90 ವರ್ಷಗಳಿಂದಲೂ ವಿಶ್ವದೆಲ್ಲೆಡೆ ಥ್ರೋಬಾಲ್‌ ಆಟ : ಒಲಿಂಪಿಕ್ಸ್‌ಗೆ ಸೇರ್ಪಡೆಗೆ ಪಣತೊಟ್ಟ ಐಟಿಎಫ್‌

| N/A | Published : Mar 02 2025, 01:15 AM IST / Updated: Mar 02 2025, 04:11 AM IST

ಸಾರಾಂಶ

90 ವರ್ಷಗಳಿಂದಲೂ ವಿಶ್ವದೆಲ್ಲೆಡೆ ಥ್ರೋಬಾಲ್‌ ಆಟ. ಸದ್ಯ ಭಾರತ, ಅಮೆರಿಕ ಸೇರಿ 52 ದೇಶಗಳಲ್ಲಿ ಸ್ಪರ್ಧೆ ಆಯೋಜನೆ.ಒಲಿಂಪಿಕ್ಸ್‌, ಕಾಮನ್‌ವೆಲ್ತ್‌ ಗೇಮ್ಸ್‌, ಏಷ್ಯಾಡ್‌ನಲ್ಲೂ ಥ್ರೋಬಾಲ್‌ ಸೇರ್ಪಡೆಗೊಳಿಸಲು ವಿಶ್ವ ಥ್ರೋಬಾಲ್‌ ಫೆಡರೇಶನ್‌ ಪ್ರಯತ್ನ.

ನಾಸಿರ್‌ ಸಜಿಪ 

 ಬೆಂಗಳೂರು : 90ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ, ವಿಶ್ವದಾದ್ಯಂತ 50ಕ್ಕೂ ಹೆಚ್ಚಿನ ದೇಶಗಳಲ್ಲಿ ಆಡುತ್ತಿರುವ ಥ್ರೋಬಾಲ್‌ ಸ್ಪರ್ಧೆಯನ್ನು ಜಾಗತಿಕ ಮಟ್ಟದ ಪ್ರತಿಷ್ಠಿತ ಕ್ರೀಡಾಕೂಟವಾಗಿರುವ ಒಲಿಂಪಿಕ್ಸ್‌ಗೆ ಸೇರ್ಪಡೆಗೊಳಿಸುವ ಪ್ರಯತ್ನ ನಡೆಯುತ್ತಿದೆ. 

ಇದಕ್ಕಾಗಿ ಅಂತಾರಾಷ್ಟ್ರೀಯ ಥ್ರೋಬಾಲ್‌ ಫೆಡರೇಷನ್‌(ಐಟಿಎಫ್‌) ಸತತವಾಗಿ ಶ್ರಮಿಸುತ್ತಿದ್ದು, ಜಗತ್ತಿನ ಎಲ್ಲಾ ಖಂಡಗಳಿಗೂ ಹರಡಿರುವ ಥ್ರೋಬಾಲ್ ಸ್ಪರ್ಧೆಯನ್ನು ಮುಂದಿನ ಕೆಲ ವರ್ಷಗಳಲ್ಲೇ ಒಲಿಂಪಿಕ್ಸ್‌ನಲ್ಲೂ ಆಡಿಸಲು ಪಣ ತೊಟ್ಟಿದೆ.1930ರ ವೇಳೆಗೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ನಲ್ಲಿ ಆಡಲು ಆರಂಭಿಸಿದ್ದ ಥ್ರೋಬಾಲ್‌ ಈಗ ಭಾರತ, ಚೀನಾ, ಪಾಕಿಸ್ತಾನ, ಇಟಲಿ, ಫ್ರಾನ್ಸ್‌, ಕತಾರ್‌, ಸ್ಪೇನ್‌, ಸೆನೆಗಲ್‌, ಆಸ್ಟ್ರೇಲಿಯಾ, ಅಮೆರಿಕ, ಬ್ರೆಜಿಲ್‌ ಪೋರ್ಚುಗಲ್‌, ಸೌದಿ ಅರೇಬಿಯಾ, ಸ್ವಿಜರ್‌ಲೆಂಡ್‌ ಸೇರಿದಂತೆ ಒಟ್ಟು 52 ದೇಶಗಳಿಗೆ ಹರಡಿವೆ. ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಕ್ಕರೂ ಪ್ರಮುಖ ಕ್ರೀಡಾಕೂಟಗಳಿಗೆ ಥ್ರೋಬಾಲ್‌ ಸೇರ್ಪಡೆಗೊಂಡಿಲ್ಲ.

