ಸಾರಾಂಶ
ಮುಂಬೈ: ಐಪಿಎಲ್‌ನಲ್ಲಿ ಇಂಪ್ಯಾಕ್ಟ್ ಆಟಗಾರ ನಿಯಮವನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ ಅಷ್ಟೆ. ಆ ನಿಯಮವನ್ನು ಮುಂದೆ ಬಳಸುವ ಬಗ್ಗೆ ಮರುಪರಿಶೀಲನೆ ಮಾಡಬಹುದಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ. ‘ಇಂಪ್ಯಾಕ್ಟ್ ಆಟಗಾರ ನಿಯಮವನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಗಿದೆ. ಈ ನಿಯಮದಿಂದ ಆಗುತ್ತಿರುವ ಲಾಭವನ್ನು ಗಮನಿಸಿದಾಗ, ಇಬ್ಬರು ಹೆಚ್ಚುವರಿ ಭಾರತೀಯ ಆಟಗಾರರಿಗೆ ಆಡಲು ಅವಕಾಶ ಸಿಗುತ್ತಿದೆ. ಇದು ಮಹತ್ವದ ವಿಚಾರ ಅಲ್ಲವೇ’ ಎಂದು ಶಾ ಹೇಳಿದ್ದಾರೆ. ಇಂಪ್ಯಾಕ್ಟ್ ಆಟಗಾರ ನಿಯಮದಿಂದಾಗಿ ತಂಡಗಳಿಗೆ ಹೆಚ್ಚುವರಿ ನೆರವು ಸಿಗುತ್ತಿದ್ದು, ಈ ಐಪಿಎಲ್‌ನ ಹಲವು ಪಂದ್ಯಗಳಲ್ಲಿ 250ಕ್ಕೂ ಹೆಚ್ಚಿನ ಮೊತ್ತ ದಾಖಲಾಗಿದೆ. ಆಲ್ರೌಂಡರ್‌ಗಳಿಗೆ ಬೆಲೆಯೇ ಇಲ್ಲದಂತಾಗಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ, ತಾರಾ ಆಲ್ರೌಂಡರ್ ಆರ್.ಅಶ್ವಿನ್ ಸೇರಿ ಇನ್ನೂ ಅನೇಕರು ಆತಂಕ ವ್ಯಕ್ತಪಡಿಸಿದ್ದರು. ಈ ನಿಯಮವನ್ನು ರದ್ದುಗೊಳಿಸಬೇಕು ಎಂದು ಅನೇಕರು ಒತ್ತಾಯಿಸಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿರುವ ಶಾ. ‘ಆಟಗಾರರಿಗೆ ಈ ನಿಯಮದಿಂದ ಸಮಸ್ಯೆಯಾಗುತ್ತಿದೆ ಎಂದಾದರೆ, ಈ ಬಗ್ಗೆ ನಾವು ಚರ್ಚಿಸಲಿದ್ದೇವೆ. ಟಿ20 ವಿಶ್ವಕಪ್ ಮುಗಿದ ಬಳಿಕ ಆಟಗಾರರು, ತಂಡಗಳ ಮಾಲಿಕರು, ಪ್ರಸಾರಕರನ್ನು ಸಂಪರ್ಕಿಸಿ ಮಾಹಿತಿ ಪಡೆಯಲಿದ್ದು, ಮುಂದಿನ ಆವೃತ್ತಿಗಳಲ್ಲಿ ಈ ನಿಯಮವನ್ನು ಉಳಿಸಿಕೊಳ್ಳಬೇಕೇ ಎನ್ನುವುದನ್ನು ನಿರ್ಧರಿಸಲಿದ್ದೇವೆ’ ಎಂದು ಜಯ್ ಶಾ ಹೇಳಿದ್ದಾರೆ.