಶರ್ಮಾ, ಆರ್‌.ಅಶ್ವಿನ್‌ರಂತಹ ದಿಗ್ಗಜರ ಅನುಪಸ್ಥಿತಿ ಕಾಡುವ ಆತಂಕವಿತ್ತು. ಆದರೆ ಯುವ, ಪ್ರತಿಭಾವಂತ ಕ್ರಿಕೆಟಿಗರು ಅದಕ್ಕೆ ಆಸ್ಪದ ಕೊಡಲಿಲ್ಲ. ತಮಗೆ ಕೊಟ್ಟ ಜವಾಬ್ದಾರಿಯನ್ನು ಮರೆಯಲಿಲ್ಲ. ಎದುರಾಳಿ ಆಟಗಾರರು ಕೆಣಕಿದಾಗ, ಅಲ್ಲಿನ ಪ್ರೇಕ್ಷಕರು ವ್ಯಂಗ್ಯವಾಡಿದಾಗ ಅದಕ್ಕೆ ಆಟದ ಮೂಲಕವೇ ಉತ್ತರ ಕೊಟ್ಟರು. ತಂಡವಾಗಿ ಆಡಿ ಗೆಲುವುಒಂದಿಬ್ಬರನ್ನು ನೆಚ್ಚಿಕೊಳ್ಳದೆ ತಂಡವಾಗಿ ಆಡಿದ್ದು ಭಾರತಕ್ಕೆ ಈ ಬಾರಿ ಹೆಚ್ಚಿನ ಯಶಸ್ಸು ತಂದುಕೊಟ್ಟಿತು. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗ ಚಾಚೂತಪ್ಪದೆ ತನ್ನ ಕರ್ತವ್ಯ ನಿಭಾಯಿಸಿತು. ಬ್ಯಾಟಿಂಗ್‌ನಲ್ಲಿ ಶುಭ್‌ಮನ್‌ ಗಿಲ್‌, ಕೆ.ಎಲ್‌.ರಾಹುಲ್‌, ಯಶಸ್ವಿ ಜೈಸ್ವಾಲ್‌, ರವೀಂದ್ರ ಜಡೇಜಾ, ರಿಷಭ್‌ ಪಂತ್‌ ಅಬ್ಬರಿಸಿದರು. ಬೌಲಿಂಗ್‌ನಲ್ಲಿ ಜಸ್‌ಪ್ರೀತ್‌ ಬೂಮ್ರಾ, ಮೊಹಮ್ಮದ್‌ ಸಿರಾಜ್‌, ಕನ್ನಡಿಗ ಪ್ರಸಿದ್ಧ್‌ ಕೃಷ್ಣ, ಆಕಾಶ್‌ದೀಪ್‌ ಸಿಂಗ್‌ ಮಾರಕ ದಾಳಿ ಸಂಘಟಿಸಿದರು. ವಾಷಿಂಗ್ಟನ್‌ ಸುಂದರ್‌ ಇಂಪ್ಯಾಕ್ಟ್ ಆಟಗಾರನಾಗಿ ಮೂಡಿಬಂದು, ತಂಡದ ಬೆನ್ನೆಲುಬಾದರು. ದೊಡ್ಡ ಸದ್ದು ಮಾಡದಿದ್ದರೂ ಕರುಣ್‌ ನಾಯರ್‌, ಸಾಯಿ ಸುದರ್ಶನ್‌ರ ಕೊಡುಗೆ ಕೂಡಾ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ನಾಯಕತ್ವದಲ್ಲಿ ಗಿಲ್‌ ಕಮಾಲ್‌

ಸರಣಿ ಆರಂಭಕ್ಕೂ ಮುನ್ನ ರಾಹುಲ್‌, ಬೂಮ್ರಾ ಬದಲು ಗಿಲ್‌ಗೆ ನಾಯಕತ್ವದ ಹೊಣೆ ನೀಡಿದಾಗ ಟೀಕಿಸಿದವರೇ ಹೆಚ್ಚು. ಮೊದಲ ಸರಣಿಯ ನಾಯಕತ್ವದಿಂದ ತಮ್ಮ ಬ್ಯಾಟಿಂಗ್‌ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇತ್ತು. ಆದರೆ ನಾಯಕತ್ವದ ಜೊತೆ ಬ್ಯಾಟಿಂಗ್‌ನಲ್ಲೂ ಗಿಲ್‌ ದೊಡ್ಡ ಸಾಧನೆ ಮಾಡಿದರು. ಒತ್ತಡ ಇರುವುದು ತಮಗಲ್ಲ, ತಮ್ಮ ಎದುರಾಳಿಗೆ ಎಂಬಂತೆ ಬ್ಯಾಟ್‌ ಬೀಸಿ ಹಲವು ದಿಗ್ಗಜರ ದಾಖಲೆಯನ್ನೂ ಮುರಿದರು.

