ನಿಲ್ಲದ ಮಳೆ : ಕರ್ನಾಟಕ vs ಕೇರಳ ರಣಜಿ ಪಂದ್ಯ ಮೊದಲ ಇನ್ನಿಂಗ್ಸ್‌ ಪೂರ್ಣವಾಗದೆ ನೀರಸ ಡ್ರಾ!

| Published : Oct 22 2024, 12:04 AM IST / Updated: Oct 22 2024, 04:17 AM IST

ಸಾರಾಂಶ

ಮೊದಲ ಇನ್ನಿಂಗ್ಸ್‌ ಪೂರ್ಣವಾಗದೆ ಡ್ರಾಗೊಂಡ ಪಂದ್ಯ. ಇತ್ತಂಡಕ್ಕೂ ತಲಾ ಒಂದಂಕ. ರಾಜ್ಯಕ್ಕೆ ಮತ್ತೆ ಹಿನ್ನಡೆ. ನಾಕೌಟ್‌ ಪ್ರವೇಶಿಸುವ ಕನಸಿಗೆ ಅಡ್ಡಿ

ಬೆಂಗಳೂರು: ಈ ಬಾರಿ ರಣಜಿ ಟ್ರೋಫಿ ದೇಸಿ ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ತಂಡದ ಸತತ 2ನೇ ಪಂದ್ಯವೂ ಡ್ರಾದಲ್ಲಿ ಅಂತ್ಯಗೊಂಡಿದೆ. ಇದರೊಂದಿಗೆ ಮಾಜಿ ಚಾಂಪಿಯನ್‌ ಕರ್ನಾಟಕದ ಕ್ವಾರ್ಟರ್‌ ಫೈನಲ್‌ಗೇರುವ ಕನಸಿಗೆ ಭಾರಿ ಹಿನ್ನಡೆ ಉಂಟಾಗಿದೆ.

 ನಗರದ ಹೊರವಲಯದ ಆಲೂರಿನಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಕರ್ನಾಟಕ ಹಾಗೂ ಕೇರಳ ನಡುವಿನ ಪಂದ್ಯ ಭಾರಿ ಮಳೆ ಹಾಗೂ ಒದ್ದೆ ಮೈದಾನದಿಂದಾಗಿ ಮೊದಲ ಇನ್ನಿಂಗ್ಸ್‌ ಕೂಡಾ ಮುಕ್ತಾಯಗೊಳ್ಳದೆ ಡ್ರಾಗೊಂಡಿತು. 

ಈ ಮೂಲಕ ಎರಡೂ ತಂಡಗಳು ತಲಾ ಒಂದು ಅಂಕ ಹಂಚಿಕೊಂಡವು. 4 ದಿನಗಳ ಪೈಕಿ ಬಹುತೇಕ ಮೂರೂವರೆ ದಿನಗಳ ಆಟವನ್ನು ಮಳೆ ಬಲಿ ತೆಗೆದುಕೊಂಡಿತು.ಮೊದಲ ದಿನ 23 ಹಾಗೂ 2ನೇ ದಿನ 27 ಓವರ್‌ ಆಟ ನಡೆದಿತ್ತು. ಕೇರಳ ತಂಡ 3 ವಿಕೆಟ್‌ಗೆ 161 ರನ್‌ ಗಳಿಸಿತ್ತು. 3ನೇ ದಿನ ಹೆಚ್ಚು ಮಳೆ ಇಲ್ಲದಿದ್ದರೂ ಮೈದಾನ ಸಂಪೂರ್ಣ ಒದ್ದೆಯಾಗಿದ್ದ ಕಾರಣ ಆಟ ನಡೆದಿರಲಿಲ್ಲ. 

ಕೊನೆ ದಿನವಾದ ಸೋಮವಾರ ಬೆಳಗ್ಗೆ ಮಳೆ ಸುರಿದ ಕಾರಣ ಮೈದಾನದಲ್ಲಿ ನೀರು ನಿಂತಿತ್ತು. ಹೀಗಾಗಿ ಪಂದ್ಯ ಪುನಾರಂಭಿಸಲು ಸಾಧ್ಯವಾಗಲಿಲ್ಲ. ಮಧ್ಯಾಹ್ನದ ವೇಳೆ ರೆಫ್ರಿಗಳು ಪಂದ್ಯ ಡ್ರಾ ಎಂದು ಘೋಷಿಸಿದರು.

ರಾಜ್ಯದ ನಾಕೌಟ್‌ ಕನಸಿಗೆ ಹಿನ್ನಡೆ

ಕರ್ನಾಟಕದ ಸತತ 2ನೇ ಪಂದ್ಯ ಡ್ರಾಗೊಂಡಿತು. ಹೀಗಾಗಿ ತಂಡ ಸದ್ಯ ಕೇವಲ 2 ಅಂಕ ಹೊಂದಿದ್ದು, ‘ಸಿ’ ಗುಂಪಿನಲ್ಲಿ 5ನೇ ಸ್ಥಾನದಲ್ಲಿದೆ. ತಂಡಕ್ಕೆ ಗುಂಪು ಹಂತದಲ್ಲಿ ಇನ್ನು 5 ಪಂದ್ಯಗಳು ಬಾಕಿಯಿದ್ದು, ಬಹುತೇಕ ಎಲ್ಲಾ ಪಂದ್ಯಗಳಲ್ಲೂ ತಂಡಕ್ಕೆ ಗೆಲುವು ಅಗತ್ಯ. 8 ತಂಡಗಳಿರುವ ಗುಂಪಿನ ಅಗ್ರ-2 ತಂಡಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿವೆ.

ಅ.26ರಿಂದ ಪಾಟ್ನಾದಲ್ಲಿ ಕರ್ನಾಟಕ vs ಬಿಹಾರ

ರಣಜಿ ಕ್ರಿಕೆಟ್‌ ತನ್ನ 3ನೇ ಪಂದ್ಯದಲ್ಲಿ ಕರ್ನಾಟಕ ತಂಡ ಅ.26ರಿಂದ ಬಿಹಾರ ವಿರುದ್ಧ ಸೆಣಸಾಡಲಿದೆ. ಪಂದ್ಯಕ್ಕೆ ಪಾಟ್ನಾ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಆರಂಭಿಕ ಪಂದ್ಯದಲ್ಲಿ ಹರ್ಯಾಣ ವಿರುದ್ಧ ಬಿಹಾರ ಇನ್ನಿಂಗ್ಸ್‌ ಸೋಲನುಭವಿಸಿತ್ತು. ಬೆಂಗಾಲ್‌ ವಿರುದ್ಧದ ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದುಗೊಂಡಿತ್ತು. ತಂಡ 2 ಪಂದ್ಯಗಳಲ್ಲಿ ಕೇವಲ ಒಂದು ಅಂಕ ಗಳಿಸಿದೆ.