 ಆದರೆ ಪ್ರಯತ್ನ ಮುಂದುವರಿದಿದೆ.ಈ ಬಗ್ಗೆ ಐಟಿಎಫ್‌ನ ಸಹಾಯಕ ಕಾರ್ಯದರ್ಶಿ, ಕರ್ನಾಟಕದ ಸಂಪೂರ್ಣಾ ಹೆಗಡೆ ‘ಕನ್ನಡಪ್ರಭ’ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ. ‘ಥ್ರೋಬಾಲ್‌ ಈಗ ಜಾಗತಿಕ ಮಟ್ಟದ ಕ್ರೀಡೆ. 90 ವರ್ಷದ ಇತಿಹಾಸವಿದೆ. ದೈಹಿಕವಾಗಿ ಫಿಟ್‌ ಇರುವುದರ ಜೊತೆಗೆ ವೈಜ್ಞಾನಿಕ, ಶೈಕ್ಷಣಿಕವಾಗಿಯೂ ಥ್ರೋಬಾಲ್‌ ಇತರೆಲ್ಲಾ ಕ್ರೀಡೆಗಳಿಗಿಂತ ವಿಭಿನ್ನ. ಒಲಿಂಪಿಕ್ಸ್‌ಗೆ ಸೇರ್ಪಡೆಗೊಳಿಸಬೇಕೆಂಬುದು ಐಟಿಎಫ್‌ ಗುರಿ. ಖಂಡಿತಾ ಯಶಸ್ಸು ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಈ ವರೆಗೂ ಒಟ್ಟು 16 ದೇಶಗಳಲ್ಲಿ 56 ಅಂತಾರಾಷ್ಟ್ರೀಯ ಮಟ್ಟದ ಥ್ರೋಬಾಲ್‌ ಸ್ಪರ್ಧೆಗಳು ನಡೆದಿವೆ. 6 ಬಾರಿ ಏಷ್ಯನ್‌ ಚಾಂಪಿಯನ್‌ಶಿಪ್‌ ಕೂಡಾ ಆಯೋಜನೆಗೊಂಡಿವೆ.

 ಭಾರತ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ನಿರಂತರವಾಗಿ ರಾಷ್ಟ್ರೀಯ ಕೂಟಗಳು ನಡೆಯುತ್ತಿವೆ. ಐಟಿಎಫ್‌ನ ಪ್ರಧಾನ ಕಚೇರಿ ಬೆಂಗಳೂರಿನಲ್ಲೇ ಇದ್ದು, ಸಿಂಗಾಪುರದ ಅಬ್ದುಲ್‌ ಹಲೀಮ್‌ ಬಿನ್‌ ಖಾದರ್‌ ಮುಖ್ಯಸ್ಥರಾಗಿದ್ದಾರೆ. ಬೆಂಗಳೂರಿನ ಡಾ. ಟಿ.ರಾಮಣ್ಣ ಈಗ ಪ್ರಧಾನ ಕಾರ್ಯದರ್ಶಿ.‘1940ರಿಂದಲೂ ಭಾರತದಲ್ಲಿ ಥ್ರೋಬಾಲ್‌ ಆಡಲಾಗುತ್ತಿದೆ. 1989ರಲ್ಲಿ ಮೊದಲ ಸಲ ಭಾರತದಲ್ಲಿ ವೃತ್ತಿಪರ ಥ್ರೋಬಾಲ್‌ ಆರಂಭಗೊಂಡಿತು. ಈ ವರೆಗೂ ದೇಶದಲ್ಲಿ 40ಕ್ಕೂ ಹೆಚ್ಚು ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳು ಆಯೋಜನೆಗೊಂಡಿವೆ. ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಲು ಒಟ್ಟು ಕ್ರೀಡೆಯನ್ನು 60 ದೇಶಗಳಲ್ಲಿ ಆಡಬೇಕು. ಸದ್ಯ 52 ದೇಶಗಳು ಥ್ರೋಬಾಲ್‌ ಆಡುತ್ತಿವೆ. ಕೆಲ ವರ್ಷಗಳಲ್ಲೇ 60ಕ್ಕೂ ಹೆಚ್ಚು ದೇಶಗಳಲ್ಲಿ ಥ್ರೋಬಾಲ್ ಆಡುವಂತೆ ಮಾಡಿ, ಒಲಿಂಪಿಕ್ಸ್‌ ಅರ್ಹತೆ ಪಡೆದುಕೊಳ್ಳಲಿದ್ದೇವೆ’ ಎಂದು ಸಂಪೂರ್ಣಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಥ್ರೋಬಾಲ್‌ ವೈಜ್ಞಾನಿಕ ಕ್ರೀಡೆ

‘ಥ್ರೋಬಾಲ್‌ ಎಂಬುದು ವೈಜ್ಞಾನಿಕ ಕ್ರೀಡೆ. ಈ ಕ್ರೀಡೆ ಜನರಿಗೆ ಔಷಧ ಇದ್ದಂತೆ. ಥ್ರೋಬಾಲ್‌ ಆಡುವುದರಿಂದ ದೇಹದ ಎಲ್ಲಾ ಅಂಗಾಂಗಗಳಿಗೂ ರಕ್ತ ಪರಿಚಲನೆ ಸುಲಭವಾಗುತ್ತದೆ. ಮೆದುಳಿಗೂ ಕೈಗೂ ನೇರ ಸಂಪರ್ಕ ಇರುವುದರಿಂದ ಥ್ರೋಬಾಲ್‌ ಆಟ ದೇಹಕ್ಕೆ ಅತ್ಯುತ್ತಮ’ ಎಂಬುದು ಸಂಪೂರ್ಣಾ ಹೆಗಡೆ ಅಭಿಮತ. ಅಲ್ಲದೆ, ರೋಗಿಗಳಿಗೂ ಥ್ರೋಬಾಲ್‌ ಆಡಿಸಿ ಅವರದಲ್ಲಿ ಬದಲಾವಣೆ ತರಲು ಸಾಧ್ಯವಾಗಿದೆ ಎಂದು ಸಂಪೂರ್ಣಾ ಅವರು ಹೇಳುತ್ತಾರೆ. 

ಥ್ರೋಬಾಲ್‌ ಬಗ್ಗೆ ವೈಜ್ಞಾನಿಕ ಸಂಶೋಧನೆಗಾಗಿ ವೈದ್ಯರ ಬಳಿ ತೆರಳಿದ್ದ ಐಟಿಎಫ್‌ ಸದಸ್ಯರು, ರೋಗಿಗಳಿಗೆ ಥ್ರೋಬಾಲ್‌ ಆಡಿಸಿದ್ದಾರೆ. ಕಿಡ್ನಿ, ಡಯಾಬಿಟಿಸ್‌, ರಕ್ತದೊತ್ತಡ, ನಿದ್ರಾಹೀನತೆ ಸೇರಿ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದ ರೋಗಿಗಳ ಆರೋಗ್ಯ ಥ್ರೋಬಾಲ್‌ ಆಡಿದ ಬಳಿಕ ಸುಧಾರಿಸಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರಲ್ಲೂ ಥ್ರೋಬಾಲ್‌ ಪರಿಣಾಮ ಬೀರಿದೆ ಎಂದು ಸಂಪೂರ್ಣಾ ಅವರು ವಿವರಿಸಿದ್ದಾರೆ.

ಥ್ರೋಬಾಲ್‌ ಆಡಿ, ಶಾಲೆಯಲ್ಲಿ ಹೆಚ್ಚು ಅಂಕ ಗಳಿಸಿ: ಸಂಪೂರ್ಣಾ

ಕ್ರೀಡೆಗೆ ಬಂದರೆ ಮಕ್ಕಳು ಕಲಿಕೆಯಲ್ಲಿ ಹಿಂದೆ ಬೀಳುತ್ತಾರೆ ಎಂಬ ನಂಬಿಕೆಯಿದೆ. ಆದರೆ ಇದನ್ನು ಥ್ರೋಬಾಲ್‌ ಮೂಲಕ ಉಲ್ಟಾ ಮಾಡುತ್ತಿದ್ದೇವೆ ಎಂಬುದು ಸಂಪೂರ್ಣಾ ಹೆಗಡೆ ನಂಬಿಕೆ. ಇದಕ್ಕೆ ಉದಾಹರಣೆಯನ್ನೂ ಅವರು ಕೊಟ್ಟಿದ್ದಾರೆ. ‘ಸಿದ್ದಾಪುರದ ಸಿದ್ಧಿವಿನಾಯಕ, ಯಲ್ಲಾಪುರದ ವಿಶ್ವದರ್ಶನ ಶಾಲಾ ಮಕ್ಕಳಲ್ಲಿ ನಾವು ಥ್ರೋಬಾಲ್‌ ಪ್ರಯೋಗ ಮಾಡಿದ್ದೇವೆ. ಅಲ್ಲಿನ ಮಕ್ಕಳಿಗೆ 20 ದಿನ ಥ್ರೋಬಾಲ್‌ ತರಬೇತಿ ಕೊಟ್ಟಿದ್ದೇವೆ. ಥ್ರೋಬಾಲ್‌ ಆಡುವುದಕ್ಕಿಂತ ಮೊದಲು ಮತ್ತು ನಂತರದ ಅಂಕಗಳಿಗೆ ಹೋಲಿಕೆ ಮಾಡಿದಾಗ, ಥ್ರೋಬಾಲ್‌ ಆಡಿದ ಶೇ.86ರಷ್ಟು ಮಕ್ಕಳು ಹೆಚ್ಚಿನ ಅಂಕ ಗಳಿಸಿದ್ದಾರೆ. ಇದು ಮಕ್ಕಳ ಮೆದುಳು ಥ್ರೋಬಾಲ್‌ನಿಂದ ಚುರುಕಾಗುತ್ತೆ ಎಂಬುದಕ್ಕೆ ಸಾಕ್ಷಿ’ ಎಂದು ಸಂಪೂರ್ಣಾ ಅವರು ಹೇಳಿದ್ದಾರೆ.