ಯುವ ಭಾರತದಲ್ಲೀಗ ಎಲ್ಲರೂ ಸ್ಟಾರ್‌ಗಳೇ

ಇಂಗ್ಲೆಂಡ್‌ ನೆಲದಲ್ಲಿ ಭಾರತ 2-2 ಡ್ರಾ ಮಾಡಿದ್ದರೂ, ತಂಡದ ಪಾಲಿಗೆ ಇದು ದೊಡ್ಡ ಸಾಧನೆ. ಇದಕ್ಕೆ ಕಾರಣವಾಗಿದ್ದು ಒಂದಿಬ್ಬರಲ್ಲ. ಒಂದಿಬ್ಬರು ಸ್ಟಾರ್‌ಗಳನ್ನು ನೆಚ್ಚಿಕೊಂಡೂ ಆಡಲಿಲ್ಲ. ಎಲ್ಲರೂ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಿದರು. ತಂಡದ ಎಲ್ಲರೂ ಸ್ಟಾರ್‌ಗಳಾದರು. ಸರಣಿಯಲ್ಲಿ ಭಾರತೀಯ ಆಟಗಾರರ ಪ್ರದರ್ಶನ ಹೇಗಿತ್ತು ಎಂಬ ವಿವರ ಇಲ್ಲಿದೆ.

ಶುಭ್‌ಮನ್‌ ಗಿಲ್‌ 754 ರನ್

ಕೆ.ಎಲ್‌.ರಾಹುಲ್‌ 532 ರನ್‌

ಜೈಸ್ವಾಲ್‌ 411 ರನ್‌

ರಿಷಭ್‌ ಪಂತ್‌ 479 ರನ್‌

ಕರುಣ್‌ ನಾಯರ್‌ 205 ರನ್‌

ಜಡೇಜಾ 516 ರನ್‌, 7 ವಿಕೆಟ್‌

ವಾಷಿಂಗ್ಟನ್‌ 284 ರನ್‌, 7 ವಿಕೆಟ್‌

ಸಿರಾಜ್‌ 23 ವಿಕೆಟ್‌

ಬೂಮ್ರಾ 14 ವಿಕೆಟ್‌

ಪ್ರಸಿದ್ಧ್‌ ಕೃಷ್ಣ 14 ವಿಕೆಟ್‌

ಆಕಾಶ್‌ದೀಪ್ 13 ವಿಕೆಟ್‌, 80 ರನ್‌

ಸುದರ್ಶನ್ 140 ರನ್

ಸರಣಿ ಕೊಟ್ಟ ಸಂದೇಶಗಳೇನು?

1. ಸ್ಟಾರ್‌ಗಳಿಲ್ಲದೆ ಗೆಲುವು ಸಾಧ್ಯ

ಭಾರತ ತಂಡದಲ್ಲಿ ವಿರಾಟ್‌, ರೋಹಿತ್‌, ಅಶ್ವಿನ್‌ರಂತಹ ಸ್ಟಾರ್‌ಗಳಿರಲಿಲ್ಲ. ಹಿರಿಯ ಆಟಗಾರರು ಸೀಮಿತ ಸಂಖ್ಯೆಯಲ್ಲಿದ್ದರು. ಆದರೆ ಯುವ, ಪ್ರತಿಭಾವಂತ ಆಟಗಾರರೇ ತಂಡವನ್ನು ಯಶಸ್ಸಿ ಕಡೆಗೆ ಕೊಂಡೊಯ್ದರು.2. ತಂಡವಾಗಿ ಆಡಿದ್ರೆ ವಿದೇಶದಲ್ಲೂ ಜಯ

