ಸಾರಾಂಶ
ಬೆಂಗಳೂರು : 1972ರಲ್ಲಿ ನಿರ್ಮಾಣಗೊಂಡ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಇಂದು ಕರ್ನಾಟಕದ ಹೆಗ್ಗುರುತು. ಆದರೆ ಈ ಕ್ರೀಡಾಂಗಣ ನಿರ್ಮಾಣದ ಹಿಂದೆ ಹಲವು ಕುತೂಹಲಕಾರಿ ಸಂಗತಿಗಳಿವೆ.
ಬೆಂಗಳೂರಿನಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) 2 ದಶಕಗಳ ಕಾಲ ಅವಿರತ ಶ್ರಮಪಟ್ಟಿದೆ. 1953ರಲ್ಲಿ ಕೆಎಸ್‌ಸಿಎ ಅಧ್ಯಕ್ಷರಾಗಿ ಶ್ರೀನಿವಾಸನ್, ಕಾರ್ಯದರ್ಶಿಯಾಗಿ ಚಿನ್ನಸ್ವಾಮಿ ನೇಮಕಗೊಂಡ ಬಳಿಕ ಇಬ್ಬರೂ ಕ್ರೀಡಾಂಗಣಕ್ಕಾಗಿ ಸರ್ಕಾರಿ ಕಚೇರಿಗಳನ್ನು ಅಲೆದಾಡಿದ್ದಾರೆ. ಮೊದಲು ಶೇಷಾದ್ರಿಪುರಂ, ಬಳಿಕ ಶುಭಾಷ್‌ನಗರದಲ್ಲಿ ಕ್ರೀಡಾಂಗಣಕ್ಕೆ ಸರ್ಕಾರ ಜಾಗ ನೀಡಿತ್ತು. ಅದನ್ನು ಚಿನ್ನಸ್ವಾಮಿ ಅವರು ತಿರಸ್ಕರಿಸಿ, ಎಂಜಿ ರೋಡ್ ಹಾಗೂ ಕಬ್ಬನ್ ಪಾರ್ಕ್ ಬಳಿ ಜಾಗ ಕೇಳಿದ್ದರು.
ಆದರೆ ಬೆಂಗಳೂರು ಸಿಟಿ ಕಾರ್ಪೊರೇಶನ್‌ಗೆ ಒಳಪಟ್ಟಿದ್ದ ಆ ಜಾಗದಲ್ಲಿ ಅಂದಿನ ಪ್ರಧಾನಿ ಜವಹರಲಾಲ್ ನೆಹರೂ ಅವರು ಕ್ಯಾನ್ಸರ್ ಆಸ್ಪತ್ರೆಗೆ ಶಿಲಾನ್ಯಾಸ ಮಾಡಿದ್ದರು.
ಪಟ್ಟುಬಿಡದ ಚಿನ್ನಸ್ವಾಮಿ, ಶ್ರೀನಿವಾಸನ್ ಅವರು ದೆಹಲಿಗೂ ತೆರಳಿ, ಜಾಗವನ್ನು ಕ್ರೀಡಾಂಗಣಕ್ಕೆಂದು 99 ವರ್ಷಕ್ಕೆ ಲೀಸ್‌ಗೆ ಪಡೆಯಲು ಶಸಸ್ವಿಯಾಗಿದ್ದರು.ಇನ್ನು, ಕ್ರೀಡಾಂಗಣ ಪಿಚ್ ನಿರ್ಮಾಣ ಹೊಣೆ ಕೃಷಿ ತಜ್ಞ, ಕ್ರಿಕೆಟಿಗರೂ ಆಗಿದ್ದ ಜಿ.ಕಸ್ತೂರಿ ರಂಗನ್ ಅವರಿಗೆ ನೀಡಲಾಗಿತ್ತು. ಗುಡ್ಡವಾಗಿದ್ದ ಜಾಗ ಸಮತಟ್ಟು ಮಾಡಿ ಕ್ರೀಡಾಂಗಣ ನಿರ್ಮಿಸಲು 100ರಷ್ಟು ಕಾರ್ಮಿಕರು 6 ತಿಂಗಳ ಕಾಲ ಕೆಲಸ ಮಾಡಿದ್ದರು. ಕಾರ್ಮಿಕರಿಗೆ ವೇತನ ನೀಡಲ ಕಷ್ಟವಾದಾಗ, ಕಸ್ತೂರಿ ರಂಗನ್ ಅವರೇ ತಮ್ಮ ಉಳಿತಾಯದ ಹಣದಲ್ಲಿ ವೇತನ ನೀಡಿದ್ದರು ಎಂಬುದು ತಿಳಿದುಬಂದಿದೆ.