ಸಸ್ಪೆಂಡ್‌ ಆಗಿದ್ದ ಕುಸ್ತಿ ಸಂಸ್ಥೆಯ ನಿಯಂತ್ರಣಕ್ಕೆ ಸ್ವತಂತ್ರ ಸಮಿತಿ!

| Published : Dec 28 2023, 01:45 AM IST / Updated: Dec 28 2023, 12:09 PM IST

ಸಸ್ಪೆಂಡ್‌ ಆಗಿದ್ದ ಕುಸ್ತಿ ಸಂಸ್ಥೆಯ ನಿಯಂತ್ರಣಕ್ಕೆ ಸ್ವತಂತ್ರ ಸಮಿತಿ!
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯ ವುಶು ಸಂಸ್ಥೆ ಅಧ್ಯಕ್ಷ ಭೂಪಿಂದರ್‌ ಸಿಂಗ್‌ ಬಜ್ವಾ ಸಮಿತಿಯ ನೇತೃತ್ವ ವಹಿಸಲಿದ್ದು, ಒಲಿಂಪಿಕ್ಸ್‌ ಹಾಕಿಯಲ್ಲಿ ಚಿನ್ನ ಗೆದ್ದಿರುವ, ಕರ್ನಾಟಕದ ಎಂ.ಎಂ.ಸೋಮಯ್ಯ ಹಾಗೂ ಮಾಜಿ ಬ್ಯಾಡ್ಮಿಂಟನ್‌ ಪಟು ಮಂಜುಶಾ ಕನ್ವಾರ್‌ ಕೂಡಾ ಸಮಿತಿಯಲ್ಲಿದ್ದಾರೆ.

ನವದೆಹಲಿ: ದೇಶದ ಅಗ್ರ ಕುಸ್ತಿಪಟುಗಳ ಹೋರಾಟದ ಫಲವಾಗಿ ಇತ್ತೀಚೆಗಷ್ಟೇ ಕೇಂದ್ರ ಕ್ರೀಡಾ ಸಚಿವಾಲಯದಿಂದ ಅಮಾನತುಗೊಂಡಿದ್ದ ಭಾರತೀಯ ಕುಸ್ತಿ ಫೆಡರೇಷನ್‌(ಡಬ್ಲ್ಯುಎಫ್‌ಐ) ಮೇಲೆ ನಿಗಾ ಇಡಲು ಮತ್ತು ಆಡಳಿತ ನಡೆಸಲು ಭಾರತೀಯ ಒಲಿಂಪಿಕ್‌ ಸಂಸ್ಥೆ(ಐಒಎ)ಯು ಬುಧವಾರ ಸ್ವತಂತ್ರ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ. ಇದರೊಂದಿಗೆ 1 ವಾರದ ಅಂತರದಲ್ಲಿ ಕುಸ್ತಿ ಸಮಿತಿ ಆಡಳಿತ ಚುಕ್ಕಾಣಿ ಮತ್ತೆ ಸ್ವತಂತ್ರ ಸಮಿತಿ ತೆಕ್ಕೆಗೆ ಬಂದಿದೆ.

ಭಾರತೀಯ ವುಶು ಸಂಸ್ಥೆ ಅಧ್ಯಕ್ಷ ಭೂಪಿಂದರ್‌ ಸಿಂಗ್‌ ಬಜ್ವಾ ಸಮಿತಿಯ ನೇತೃತ್ವ ವಹಿಸಲಿದ್ದು, ಒಲಿಂಪಿಕ್ಸ್‌ ಹಾಕಿಯಲ್ಲಿ ಚಿನ್ನ ಗೆದ್ದಿರುವ, ಕರ್ನಾಟಕದ ಎಂ.ಎಂ.ಸೋಮಯ್ಯ ಹಾಗೂ ಮಾಜಿ ಬ್ಯಾಡ್ಮಿಂಟನ್‌ ಪಟು ಮಂಜುಶಾ ಕನ್ವಾರ್‌ ಕೂಡಾ ಸಮಿತಿಯಲ್ಲಿದ್ದಾರೆ. ಕಳೆದ ಜನವರಿಯಲ್ಲಿ ಕುಸ್ತಿಪಟುಗಳು ಆಗಿನ ಅಧ್ಯಕ್ಷ ಬ್ರಿಜ್‌ಭೂಷಣ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ ಪ್ರತಿಭಟನೆ ಆರಂಭಿಸಿದ ಬಳಿಕ ಕೆಲ ದಿನಗಳಲ್ಲೇ ಡಬ್ಲ್ಯುಎಫ್‌ಐನ ಅಮಾನತುಗೊಳಿಸಿ, ಸ್ವತಂತ್ರ ಸಮಿತಿಯನ್ನು ರಚಿಸಲಾಗಿತ್ತು. ಕಳೆದ ಗುರುವಾರ ಚುನಾವಣೆ ನಡೆದು, ಬ್ರಿಜ್‌ ಆಪ್ತ ಸಂಜಯ್‌ ಸಿಂಗ್‌ ನೇತೃತ್ವದ ಸಮಿತಿ ಅಧಿಕಾರಕ್ಕೇರಿತ್ತು. ಆದರೆ ಕ್ರೀಡಾ ನಿಯಮ ಪಾಲಿಸಿಲ್ಲ ಹಾಗೂ ಸಮಿತಿಯು ಸಂಪೂರ್ಣವಾಗಿ ಹಿಂದಿನ ಸಮಿತಿಯ ಪದಾಧಿಕಾರಿಗಳ ನಿಯಂತ್ರಣದಲ್ಲಿದೆ ಎಂಬ ಕಾರಣ ನೀಡಿ ಸಚಿವಾಲಯ ಭಾನುವಾರ ಸಮಿತಿಯನ್ನೇ ಅಮಾನತುಗೊಳಿಸಿತ್ತು.

ಕುಸ್ತಿ ಚಟುವಟಿಕೆ

ಮತ್ತೆ ಸ್ಥಗಿತ ಭೀತಿ!ಕುಸ್ತಿ ಸಂಸ್ಥೆಗೆ ಹೊಸ ಸಮಿತಿ ಆಯ್ಕೆಯಾಗುವುದರೊಂದಿಗೆ ಕಳೆದೊಂದು ವರ್ಷ ಸ್ಥಗಿತಗೊಂಡಿದ್ದ ದೇಶದ ಕುಸ್ತಿ ಚಟುವಟಿಕೆ ಮತ್ತೆ ಆರಂಭಗೊಳ್ಳುವ ನಿರೀಕ್ಷೆಯಿತ್ತು. ಆದರೆ ಹೊಸ ಸಮಿತಿ ಅಧಿಕಾರ ಕಳೆದುಕೊಂಡು, ಡಬ್ಲ್ಯುಎಫ್‌ಐ ಮೇಲೆ ಸ್ವತಂತ್ರ ಸಮಿತಿ ನಿಯಂತ್ರಣ ಸಾಧಿಸಿದ ಹಿನ್ನೆಲೆಯಲ್ಲಿ ಕುಸ್ತಿ ಹಿಂದಿನಂತೆಯೇ ಸ್ಥಗಿತಗೊಳ್ಳುವ ಸಾಧ್ಯತೆ ಹೆಚ್ಚು. ಜೊತೆಗೆ ಶೀಘ್ರ ಆರಂಭದ ನಿರೀಕ್ಷೆಯಲ್ಲಿದ್ದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳು ಕೂಡಾ ಮುಂದೂಡಿಕೆಯಾಗಲಿವೆ.

-ಸಂಸ್ಥೆಯ ನಿರ್ಬಂಧ ತೆರವು ಸದ್ಯಕ್ಕಿಲ್ಲ?
ಚುನಾವಣೆ ನಡೆಸದ ಕಾರಣ ಭಾರತ ಕುಸ್ತಿ ಸಂಸ್ಥೆಯನ್ನು ಕಳೆದ ಆಗಸ್ಟ್‌ನಲ್ಲಿ ಜಾಗತಿಕ ಕುಸ್ತಿ ಮಂಡಳಿ(ಯುಡಬ್ಲ್ಯುಡಬ್ಲ್ಯು) ಅಮಾನತುಗೊಳಿಸಿತ್ತು. ಇತ್ತೀಚೆಗೆ ಡಬ್ಲ್ಯುಎಫ್‌ಐ ಸಮಿತಿ ಅಧಿಕಾರಿಕ್ಕೇರಿದ ಕಾರಣ ಸಂಸ್ಥೆ ಮೇಲಿನ ನಿರ್ಬಂಧ ತೆರವುಗೊಳ್ಳುವ ನಿರೀಕ್ಷೆ ಇತ್ತು. ಆದರೆ ಸಂಸ್ಥೆಗೆ ಸ್ವತಂತ್ರ ಸಮಿತಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ನಿರ್ಬಂಧ ತೆರವು ಮತ್ತಷ್ಟು ವಿಳಂಬಗೊಳ್ಳುವ ಸಾಧ್ಯತೆಯಿದೆ.