ಭಾರತ ತಂಡದ ದೊಡ್ಡ ಸಮಸ್ಯೆ ಏನೆಂದರೆ ಒಂದಿಬ್ಬರನ್ನು ನೆಚ್ಚಿಕೊಂಡು ಆಡುವುದು. ಈ ಬಾರಿ ಹಾಗಾಗಲಿಲ್ಲ. ತಂಡದ ಎಲ್ಲಾ ಆಟಗಾರರು ತಮ್ಮ ಜವಾಬ್ದಾರಿ ಅರಿತು ಆಡಿದರೆ ವಿದೇಶದಲ್ಲೂ ಗೆಲ್ಲಬಹುದು ಎಂಬ ಸಂದೇಶ ರವಾನೆಯಾಯಿತು.3. ದೇಶ ಮೊದಲು, ಬೇರೆಲ್ಲಾ ಆಮೇಲೆ

ಆಟಗಾರರು ಸರಣಿಯುದ್ದಕ್ಕೂ ಕೆಚ್ಚೆದೆಯ ಆಟವಾಡಿದರು. ಗಾಯ, ಫಿಟ್ನೆಸ್‌, ಕಾರ್ಯದೊತ್ತಡ ಲೆಕ್ಕಿಸಲಿಲ್ಲ. ರಿಷಭ್‌, ವೋಕ್ಸ್‌ ಗಾಯದ ನಡುವೆ ಆಡಿದರು. ಸಿರಾಜ್, ಸ್ಟೋಕ್ಸ್‌ ದಣಿವರಿಯದೆ ನಿರಂತರ ಬೌಲ್‌ ಮಾಡಿ ಹೀರೋಗಳಾದರು.4. ಭಾರತದ ಕ್ರಿಕೆಟ್‌ ಭವಿಷ್ಯ ಉಜ್ವಲ

ಕೊಹ್ಲಿ, ರೋಹಿತ್‌ ಟೆಸ್ಟ್‌ನಿಂದ ನಿವೃತ್ತಿಯಾದಾಗ ಭಾರತದ ಭವಿಷ್ಯವೇನು ಎಂದು ಹಲವರು ಚಿಂತಿಸಿದ್ದರು. ಆದರೆ ಯುವ ಆಟಗಾರರು ಭಾರತದ ಕೈಬಿಡಲಿಲ್ಲ. ಪ್ರಬುದ್ಧರಂತೆ ಆಡಿ, ತಂಡದ ಭವಿಷ್ಯ ಉಜ್ವಲವಾಗಿದೆ ಎಂದು ತೋರಿಸಿಕೊಟ್ಟರು.5. ಕಡಿಮೆಯಾಗದ ಟೆಸ್ಟ್‌ನ ವೈಭವ

ಟಿ20 ಲೀಗ್‌ಗಳ ಭರಾಟೆ ನಡುವೆ ಟೆಸ್ಟ್‌ನ ಮೌಲ್ಯ ಕುಸಿಯುತ್ತಿದೆ ಎಂಬ ಮಾತಿದೆ. ಆದರೆ ಈ ಸರಣಿ ಅದಿಕ್ಕೆ ತದ್ವಿರುದ್ಧವಾಗಿತ್ತು. ಸರಣಿಯ ಒಂದೊಂದು, ರನ್‌, ವಿಕೆಟ್‌ ಕೂಡಾ ಟೆಸ್ಟ್‌ ಕ್ರಿಕೆಟ್‌ನ ಕಿಚ್ಚು ಆರಿಲ್ಲ ಎಂದು ಸಾಬೀತುಪಡಿಸಿತು.

