ಸಾರಾಂಶ
ಪ್ಯಾರಿಸ್: ಈ ಬಾರಿ ಒಲಿಂಪಿಕ್ಸ್‌ನ ಶೂಟಿಂಗ್‌ನಲ್ಲಿ 4ನೇ ಪದಕ ಗೆಲ್ಲುವ ಭಾರತದ ನಿರೀಕ್ಷೆ ಹುಸಿಯಾಗಿದೆ. ಸೋಮವಾರ ಶೂಟಿಂಗ್‌ನ ಸ್ಕೀಟ್ ಮಿಶ್ರ ತಂಡ ವಿಭಾಗದ ಕಂಚಿನ ಪದಕದ ಪಂದ್ಯದಲ್ಲಿ ಭಾರತದ ಮಹೇಶ್ವರಿ ಚೌವ್ಹಾಣ್ ಹಾಗೂ ಅನಂತ್‌ಜೀತ್ ನರೂಕ ಅವರು ಕಂಚಿನ ಪದಕ ಪಂದ್ಯದಲ್ಲಿ ಚೀನಾದ ಯಿಟಿಂಗ್ ಜಿಯಾಂಗ್ ಹಾಗೂ ಜಿಯಾನ್‌ಲಿನ್ ಲ್ಯು ಜೋಡಿ ವಿರುದ್ಧ ಸೋಲನುಭವಿಸಿದರು.
ಮಹೇಶ್ವರಿ ಹಾಗೂ ನರುಕಾ 43 ಶಾಟ್‌ಗಳನ್ನು ಮಾಡಿದರೆ, ಚೀನಾದ ಜೋಡಿ 44 ಯಶಸ್ವಿ ಶಾಟ್‌ಗಳೊಂದಿಗೆ ಕಂಚಿನ ಪದಕ ತನ್ನದಾಗಿಸಿಕೊಂಡಿತು. ಮಹೇಶ್ವರಿ 24 ಶಾಟ್‌ಗಳ ಪೈಕಿ 21ರಲ್ಲಿ ಯಶಸ್ಸು ಸಾಧಿಸಿದರೆ, ಅನಂತ್‌ಜೀತ್ 24ರಲ್ಲಿ 2 ಶಾಟ್‌ಗಳನ್ನು ತಪ್ಪಿಸಿಕೊಂಡರು. ಇದಕ್ಕೂ ಮುನ್ನ ಅರ್ಹತಾ ಸುತ್ತಿನಲ್ಲಿ ಭಾರತದ ಜೋಡಿ 4ನೇ ಸ್ಥಾನ ಪಡೆದುಕೊಂಡಿತ್ತು.
ಶೂಟಿಂಗಲ್ಲಿ ಭಾರತದ ಅಭಿಯಾನ ಮುಕ್ತಾಯ
ಸೋಮವಾರದ ಸ್ಪರ್ಧೆಯೊಂದಿಗೆ ಕ್ರೀಡಾಕೂಟದಲ್ಲಿ ಭಾರತದ ಶೂಟಿಂಗ್ ಅಭಿಯಾನ ಅಂತ್ಯಗೊಂಡಿದೆ. ಭಾರತಕ್ಕೆ ಈ ಬಾರಿ ಲಭಿಸಿದ ಎಲ್ಲಾ 3 ಪದಕಗಳೂ ಶೂಟಿಂಗ್‌ನಲ್ಲೇ ಬಂದಿರುವುದು ವಿಶೇಷ. 10 ಮೀ. ಏರ್ ರೈಫಲ್ ವೈಯಕ್ತಿಕ ವಿಭಾಗದಲ್ಲಿ ಕಂಚು ಗೆದ್ದಿದ್ದ ಮನು ಭಾಕರ್, ತಂಡ ವಿಭಾಗದಲ್ಲಿ ಸರಬ್ಜೋತ್ ಜೊತೆಗೂಡಿ ಮತ್ತೊಂದು ಕಂಚು ತಮ್ಮದಾಗಿಸಿಕೊಂಡಿದ್ದರು. ಬಳಿಕ ಸ್ವಪ್ನಿಲ್ ಕುಸಾಲೆ 50 ಮೀ. ರೈಫಲ್ 3 ಪೊಸಿಷನ್‌ನಲ್ಲಿ ಕಂಚು ಜಯಿಸಿದ್ದರು.