ಕ್ರಿಕೆಟ್, ಕಬಡ್ಡಿ, ಬ್ಯಾಡ್ಮಿಂಟನ್‌, ಬಾಕ್ಸಿಂಗ್‌, ವೇಟ್‌ಲಿಫ್ಟಿಂಗ್‌, ಕುಸ್ತಿ, ಶೂಟಿಂಗ್‌ ಸೇರಿ ಹಲವು ಕ್ರೀಡೆಗಳನ್ನು 2030ರಲ್ಲಿ ಮರು ಸೇರ್ಪಡೆಗೊಳಿಸಲು ನಿರ್ಧರಿಸಲಾಗಿದೆ.

ನವದೆಹಲಿ : 2030ರ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಭಾರತ ಬಿಡ್‌ ಸಲ್ಲಿಸಲು ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ಒಪ್ಪಿಗೆ ಸೂಚಿಸಿದೆ.

ಐಒಎ ವಿಶೇಷ ಸಾಮಾನ್ಯ ಸಭೆ ಬುಧವಾರ ನಡೆಯಿತು. ಈಗಾಗಲೇ 2030ರ ಗೇಮ್ಸ್‌ ಆತಿಥ್ಯಕ್ಕೆ ಆಸಕ್ತಿ ತೋರಿ ಪತ್ರ ಸಲ್ಲಿಸಿದ್ದ ಭಾರತ, ಶೀಘ್ರದಲ್ಲೇ ಅಧಿಕೃತವಾಗಿ ಬಿಡ್‌ ಸಲ್ಲಿಸಲಿದೆ. ಬಿಡ್‌ ಸಲ್ಲಿಕೆಗೆ ಆ.31 ಕಡೆಯ ದಿನ. ರೇಸ್‌ನಲ್ಲಿದ್ದ ಕೆನಡಾ ಸ್ಪರ್ಧೆಯಿಂದ ಹಿಂದೆ ಸರಿದಿರುವುದರಿಂದ ಭಾರತಕ್ಕೆ ಆಯೋಜನೆ ಸಿಗುವ ಸಾಧ್ಯತೆ ಹೆಚ್ಚಿದೆ.

ಗೇಮ್ಸ್‌ ಅಹಮದಾಬಾದ್‌ನಲ್ಲಿ ಆಯೋಜಿಸುವ ಬಗ್ಗೆ ಅಸೋಸಿಯೇಷನ್ ಚಿಂತನೆ ನಡೆಸಿದೆ. ಅದರ ಜೊತೆಗೆ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಒಡಿಶಾದ ರಾಜಧಾನಿ ಭುವನೇಶ್ವರ ಕೂಡ ರೇಸ್‌ನಲ್ಲಿದೆ. ಇನ್ನು, ಆರ್ಥಿಕ ಹೊರೆ ತಗ್ಗಿಸುವ ಕಾರಣಕ್ಕೆ 2026ರ ಗ್ಲಾಸ್ಗೋ ಕಾಮನ್‌ವೆಲ್ತ್‌ ಗೇಮ್ಸ್‌ನಿಂದ ಕೈಬಿಡಲಾಗಿರುವ ಕ್ರಿಕೆಟ್, ಕಬಡ್ಡಿ, ಬ್ಯಾಡ್ಮಿಂಟನ್‌, ಬಾಕ್ಸಿಂಗ್‌, ವೇಟ್‌ಲಿಫ್ಟಿಂಗ್‌, ಕುಸ್ತಿ, ಶೂಟಿಂಗ್‌ ಸೇರಿ ಹಲವು ಕ್ರೀಡೆಗಳನ್ನು 2030ರಲ್ಲಿ ಮರು ಸೇರ್ಪಡೆಗೊಳಿಸಲು ನಿರ್ಧರಿಸಲಾಗಿದೆ. ಅಲ್ಲದೆ, ಕಬಡ್ಡಿ, ಯೋಗ, ಖೋ ಖೋ ಕ್ರೀಡೆಗಳನ್ನೂ ಆಡಿಸುವ ಬಗ್ಗೆ ಚರ್ಚೆ ನಡೆಯಿತು.ಈ ಬಗ್ಗೆ ಐಒಎ ಜಂಟಿ ಕಾರ್ಯದರ್ಶಿ ಕಲ್ಯಾಣ್‌ ಚೌಬೆ ಸುಳಿವು ನೀಡಿದ್ದು, ‘ಕುಸ್ತಿ, ಅರ್ಚರಿ, ಶೂಟಿಂಗ್‌ನಂತಹ ಪದಕ ಗೆಲ್ಲುವ ಕ್ರೀಡೆಗಳ ಜೊತೆಗೆ ನಮ್ಮ ಸಾಂಪ್ರದಾಯಿಕ ಆಟಗಳಾದ ಕಬಡ್ಡಿ, ಖೋ ಖೋ, ಯೋಗ ಕೂಡ ಸೇರಿಸಲಾಗುವುದು’ ಎಂದಿದ್ದಾರೆ.

ಈ ಬಗ್ಗೆ ಭಾರತೀಯ ಒಲಿಂಪಿಕ್ಸ್ ಆಯೋಗದ ಅಧ್ಯಕ್ಷೆ ಪಿ.ಟಿ. ಉಷಾ ಮಾತನಾಡಿದ್ದು, ‘ ಅಹಮದಾಬಾದ್‌ ಜೊತೆಗೆ ದೆಹಲಿ, ಭುವನೇಶ್ವರದಲ್ಲಿಯೂ ಆಯೋಜನೆ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಸ್ಥಳವನ್ನು ಖಚಿತಪಡಿಸುತ್ತೇವೆ. 2026ರಲ್ಲಿ ಗ್ಲಾಸ್ಗೋದಲ್ಲಿ ಕೆಲ ವಿಭಾಗಗಳನ್ನು ಕಡಿತಗೊಳಿಸಲಾಗಿದೆ. ಆದರೆ 2030ರ ಕಾಮನ್‌ವೆಲ್ತ್‌ ಗೇಮ್ಸ್‌ 2010ರ ರೀತಿಯೇ ಇರಲಿದೆ’ ಎಂದರು.