ಸತತ ಸೋಲಿನ ಮುಖಭಂಗ ಮರೆಸಿದ ಟೆಸ್ಟ್‌ ಸರಣಿ ಡ್ರಾಭಾರತ ತಂಡ ಕಳೆದ ವರ್ಷ ನ್ಯೂಜಿಲೆಂಡ್‌ ವಿರುದ್ಧ ತವರಿನಲ್ಲೇ ಕ್ಲೀನ್‌ಸ್ವೀಪ್‌ ಮುಖಭಂಗಕ್ಕೊಳಗಾಗಿತ್ತು. ಬಳಿಕ ಆಸ್ಟ್ರೇಲಿಯಾ ಸರಣಿಯಲ್ಲೂ ಹೀನಾಯ ಸೋಲು ತಂಡವನ್ನು ಕುಗ್ಗಿಸಿತ್ತು. ಇದರ ನಡುವೆ ಇಂಗ್ಲೆಂಡ್‌ ವಿರುದ್ಧ ಸರಣಿಯ ಡ್ರಾ ಭಾರತದ ಆತ್ಮವಿಶ್ವಾಸವನ್ನು ಮರಳಿಸಿದೆ. ಆದರೆ ತಂಡ ಇಷ್ಟಕ್ಕೆ ತೃಪ್ತಿಪಡುವಂತಿಲ್ಲ. ಇದು 2025-27ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮೊದಲ ಸರಣಿಯಾಗಿದ್ದು, ಇನ್ನೆರಡು ವರ್ಷ ಮತ್ತಷ್ಟು ಕಠಿಣವಾದ ಸರಣಿಗಳು ಎದುರಾಗಲಿದೆ. ಅದರಲ್ಲಿ ಅಭೂತಪೂರ್ವ ಪ್ರದರ್ಶನ ನೀಡುವುದರತ್ತ ಗಮನ ಹರಿಸಬೇಕಿದೆ.ಸರಣಿಯಲ್ಲಿ ದಾಖಲೆಗಳ ಸುರಿಮಳೆ

ಈ ಸರಣಿಯುದ್ದಕ್ಕೂ ಹಲವು ದಾಖಲೆಗಳು ನಿರ್ಮಾಣವಾಯಿತು. ಶುಭ್‌ಮನ್‌ ಗಿಲ್‌, ಜೋ ರೂಟ್‌ ಮಹತ್ತರ ಮೈಗಲುಗಲ್ಲುಗಳನ್ನು ಸಾಧಿಸಿದರು. ರನ್‌, ಶತಕ, ವಿಕೆಟ್‌ ಮಾತ್ರವಲ್ಲದೇ ತಂಡಗಳಿಂದಲೂ ದಾಖಲೆಗಳು ಹರಿದುಬಂದವು.

09 - ಟೆಸ್ಟ್‌ ಸರಣಿಯೊಂದರಲ್ಲಿ ಅತಿ ಹೆಚ್ಚು ಆಟಗಾರರಿಂದ ತಲಾ 400+ ಸ್ಕೋರ್‌

21 - 2 ತಂಡಗಳಿಂದ ಒಟ್ಟು 21 ಶತಕ. ಸರಣಿಯೊಂದರಲ್ಲಿ ಇದು ಜಂಟಿ ಗರಿಷ್ಠ.

50 - ಒಟ್ಟು 50 ಅರ್ಧಶತಕ ದಾಖಲಾದವು. ಇದು ಸರಣಿಯೊಂದರಲ್ಲಿ ಜಂಟಿ ಗರಿಷ್ಠ

04 - ಗಿಲ್‌ 4 ಶತಕ. ಸರಣಿಯೊಂದರಲ್ಲಿ ಈ ಸಾಧನೆ ಮಾಡಿದ ವಿಶ್ವದ 3ನೇ ನಾಯಕ

06 - ಭಾರತ ಟೆಸ್ಟ್‌ ಪಂದ್ಯವೊಂದರಲ್ಲಿ ಮೊದಲ ಬಾರಿ ಒಂದಂಕಿ ರನ್‌ ಅಂತರದಲ್ಲಿ ಗೆದ್ದಿತು.

03 - ಇದೇ ಮೊದಲ ಬಾರಿ ಸರಣಿಯೊಂದಲ್ಲಿ ಭಾರತದ ಮೂವರು ತಲಾ 500+ ರನ್‌ ಗಳಿಸಿದರು.

02 - ಟೆಸ್ಟ್‌ನಲ್ಲಿ ಗರಿಷ್ಠ ರನ್‌ ಪಟ್ಟಿಯಲ್ಲಿ ಜೋ ರೂಟ್‌ 5ರಿಂದ 2ನೇ ಸ್ಥಾನಕ್ಕೇರಿದರು.

01 - ಗಿಲ್‌ 754 ರನ್‌. ಇದು ಭಾರತದ ನಾಯಕನಿಂದ ಟೆಸ್ಟ್‌ ಸರಣಿಯೊಂದರ ಗರಿಷ್ಠ ರನ್‌.