ಐಪಿಎಲ್‌: ಈಡನ್‌ ಅಂಗಳದಲ್ಲಾದ್ರೂ ಗೆಲ್ಲುತ್ತಾ ಆರ್‌ಸಿಬಿ?

| Published : Apr 21 2024, 02:22 AM IST / Updated: Apr 21 2024, 04:10 AM IST

ಸಾರಾಂಶ

ಇಂದು ಈಡನ್‌ ಗಾರ್ಡನ್ಸ್‌ನಲ್ಲಿ ಕೋಲ್ಕತಾ ನೈಟ್‌ರೈಡರ್ಸ್‌ ವಿರುದ್ಧ ಸೆಣಸಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು. ಸತತ 5 ಪಂದ್ಯ ಸೋತಿರುವ ಆರ್‌ಸಿಬಿ. ವಿರಾಟ್‌ ಕೊಹ್ಲಿ ಮೇಲೆ ಭಾರಿ ನಿರೀಕ್ಷೆ.

ಕೋಲ್ಕತಾ: ಸತತ 5 ಸೋಲು, 7 ಪಂದ್ಯಗಳಿಂದ ಕೇವಲ 2 ಅಂಕ. ಇದು 17ನೇ ಐಪಿಎಲ್‌ನ ಮೊದಲ ಭಾಗದಲ್ಲಿ ಆರ್‌ಸಿಬಿಯ ಸಾಧನೆ. ಅಂಕಪಟ್ಟಿಯಲ್ಲಿ ಕೊನೆ ಸ್ಥಾನಕ್ಕೆ ಅಂಟಿಕೊಂಡಿರುವ ಆರ್‌ಸಿಬಿಗೆ ಭಾನುವಾರ ಬಲಿಷ್ಠ ಕೋಲ್ಕತಾ ನೈಟ್‌ರೈಡರ್ಸ್‌ ಸವಾಲು ಎದುರಾಗಲಿದ್ದು, ಟಿ20 ಕ್ರಿಕೆಟ್‌ನ ಜಾದೂಗಾರ ಸುನಿಲ್‌ ನರೈನ್‌ರ ಭಯವೂ ಕಾಡುತ್ತಿದೆ.

ಆರ್‌ಸಿಬಿ ವಿರುದ್ಧ ಉತ್ತಮ ದಾಖಲೆ ಹೊಂದಿರುವ ನರೈನ್‌, ಈ ಆವೃತ್ತಿಯ ಮೊದಲ ಮುಖಾಮುಖಿಯಲ್ಲೂ ಬೆಂಗಳೂರು ತಂಡವನ್ನು ಬಲವಾಗಿ ಕಾಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ನರೈನ್‌ರ ಅಬ್ಬರದ ಆಟ, ಕೆಕೆಆರ್‌ ಭರ್ಜರಿ ಗೆಲುವು ಸಾಧಿಸಲು ಕಾರಣವಾಗಿತ್ತು. ಆರ್‌ಸಿಬಿಯ ಸದ್ಯದ ಪರಿಸ್ಥಿತಿ ನೋಡಿದರೆ, ತಂಡ ಪುಟಿದೆದ್ದು ಪ್ಲೇ-ಆಫ್‌ ಪ್ರವೇಶಿಸುವುದು ಕಷ್ಟ ಸಾಧ್ಯ.

ಆರ್‌ಸಿಬಿ ವಿರಾಟ್‌ ಕೊಹ್ಲಿಯ ಮೇಲೆ ಅತಿಯಾಗಿ ಅವಲಂಬಿತಗೊಂಡಿದ್ದು, ದಿಗ್ಗಜ ಬ್ಯಾಟರ್‌ ಈಗಾಗಲೇ 361 ರನ್‌ ಕಲೆಹಾಕಿದ್ದಾರೆ. ಆರ್‌ಸಿಬಿ ಬ್ಯಾಟಿಂಗ್‌ ನಾಯಕ ಕೊಹ್ಲಿಯೇ ಆದರೂ ಕಳೆದ ಕೆಲ ವರ್ಷಗಳಿಂದ ಸ್ಪಿನ್‌ ಬೌಲಿಂಗ್‌ ಎದುರು ಕೊಹ್ಲಿ ರನ್‌ ಕಲೆಹಾಕಲು ಸ್ವಲ್ಪ ಕಷ್ಟಪಟ್ಟಿದ್ದಾರೆ. ಕೆಕೆಆರ್‌ ಈ ಪಂದ್ಯದಲ್ಲಿ ಮೂವರನ್ನು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಬಹುದು. ನರೈನ್‌ ಜೊತೆಗೆ ವರುಣ್‌ ಚಕ್ರವರ್ತಿ, ಸುಯಶ್‌ ಶರ್ಮಾ ಕೂಡ ಆರ್‌ಸಿಬಿ ಬ್ಯಾಟರ್‌ಗಳನ್ನು ಪರೀಕ್ಷಿಸಿದರೆ ಅಚ್ಚರಿಯಿಲ್ಲ.

ಫಾಫ್‌ ಡು ಪ್ಲೆಸಿ, ದಿನೇಶ್‌ ಕಾರ್ತಿಕ್‌ ತಮ್ಮ ಲಯ ಮುಂದುವರಿಸಬೇಕಿದ್ದು, ಉಳಿದ ಬ್ಯಾಟರ್‌ಗಳು ಇನ್ನಾದರೂ ಜವಾಬ್ದಾರಿ ಅರಿತು ಆಡಬೇಕಿದೆ.

ಮತ್ತೊಂದೆಡೆ ಕಳೆದ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಕೊನೆಯ ಎಸೆತದಲ್ಲಿ ಸೋಲುಂಡಿದ್ದ ಕೆಕೆಆರ್‌, ಆರ್‌ಸಿಬಿಯ ಕಳಪೆ ಲಯದ ಲಾಭವೆತ್ತಿ ಗೆಲುವಿನ ಹಳಿಗೆ ಮರಳಲು ಕಾತರಿಸುತ್ತಿದೆ.

ಕಳೆದ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ್ದ ನರೈನ್‌ ಮತ್ತೊಂದು ದೊಡ್ಡ ಸ್ಕೋರ್‌ನ ನಿರೀಕ್ಷೆಯಲ್ಲಿದ್ದು, ಫಿಲ್‌ ಸಾಲ್ಟ್‌, ಶ್ರೇಯಸ್‌ ಅಯ್ಯರ್‌, ಆ್ಯಂಡ್ರೆ ರಸೆಲ್‌, ರಿಂಕು ಸಿಂಗ್‌ರಂತಹ ‘ಸಿಕ್ಸ್‌ ಮಷಿನ್‌’ಗಳ ಆರ್ಭಟವನ್ನು ಆರ್‌ಸಿಬಿ ಬೌಲರ್‌ಗಳು ಹೇಗೆ ನಿಯಂತ್ರಿಸುತ್ತಾರೆ ಎನ್ನುವುದೇ ಕುತೂಹಲ. ಒಟ್ಟು ಮುಖಾಮುಖಿ: 33

ಆರ್‌ಸಿಬಿ: 14

ಕೆಕೆಆರ್‌: 19ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ಕೊಹ್ಲಿ, ಡು ಪ್ಲೆಸಿ(ನಾಯಕ), ಜ್ಯಾಕ್ಸ್‌, ಪಾಟೀದಾರ್‌, ಸೌರವ್‌, ಕಾರ್ತಿಕ್‌, ಲೊಮ್ರೊರ್‌, ರಾವತ್‌, ವೈಶಾಖ್‌, ಟಾಪ್ಲಿ, ಫರ್ಗ್ಯೂಸನ್‌, ಡಾಗರ್/ದಯಾಳ್‌.

ಕೆಕೆಆರ್‌: ಸಾಲ್ಟ್‌, ನರೈನ್‌, ರಘುವಂಶಿ, ಶ್ರೇಯಸ್‌(ನಾಯಕ), ವೆಂಕಿ ಅಯ್ಯರ್‌, ರಸೆಲ್‌, ರಿಂಕು ಸಿಂಗ್‌, ರಮಣ್‌ದೀಪ್‌, ಸ್ಟಾರ್ಕ್‌, ವರುಣ್‌, ಹರ್ಷಿತ್‌, ಸುಶಯ್‌/ವೈಭವ್‌.ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