ಸಾರಾಂಶ
ಮುಂಬೈ: 17ನೇ ಆವೃತ್ತಿ ಐಪಿಎಲ್‌ನ ಆರಂಭಿಕ 10 ಪಂದ್ಯಗಳನ್ನು ಟಿವಿಯಲ್ಲಿ 35 ಕೋಟಿ ಮಂದಿ ವೀಕ್ಷಿಸಿದ್ದು, ಹೊಸ ದಾಖಲೆ ಎನಿಸಿಕೊಂಡಿದೆ. ಈ ಬಗ್ಗೆ ಟೂರ್ನಿಯ ಅಧಿಕೃತ ಪ್ರಸಾರಕರಾದ ಡಿಸ್ನಿ ಸ್ಟಾರ್ ಸಂಸ್ಥೆಯು ವರದಿ ಬಿಡುಗಡೆಗೊಳಿಸಿದೆ.
ಟೂರ್ನಿಯನ್ನು 8028 ಕೋಟಿ ನಿಮಿಷಗಳ ವೀಕ್ಷಿಸಲಾಗಿದ್ದು, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.20ರಷ್ಟು ಹೆಚ್ಚು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಬಾರಿ ಟೂರ್ನಿಯ ಉದ್ಘಾಟನಾ ಪಂದ್ಯವಾಗಿದ್ದ ಚೆನ್ನೈ ಹಾಗೂ ಆರ್‌ಸಿಬಿ ನಡುವಿನ ಸೆಣಸಾಟವನ್ನು 16.8 ಕೋಟಿ ಮಂದಿ ವೀಕ್ಷಿಸಿದ್ದಾಗಿ ಇತ್ತೀಚೆಗೆ ಸಂಸ್ಥೆಯು ತಿಳಿಸಿತ್ತು. ಡಿಸ್ನಿ ಸ್ಟಾರ್ ಸಂಸ್ಥೆಯು ಈ ಬಾರಿ 10 ಭಾಷೆಗಳಲ್ಲಿ ಪಂದ್ಯಗಳನ್ನು ಪ್ರಸಾರ ಮಾಡುತ್ತಿದೆ.
ಸ್ಟೇಡಿಯಂನಲ್ಲಿ ಹಾರ್ದಿಕ್‌ರ ಕಿಚಾಯಿಸಿದರೆ ಕಠಿಣ ಕ್ರಮ!
ನವದೆಹಲಿ: ಮುಂಬೈ ಇಂಡಿಯನ್ಸ್ ತಂಡದ ನೂತನ ನಾಯಕ ಹಾರ್ದಿಕ್ ಪಾಂಡ್ಯ ಅವರ ಬಗ್ಗೆ ಕ್ರೀಡಾಂಗಣಗಳಲ್ಲಿ ಅಭಿಮಾನಿಗಳು ಕಿಚಾಯಿಸುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಡೆಲ್ಲಿ ಕ್ರಿಕೆಟ್ ಸಂಸ್ಥೆ ಸೂಕ್ತ ಕ್ರಮದ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಸಂಸ್ಥೆಯ ಅಧ್ಯಕ್ಷ ರೋಹನ್ ಜೇಟ್ಲಿ ಮಾತನಾಡಿದ್ದು, ಕ್ರೀಡಾಂಗಣಗಳಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಕಿಚಾಯಿಸಿದರೆ, ಅಸಭ್ಯವಾಗಿ ವರ್ತಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದಿದ್ದಾರೆ.ರೋಹಿತ್ ಶರ್ಮಾ ಅವರಿಂದ ನಾಯಕತ್ವ ಪಡೆದು ಹಾರ್ದಿಕ್‌ಗೆ ನೀಡಿದ್ದಕ್ಕೆ ಮುಂಬೈ ತಂಡದ ಅಭಿಮಾನಿಗಳು ಆಕ್ರೋಶಿತರಾಗಿದ್ದು, ಪ್ರತಿ ಕ್ರೀಡಾಂಗಣಗಳಲ್ಲೂ ಹಾರ್ದಿಕ್‌ರನ್ನು ಕಿಚಾಯಿಸುತ್ತಿದ್ದಾರೆ.