ಥ್ರೋಬಾಲ್‌ ಆಡಲು ವಿಶ್ವದ ಹಲವು ದೇಶಗಳು ಉತ್ಸುಕ

ಇತ್ತೀಚೆಗಷ್ಟೇ ಸೆನೆಗಲ್‌ನಲ್ಲಿ ನಡೆದ ಕ್ರೀಡಾ ಸಮ್ಮೇಳನದಲ್ಲಿ ಸಂಪೂರ್ಣಾ ಹೆಗಡೆ ಸೇರಿದಂತೆ ಐಟಿಎಫ್‌ ಸದಸ್ಯರು ಪಾಲ್ಗೊಂಡಿದ್ದರು. ಒಲಿಂಪಿಕ್ಸ್‌ ಸಮಿತಿ, ವಿವಿಧ ದೇಶಗಳ ಒಲಿಂಪಿಕ್‌ ಫೆಡರೇಷನ್‌ ಸದಸ್ಯರು, ಹಲವು ಒಲಿಂಪಿಯನ್‌ಗಳು ಸಮ್ಮೇಳನದಲ್ಲಿ ಹಾಜರಾಗಿದ್ದರು. ಇದರಲ್ಲಿ ಥ್ರೋಬಾಲ್‌ ಆಟದ ಬಗ್ಗೆಯೂ ವಿವಿಧ ದೇಶಗಳ ಪ್ರತಿನಿಧಿಗಳಿಗೆ ಮಾದರಿ ತೋರಿಸಿದ್ದಾರೆ. ಇದಕ್ಕೆ ಹಲವು ದೇಶಗಳು ಮೆಚ್ಚುಗೆ ಸೂಚಿಸಿದ್ದು, ತಮ್ಮ ದೇಶಗಳಲ್ಲಿಯೂ ಥ್ರೋಬಾಲ್‌ ಆಡಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಇದು ಒಲಿಂಪಿಕ್ಸ್‌, ಕಾಮನ್‌ವೆಲ್ತ್‌ ಗೇಮ್ಸ್‌, ಏಷ್ಯನ್‌ ಗೇಮ್ಸ್‌ನಲ್ಲಿ ಥ್ರೋಬಾಲ್‌ ಸೇರ್ಪಡೆಗೊಳಿಸುವ ನಮ್ಮ ಪ್ರಯತ್ನಕ್ಕೆ ಸಿಕ್ಕ ಮೊದಲ ಯಶಸ್ಸು ಎಂಬುದು ಸಂಪೂರ್ಣಾ ಹೆಗಡೆ ಅವರ ಅನಿಸಿಕೆ.

ವಿಶ್ವ, ಏಷ್ಯಾ, ಭಾರತ ಥ್ರೋಬಾಲ್‌ ಒಕ್ಕೂಟ ಸ್ಥಾಪಕ ಕನ್ನಡಿಗ ರಾಮಣ್ಣ

ಭಾರತ ಮಾತ್ರವಲ್ಲದೇ ವಿಶ್ವದಲ್ಲೇ ಥ್ರೋಬಾಲ್‌ ಯಶಸ್ಸಿನ ಹಿಂದಿರುವ ಶಕ್ತಿ ಬೆಂಗಳೂರಿನ ಡಾ. ಟಿ.ರಾಮಣ್ಣ. 1989ರಲ್ಲಿ ಭಾರತ ಥ್ರೋಬಾಲ್‌ ಫೆಡರೇಷನ್‌ ಸ್ಥಾಪಿಸಿದ್ದ ರಾಮಣ್ಣ ಅವರು, 1996ರಲ್ಲಿ ಏಷ್ಯಾ ಥ್ರೋಬಾಲ್‌, 2008ರಲ್ಲಿ ವಿಶ್ವ ಥ್ರೋಬಾಲ್‌ ಫೆಡರೇಷನ್‌ ಸ್ಥಾಪನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ. ಸದ್ಯ ಅವರು ವಿಶ್ವ ಥ್ರೋಬಾಲ್‌ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.