ರಾಜಸ್ಥಾನದ 2 ಪಂದ್ಯಗಳ ವೇಳೆ ಸ್ಟೇಡಿಯಂನಲ್ಲಿ ಶಂಕಿತ ಬುಕ್ಕಿಗಳು!

| Published : Apr 18 2024, 02:19 AM IST / Updated: Apr 18 2024, 04:24 AM IST

ಸಾರಾಂಶ

ಜೈಪುರದಲ್ಲಿ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರೆ, ಮುಂಬೈನಲ್ಲಿ ಪೊಲೀಸರು ಇಬ್ಬರನ್ನು ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದಾರೆ.

ಮುಂಬೈ: ಈ ಬಾರಿ ಐಪಿಎಲ್‌ನ ರಾಜಸ್ಥಾನ ರಾಯಲ್ಸ್‌ ತಂಡದ 2 ಪಂದ್ಯಗಳ ವೇಳೆ ಕ್ರೀಡಾಂಗಣಗಳಲ್ಲಿ ಶಂಕಿತ ಬುಕ್ಕಿಗಳು ಕಂಡುಬಂದಿದ್ದು, ಅವರನ್ನು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದ ಅಧಿಕಾರಿಗಳು ಮೈದಾನದಿಂದ ಹೊರಹಾಕಿದ್ದಾರೆ. 

ಬಿಸಿಸಿಐ ಅಧಿಕಾರಿಯೊಬ್ಬರ ಪ್ರಕಾರ, ಮಾ.28ರಂದು ಜೈಪುರಲ್ಲಿ ಡೆಲ್ಲಿ ವಿರುದ್ಧ ಹಾಗೂ ಏ.1ರಂದು ಮುಂಬೈನಲ್ಲಿ ಮುಂಬೈ ವಿರುದ್ಧದ ಪಂದ್ಯದ ವೇಳೆ ಶಂಕಿತ ಬುಕ್ಕಿಗಳು ಪತ್ತೆಯಾಗಿದ್ದಾರೆ. ಅವರನ್ನು ಅಧಿಕಾರಿಗಳು ಪೊಲೀಸರಿಗೆ ಒಪ್ಪಿಸಿದ್ದಾರೆ. ಜೈಪುರದಲ್ಲಿ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರೆ, ಮುಂಬೈನಲ್ಲಿ ಪೊಲೀಸರು ಇಬ್ಬರನ್ನು ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮ್ಯಾಚ್‌ ಫಿನಿಶಿಂಗ್‌ಗೆ ಕೊಹ್ಲಿ, ಧೋನಿಯೇ ಸ್ಫೂರ್ತಿ: ಬಟ್ಲರ್‌

ಕೋಲ್ಕತಾ: ಕೋಲ್ಕತಾ ವಿರುದ್ಧ ಸೋಲಿನ ಸಿಲುಕಿದ್ದರೂ ತಮ್ಮ ಹೋರಾಟದಿಂದಾಗಿ ರಾಜಸ್ಥಾನಕ್ಕೆ ಗೆಲುವು ತಂದುಕೊಟ್ಟ ಜೋಸ್‌ ಬಟ್ಲರ್‌, ‘ಕೊನೆವರೆಗೂ ಕ್ರೀಸ್‌ನಲ್ಲಿ ನೆಲೆಯೂರಿ ಪಂದ್ಯ ಗೆಲ್ಲಿಸಲು ಕೊಹ್ಲಿ, ಧೋನಿ ಸ್ಫೂರ್ತಿ’ ಎಂದು ಹೇಳಿದ್ದಾರೆ. 

ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ಅವರು, ‘ಧೋನಿ, ಕೊಹ್ಲಿ ಕೊನೆವರೆಗೂ ಕ್ರೀಸ್‌ನಲ್ಲಿ ನಿಂತು ಪಂದ್ಯ ಗೆಲ್ಲಿಸಿದ್ದನ್ನು ನೋಡಿದ್ದೇನೆ. ಅದನ್ನೇ ಈಗ ನಾನು ಮಾಡಿದ್ದೇನೆ. ಯಾವುದೇ ಕ್ಷಣದಲ್ಲೂ ಒತ್ತಡಕ್ಕೊಳಗಾಗದೆ ಕ್ರೀಸ್‌ನಲ್ಲಿ ನಿಲ್ಲುವುದು ಅನಿವಾರ್ಯ’ ಎಂದು ಹೇಳಿದ್ದಾರೆ.ಮಂಗಳವಾರದ ಪಂದ್ಯದಲ್ಲಿ 224 ರನ್‌ ಗುರಿ ಬೆನ್ನತ್ತಿದ್ದ ರಾಜಸ್ಥಾನ, 13ನೇ ಓವರಲ್ಲಿ 6 ವಿಕೆಟ್‌ಗೆ 121 ರನ್‌ ಗಳಿಸಿ ಸಂಕಷ್ಟದಲ್ಲಿತ್ತು. ಆದರೆ ಬಟ್ಲರ್‌ 60 ಎಸೆತಗಳಲ್ಲಿ ಔಟಾಗದೆ 107 ರನ್‌ ಸಿಡಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು.